ADVERTISEMENT

ಆಗಿದ್ದು 164, ಯಂತ್ರ ತೋರಿಸಿದ್ದು 1,644!

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಹಾರಗದ್ದೆ ಬೂತ್‌ನಲ್ಲಿ ಮತ ಚಲಾಯಿಸಿ ಹೊರಬಂದ 95 ವರ್ಷದ ಯರ್ರಮ್ಮ
ಹಾರಗದ್ದೆ ಬೂತ್‌ನಲ್ಲಿ ಮತ ಚಲಾಯಿಸಿ ಹೊರಬಂದ 95 ವರ್ಷದ ಯರ್ರಮ್ಮ   

ಬೆಂಗಳೂರು:‌‌‌ ಮತಗಟ್ಟೆ ಸಿಬ್ಬಂದಿಯ ಮಂದಗತಿ ಕಾರ್ಯವೈಖರಿಯಿಂದ ಬೇಸತ್ತಿದ್ದ ಜನ. ಮತಯಂತ್ರ ಕೈಕೊಟ್ಟು ಮನೆಗೆ ಮರಳುತ್ತಿದ್ದ ಮತದಾರರು. ತಮ್ಮ ಹಕ್ಕು ಚಲಾಯಿಸುವ ಉತ್ಸಾಹದಲ್ಲಿದ್ದ ಹಿರಿ ಜೀವಗಳು. ಗಡಿಬಿಡಿಯಲ್ಲಿದ್ದ ಮತದಾರರ ಮಧ್ಯೆ ನುಸುಳಿ ಬೂತ್‌ಗೆ ಬಂದ ನಾಗರಹಾವು....!

ಇವು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಕಂಡು ಬಂದ ದೃಶ್ಯಗಳು. ಬೆಂಗಳೂರು ದಕ್ಷಿಣ, ಆನೇಕಲ್, ಮಹದೇವಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ ಹಾಗೂ ಯಲಹಂಕ ಕ್ಷೇತ್ರಗಳು ನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುತ್ತವೆ.

‘ಗೋಲ್‌ಮಾಲ್‌ ನಡೀತಿದೆ’: ‘ಬೆಳಿಗ್ಗೆ 10 ಗಂಟೆವರೆಗೆ 164 ಮಂದಿ ಮತ ಹಾಕಿದ್ದಾರೆ. ಆದರೆ, 1,644 ಮಂದಿ ಮತ ಚಲಾಯಿಸಿರುವುದಾಗಿ ಯಂತ್ರ ತೋರಿಸುತ್ತಿದೆ. ಏನೋ ಗೋಲ್‌ಮಾಲ್ ನಡೆಯುತ್ತಿರುವ ಅನುಮಾನವಿದೆ. ಎಂದು ಕಾಂಗ್ರೆಸ್ ಬೆಂಬಲಿಗರು ಆನೇಕಲ್‌ನ ವೀವರ್ಸ್ ಕಾಲೊನಿ ಬೂತ್ ಬಳಿ ಗಲಾಟೆ ಮಾಡಿದರು.

ADVERTISEMENT

ಬೂತ್ ಸಿಬ್ಬಂದಿ, ‘10.25ಕ್ಕೆ ಯಂತ್ರ ಕೆಟ್ಟು ಹೋಯಿತು. ತಾಂತ್ರಿಕ ಸಲಹೆಗಾರರೊಬ್ಬರು ಪರಿಶೀಲಿಸಿದರೂ, ಸರಿ ಹೋಗಿಲ್ಲ. 10 ಗಂಟೆವರೆಗೆ ಶೇ 22ರಷ್ಟು ಮತದಾನ ನಡೆದಿತ್ತು. ಯಂತ್ರ ಕೆಡದಿದ್ದರೆ, 12 ಗಂಟೆಯೊಳಗೆ ಶೇ 50ರಷ್ಟು ಮತದಾನ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು’ ಎಂದರು. 12.30ರ ಸುಮಾರಿಗೆ ತಂತ್ರಜ್ಞರು ಯಂತ್ರ ದುರಸ್ತಿ ಮಾಡುವಲ್ಲಿ ಯಶಸ್ವಿಯಾದರು.

ಮತಗಟ್ಟೆಗೆ ಬಂತು ನಾಗರ!

ಮಹದೇವಪುರ ಕ್ಷೇತ್ರದ ಕಿತ್ತಗನೂರಿನ ಬೂತ್‌ನಲ್ಲಿ ಮತದಾರರ ಸಂಖ್ಯೆ ಹೆಚ್ಚಿತ್ತು. ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಎಲ್ಲರೂ ಕಿರುಚಾಡುತ್ತಿದ್ದರು. ಇದೇ ವೇಳೆ ಗೋಡೆ ಬದಿಯಲ್ಲೇ ಬಂದ ನಾಗರಹಾವು, ಮತದಾರರು ಹಾಗೂ ಸಿಬ್ಬಂದಿ ದಿಕ್ಕಾಪಾಲಗುವಂತೆ ಮಾಡಿತು.

ಮಧ್ಯಾಹ್ನ 1.45ರ ಸುಮಾರಿಗೆ ಈ ಪ್ರಸಂಗ ಜರುಗಿತು. ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಸಿಬ್ಬಂದಿ, ಹಾವನ್ನು ಹಿಡಿಯುವ ಮೂಲಕ ಮತದಾರರ ಆತಂಕ ದೂರ ಮಾಡಿದರು. ಇದರಿಂದ ಸುಮಾರು 20 ನಿಮಿಷ ಪ್ರಕ್ರಿಯೆ ಸ್ಥಗಿತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.