ADVERTISEMENT

ಮುಕ್ತ ಚಿಹ್ನೆಗಳಲ್ಲಿ ಸರ್ವ ಸಾಮಗ್ರಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 19:03 IST
Last Updated 26 ಏಪ್ರಿಲ್ 2013, 19:03 IST

ದಾವಣಗೆರೆ:ಪೊರಕೆ, ರೇಜರ್, ಗರಗಸ, ನೇಲ್ ಕಟ್ಟರ್, ಕತ್ತರಿ, ಬಕೆಟ್, ಇಸ್ತ್ರಿಪೆಟ್ಟಿಗೆ, ನೆಲಹಾಸು, ವಾಕಿಂಗ್‌ಸ್ಟಿಕ್, ಹಣ್ಣಿನ ಬುಟ್ಟಿ, ಬ್ರೆಡ್, ಪೇಸ್ಟ್ ಹಚ್ಚಿದ ಟೂಥ್‌ಬ್ರಷ್, ಮಂಚ, ಮೇಜು, ಗಾಜಿನ ಲೋಟ, ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌ, ಕ್ಯಾಮೆರಾ, ಟೆಂಟ್, ಕುಕ್ಕರ್, ತವಾ, ಕೆಟಲ್, ಟೆಲಿಫೋನ್, ಬ್ಯಾಟ್, ಬ್ಯಾಟ್ಸ್‌ಮನ್ ...
- ವಿವಿಧ ಪಕ್ಷಗಳಿಂದ ಬಂಡಾಯಗಾರರು, ಪಕ್ಷೇತರರಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳಿವು.

ಆಯೋಗದ ಪ್ರಕಾರ ಈ ಮೇಲಿನವು ಸೇರಿದಂತೆ ಇನ್ನೂ ಹಲವು ವಸ್ತುಗಳು ಮುಕ್ತ ಚಿಹ್ನೆಗಳ ಸಾಲಿನಲ್ಲಿ ಸೇರಿವೆ.
ಡೀಸೆಲ್ ಪಂಪ್, ಮುಕ್ತ ಚಿಹ್ನೆಗಳ ಸಾಲಿಗೆ ಸೇರಿದೆ. ಡೀಸೆಲ್‌ಪಂಪ್ ಹೆಸರಿನಲ್ಲಿ ಬರೆದಿರುವ ಚಿತ್ರ ವಿದ್ಯುತ್ ಪಂಪ್‌ನದ್ದು. ಹಾಗೆ ನೋಡಿದರೆ ಕರ್ನಾಟಕ ಜನತಾ ಪಕ್ಷದ ಚಿಹ್ನೆ ತೆಂಗಿನಕಾಯಿ, ಬಿಎಸ್‌ಆರ್ ಕಾಂಗ್ರೆಸ್‌ನ ಸೀಲಿಂಗ್ ಫ್ಯಾನ್ ಮುಕ್ತ ಚಿಹ್ನೆಗಳ ಸಾಲಿನಲ್ಲಿ ಸೇರಿದೆ.

ಬ್ಯಾಟ್, ಬ್ಯಾಟ್ಸ್‌ಮನ್‌ಗಳ ಸ್ಪರ್ಧೆದಾವಣಗೆರೆಯ ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಡಾ.ವೈ. ರಾಮಪ್ಪ ಹಾಗೂ ಹರಿಹರದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತ ಅನ್ಸಾರ್ ಅಹಮದ್ ಅವರಿಗೆ ಬ್ಯಾಟ್ ಚಿಹ್ನೆ ನೀಡಲಾಗಿದೆ. ಮಾಯಕೊಂಡದ ಪಕ್ಷೇತರ ಅಭ್ಯರ್ಥಿ ಡಾ.ಕೆ.ಎಸ್. ಶಂಕರನಾಯ್ಕ ಅವರದ್ದು ಬ್ಯಾಟ್ಸ್‌ಮನ್ ಚಿಹ್ನೆ.

ಮಡಕೆ ಮತ್ತು ಬಕೆಟ್: ಮಾಯಕೊಂಡದಲ್ಲಿ ಕೆಜೆಪಿ ಬಂಡಾಯ ಅಭ್ಯರ್ಥಿ ಎಚ್. ಆನಂದಪ್ಪ ಅವರ ಚಿಹ್ನೆ ಮಡಕೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಹನುಮಂತಪ್ಪ ನವಿಲೆಹಾಳ್‌ಗೆ ಬಕೆಟ್ ಚಿಹ್ನೆ ನೀಡಲಾಗಿದೆ. ರೈತ ಸಂಘದ ಚಿನ್ನಸಮುದ್ರ ಶೇಖರ ನಾಯ್ಕ ಅವರ ಚಿಹ್ನೆ ಆಟೊರಿಕ್ಷಾ.

ಹರಿಹರದಲ್ಲಿ ಕೆಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್. ಇಲ್ಲಿ ಬಿ.ಪಿ. ಹರೀಶ್ ಹೆಸರಿನ ಪಕ್ಷೇತರ ಅಭ್ಯರ್ಥಿಯೂ ಕಣದಲ್ಲಿದ್ದಾರೆ. ಅವರ ಚಿಹ್ನೆ ಮೇಜು. ಇನ್ನೊಬ್ಬ ಅಭ್ಯರ್ಥಿ ಟಿ.ವಿ. ಗಜೇಂದ್ರಗಡ ಅವರ ಚಿಹ್ನೆ ಕಟ್ಟಿಂಗ್ ಪ್ಲೈಯರ್. ಹೊನ್ನಾಳಿಯಲ್ಲಿ ಜೆಡಿಎಸ್, ಕಾಂಗ್ರೆಸ್‌ನಿಂದ ಹತಾಶೆಗೊಂಡು ಪಕ್ಷೇತರರಾಗಿ ಸ್ಪರ್ಧಿಸಿರುವ ಡಾ.ಡಿ.ಬಿ. ಪ್ರಕಾಶ್ ಅವರ ಚಿಹ್ನೆ ಬ್ಯಾಟರಿ ಟಾರ್ಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.