ADVERTISEMENT

ಮೈತ್ರಿಸರ್ಕಾರದ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ

‘ತಪ್ಪು ಮಾಡದಿದ್ದರೆ ಭಯವೇಕೆ?’

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 20:25 IST
Last Updated 13 ಏಪ್ರಿಲ್ 2019, 20:25 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ಬಿಲ್ಲು ಬಾಣ ನೀಡಿ ಸನ್ಮಾನಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥನಾರಾಯಣ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್‌ ಚಿತ್ರಲ್ಲಿದ್ದಾರೆ–ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ಬಿಲ್ಲು ಬಾಣ ನೀಡಿ ಸನ್ಮಾನಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥನಾರಾಯಣ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್‌ ಚಿತ್ರಲ್ಲಿದ್ದಾರೆ–ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.   

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ನಾಯಕರ ಧೋರಣೆಯನ್ನು ಕಟುವಾಗಿ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ತಪ್ಪು ಮಾಡದಿದ್ದರೆ ಐಟಿ ದಾಳಿಯ ಭಯ ಏಕೆ’ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಘಟಕದ ಆಶ್ರಯದಲ್ಲಿ ನಗರದ ಅರಮನೆ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸಾಮಾನ್ಯ ಪೊಲೀಸರು ನನ್ನನ್ನು ಸತತ 9 ಗಂಟೆ ವಿಚಾರಣೆ ನಡೆಸಿದರು. ಅವರ ಎಲ್ಲ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರ ನೀಡಿದ್ದೆ. ಪ್ರಧಾನಿ ಇರಲಿ ಅಥವಾ ಮುಖ್ಯಮಂತ್ರಿಯೇ ಇರಲಿ ನೆಲದ ಕಾನೂನನ್ನು ಪಾಲಿಸಲೇಬೇಕು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಯಾರಾದರೂ ಉತ್ತರಿಸಲೇಬೇಕು. ಲೂಟಿಯಾದ ‍ಪೈಸೆ ಪೈಸೆಯನ್ನೂ ವಸೂಲಿ ಮಾಡುತ್ತೇನೆ ಎಂದು 2014ರ ಚುನಾವಣೆಗೆ ಮುನ್ನ ಹೇಳಿದ್ದೆ. ಆಗಸದಲ್ಲಿ ತೇಲುತ್ತಿದ್ದವರು ನೆಲಕ್ಕಿಳಿಯುವಂತೆ ಮಾಡಿದ್ದೇನೆ’ ಎಂದರು.

ADVERTISEMENT

‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಾರು ಎಂಬುದೇ ಗೊಂದಲ. ಇಲ್ಲಿನ ಮುಖ್ಯಮಂತ್ರಿಗೆ ನೆಲದ ಕಾನೂನು ಗೊತ್ತಿಲ್ಲ. ಇಲ್ಲೊಬ್ಬರು ಸೂಪರ್‌ ಮುಖ್ಯಮಂತ್ರಿ ಇದ್ದರೆ, ಇನ್ನೊಬ್ಬರು ರಿಮೋಟ್‌ ಮುಖ್ಯಮಂತ್ರಿ ಇದ್ದಾರೆ. 10 ಪರ್ಸೆಂಟ್‌ ಸರ್ಕಾರ ಈಗ 20 ಪರ್ಸೆಂಟ್‌, 30 ಪರ್ಸೆಂಟ್‌ ಸರ್ಕಾರ ಆಗಿದೆ’ ಎಂದು ವ್ಯಂಗ್ಯ ಮಾಡಿದರು.

‘ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಿಂದ ಎಷ್ಟು ಅವಾಂತರಗಳಾಗಿವೆ ಎಂಬುದು ನಿಮಗೆ ಗೊತ್ತು. ನಿಮ್ಮ ಚಿಕ್ಕ ತಪ್ಪು ದೊಡ್ಡ ಸಂಕಷ್ಟ ತಂದೊಡ್ಡಿದೆ. ಲೋಕಸಭಾ ಚುನಾವಣೆಯಲ್ಲಿ ಇಂತಹ ತಪ್ಪು ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಸಾಫ್ಟ್‌ವೇರ್‌ನಲ್ಲೇ ದೋಷ: ‘ಕಾಂಗ್ರೆಸ್‌ನ ಪ್ರೊಸೆಸರ್ ನಿಧಾನವಾಗಿದೆ ಎಂದು ನೀವು ಭಾವಿಸಿರಬಹುದು. ಆದರೆ, ಕಾಂಗ್ರೆಸ್‌ನ ಸಾಫ್ಟ್‌ವೇರ್‌ನಲ್ಲೇ ದೋಷವಿದೆ. ದೇಶದ ಹಿತಾಸಕ್ತಿ ಕಾಪಾಡುವ ಕೆಲಸ ಮಾಡುವಾಗ ಅವರ ಪ್ರೊಸೆಸರ್‌ ನಿಧಾನವಾಗಿ ಕೆಲಸ ಮಾಡುತ್ತದೆ’ ಎಂದು ಮೋದಿ ಲೇವಡಿ ಮಾಡಿದರು.

‘ಕಾಂಗ್ರೆಸ್‌ನದ್ದು ಪ್ರಣಾಳಿಕೆ ಅಲ್ಲ. ಅದು ಡಕೋಸ್ಲಾ ಪತ್ರ (ಸುಳ್ಳಿನ ಕಂತೆ) ಇದ್ದಂತೆ. ಸೇನಾ ವಿಶೇಷಾಧಿಕಾರವನ್ನು ತೆಗೆದು ಹಾಕುವುದಾಗಿ ಅದರಲ್ಲಿ ಹೇಳಿದ್ದಾರೆ. ಇದನ್ನು ನೋಡಿ ಕೋಪ ಬರುವುದಿಲ್ಲವೇ? ಜಮ್ಮು ಕಾಶ್ಮೀರದಲ್ಲಿ ನೂರಾರು ಸೈನಿಕರು ಮರಣವನ್ನಪ್ಪಿದ್ದಾರೆ. ಅಲ್ಲಿಂದ ಸೇನೆಯನ್ನು ತೆಗೆಯುತ್ತಾರಂತೆ. ಪಂಡಿತ್‌ ಜವಾಹರಲಾಲ್‌ ನೆಹರು ಮಾಡಿದ ತಪ್ಪಿನಿಂದ ಈಗಲೂ ನೋವು ಅನುಭವಿಸುತ್ತಿದ್ದೇವೆ. ಈಗ ಸೇನೆಯನ್ನು ಹೊರಗಿಟ್ಟರೆ ಏನಾಗಬಹುದು’ ಎಂದು ಅವರು ಪ್ರಶ್ನಿಸಿದರು.

ಠೇವಣಿ ಸಿಗದಂತೆ ಮಾಡಿ: ‘ ದೇಶಕ್ಕೆ ಎರೆಡೆರಡು ಪ್ರಧಾನಿ ಮಾಡುವುದಾಗಿ ಕಾಂಗ್ರೆಸ್‌ನ ಮತ್ತೊಬ್ಬ ಸಹವರ್ತಿ ಹೇಳಿದ್ದಾರೆ. ಆ ಪಕ್ಷದ ನಾಯಕರು ಪಾಕಿಸ್ತಾನದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ನಿಮ್ಮ ಭವಿಷ್ಯವನ್ನು ಇಂತಹ ನಾಯಕರ ಕೈಗೆ ಕೊಡುತ್ತೀರಾ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಮಹಾಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳ ಠೇವಣಿ ಹೋಗುವಂತೆ ನೀವು ಮಾಡಬೇಕು’ ಎಂದು ಅವರು ಕರೆ ನೀಡಿದರು.

‘ಅಮೆರಿಕ, ಇಸ್ರೇಲ್ ದೇಶಗಳು ಭಯೋತ್ಪಾದಕರು ಇಡುವ ಕಡೆ ನುಗ್ಗಿ ಹೊಡೆಯುತ್ತವೆ. ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ನೀವು ಪ್ರಶ್ನಿಸುತ್ತಿದ್ದಿರಿ‌. ಸರ್ಜಿಕಲ್‌ ಸ್ಟ್ರೈಕ್‌, ಏರ್‌ ಸ್ಟ್ರೈಕ್‌ಗಳ ಮೂಲಕ ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ಮಹಾಮೈತ್ರಿಕೂಟದ ನಾಯಕರಿಗೆ ಇದು ಇಷ್ಟವಾಗಿಲ್ಲ. ಯುಪಿಎ ಆಡಳಿತಾವಧಿಯಲ್ಲಿ ಉಗ್ರರ ದಾಳಿ ನಡೆದಾಗ ಗೃಹಸಚಿವರನ್ನು ಬದಲಾಯಿಸಿದರು. ಆದರೆ, ನಿಮ್ಮ ಮೋದಿ ಹಾಗೆ ಮಾಡಲಿಲ್ಲ. ತಂತ್ರಗಾರಿಕೆ ಬದಲಾವಣೆ ಮಾಡಿದೆವು’ ಎಂದರು.

‘ಹಗರಣದ ಆರೋಪ ಹೊತ್ತು ಜಾಮೀನಿನ ಮೇಲೆ ಓಡಾಡುತ್ತಿರುವವರು ಮಧ್ಯಮವರ್ಗದವರನ್ನು ಕಳ್ಳರು ಎಂದು ಕರೆದರು. ಅವರನ್ನು ನಂಬುವುದಕ್ಕೆ ಆಗುತ್ತದೆಯೇ? ಮಧ್ಯಮ ವರ್ಗದವರನ್ನು ಅವಮಾನ ಮಾಡುವವರನ್ನು ಸಹಿಸುವುದಕ್ಕೆ ಆಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಬಾಂಬ್‌ ದಾಳಿ ಆಗಿತ್ತು. ಬೆಂಗಳೂರಿನಲ್ಲಿ ಬದುಕುವುದು ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿತ್ತು. ನಮ್ಮ ಐದು ವರ್ಷಗಳ ಆಡಳಿತದ ವೇಳೆಯಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ನಿಮ್ಮ ಒಂದೊಂದು ಮತವೂ ಈ ಕೆಲಸ ಮಾಡಿದೆ. ನಿಮ್ಮ ಮತದಿಂದಲೇ ಬೆಂಗಳೂರು ಸುರಕ್ಷಿತವಾಗಿದೆ’ ಎಂದರು.

***

ಅನಂತಕುಮಾರ್‌, ವಿಜಯಕುಮಾರ್ ಸ್ಮರಣೆ

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಹಾಗೂ ಜಯನಗರದ ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಸಾಧನೆಯನ್ನು ಮೋದಿ ಸ್ಮರಿಸಿದರು.

‘ಬೆಂಗಳೂರಿನ ಅಭಿವೃದ್ಧಿಯಲ್ಲಿ ಅವರಿಬ್ಬರ ಪಾತ್ರ ಮಹತ್ವದ್ದು. ಅವರಿಗೆ ಶ್ರದ್ಧಾಂಜಲಿ. ಜೆನರಿಕ್‌ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ಇದರ ಶ್ರೇಯ ಮಿತ್ರ ಅನಂತಕುಮಾರ್ ಅವರಿಗೆ ಸಲ್ಲುತ್ತದೆ’ ಎಂದರು.

ವೇದಿಕೆ ಏರಿದ ಕೂಡಲೇ ತೇಜಸ್ವಿನಿ ಅನಂತಕುಮಾರ್ ಅವರನ್ನು ಪ್ರಧಾನಿ ಮಾತನಾಡಿಸಿದರು. ಪಕ್ಷದ ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಅವರನ್ನು ಪ್ರಧಾನಿ ಅವರು ಆಪ್ತವಾಗಿ ಸಂಭಾಷಣೆಯಲ್ಲಿ ತೊಡಗಿದ್ದರು.

***

ನಾಲ್ಕು ಪೀಳಿಗೆಯ ವಂಶಾಡಳಿತವನ್ನು ಒಬ್ಬ ಚಾಯ್‌ವಾಲಾ ಹೊಡೆದುರುಳಿಸಿದ್ದಾನೆ. ಇದು ಭವಿಷ್ಯದ ವಿಷಯ. ಹಗುರವಾಗಿ ತೆಗೆದುಕೊಳ್ಳಬೇಡಿ.

–ನರೇಂದ್ರ ಮೋದಿ, ಪ್ರಧಾನಿ

ಸಮಾವೇಶದಲ್ಲಿರಾಜ್ಯ ನಾಯಕರು ಹೇಳಿದ್ದು

ರಾಜ್ಯದಲ್ಲಿ 22 ಕ್ಷೇತ್ರಗಳನ್ನು ಗೆದ್ದು ಮೋದಿ ಅವರಿಗೆ ಕೊಡುಗೆ ಕೊಡುತ್ತೇವೆ. ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೋಲಾರದಲ್ಲಿ ಕೆ.ಎಚ್‌.ಮುನಿಯಪ್ಪ ಸೋಲು ನಿಶ್ಚಿತ.

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಕಾಂಗ್ರೆಸ್‌ನವರಿಗೆ ನನ್ನ ನಗುವೇ ಬಂಡವಾಳ. ಅವರಂತೂ ನಗುವುದಿಲ್ಲ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದರೆ ನಗು ಬರುವುದಿಲ್ಲ. ಉಳಿದ ಕೆಲವರನ್ನು ನೋಡಿದರೆ ಅಳು ಬರುತ್ತದೆ.

– ಡಿ.ವಿ.ಸದಾನಂದ ಗೌಡ,ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ

ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಹುಡುಕಿ ಸಂಸತ್ತಿಗೆ ಬಾ ಎಂದು ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕರೆದಿದ್ದಾರೆ‌. ಬೇರೆ ಪಕ್ಷಗಳು ಮಕ್ಕಳು, ಮೊಮ್ಮಕ್ಕಳನ್ನು ಬೆಳೆಸುತ್ತಿವೆ.

– ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡ ವವಾಡುತ್ತಿದೆ. ವೈಟ್‌ ಟಾ‍‍ಪಿಂಗ್‌ ಯೋಜನೆಯ ಹೆಸರಿನಲ್ಲಿ ಜನರ ತೆರಿಗೆ ಹಣ ಲೂಟಿಯಾಗುತ್ತಿದೆ.

– ಪಿ.ಸಿ.ಮೋಹನ್‌, ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ

ಡಿ.ಕೆ. ಸುರೇಶ್ ಅವರಿಗೆ ಸಂಸದ ಸ್ಥಾನದ ಗೌರವ ಗೊತ್ತಿಲ್ಲ. ಬಂಡೆ, ಬೆಟ್ಟ ಕಂಡರೆ ಕ್ರಷರ್ ಸ್ಥಾಪಿಸುವುದೇ ಅವರ ಉದ್ಯೋಗ.

– ಅಶ್ವತ್ಥನಾರಾಯಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರದ್ದು ತ್ರಿ–ಜಿ (ಅವರು, ಮಕ್ಕಳು, ಮೊಮ್ಮಕ್ಕಳು) ಕಾಂಗ್ರೆಸ್‌ನವರದ್ದು 4–ಜಿ (ನೆಹರುವಿನಿಂದ ರಾಹುಲ್‌ ಗಾಂಧಿವರೆಗೆ). ಇಂತಹಾ ವಂಶಪಾರಂಪರ್ಯ ಆಡಳಿತ ನಮಗೆ ಬೇಕಾ?

– ಆರ್. ಅಶೋಕ,ಲೋಕಸಭಾ ಚುನಾವಣಾ ಪ್ರಚಾರದ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.