ADVERTISEMENT

ಮೋದಿ ವಿರುದ್ಧ ಹೇಳಿಕೆ: ಮಾರ್ಗರೇಟ್ ಆಳ್ವಾಗೆ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 9:26 IST
Last Updated 16 ಏಪ್ರಿಲ್ 2019, 9:26 IST
   

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದೆ.

‘ಹುಬ್ಬಳ್ಳಿಯಲ್ಲಿ ಏ. 11ರಂದು ನಡೆದ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾರ್ಗರೇಟ್ ಆಳ್ವಾ ಅವರು ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು. ಸಪ್ತಪದಿ ತುಳಿದು ಮದುವೆಯಾದ ಪತ್ನಿಯನ್ನೇ ಕಾಯಲಿಲ್ಲ. ಇನ್ನು ದೇಶ ಕಾಯುವರೇ? ತಾನು ₹20ಲಕ್ಷ ಸೂಟು ತೊಟ್ಟು, ಪತ್ನಿಗೆ ನಯಾ ಪೈಸೆಯನ್ನೂ ನೀಡಿಲ್ಲ. ಅವರು ಶಿಕ್ಷಕಿಯಾಗಿ ಜೀವನ ಸಾಗಿಸುತ್ತಿದ್ದಾರೆ’ ಎಂದು ವೈಯಕ್ತಿಕ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಲೋಕೇಶ ಅಂಬೇಕಲ್ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಸೂಕ್ತ ಕ್ರಮ ಜರುಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತು. ಅದರ ಅನ್ವಯ ಆಳ್ವಾ ಅವರಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಡಳಿತ, ವೈಯಕ್ತಿ ಆರೋಪದ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದು, ಇದಕ್ಕಾಗಿ ತಮ್ಮ ವಿರುದ್ಧ ಏಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ವಿವರಣೆ ಕೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.