ADVERTISEMENT

‘ಇಂದಿರಾ ಕ್ಯಾಂಟೀನ್‌ 20ನೇ ಶತಮಾನದ ಯೋಜನೆ’

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:38 IST
Last Updated 6 ಮೇ 2018, 19:38 IST
ರಾಮ್‌ ಮಾಧವ್ ಮಾತನಾಡಿದರು
ರಾಮ್‌ ಮಾಧವ್ ಮಾತನಾಡಿದರು   

ಬೆಂಗಳೂರು: ‘ಇಂದಿರಾ ಕ್ಯಾಂಟೀನ್‌ 20ನೇ ಶತಮಾನದ ಯೋಜನೆ. ನಮ್ಮ ಸರ್ಕಾರ 21ನೇ ಶತಮಾನಕ್ಕೆ ತಕ್ಕಂತೆ ಯೋಚಿಸುತ್ತದೆ. ಪ್ರತಿಯೊಬ್ಬರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಹೊಣೆ ನಮ್ಮದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಪ್ರತಿಪಾದಿಸಿದರು.

‘ಚಿಂತಕರ ವೇದಿಕೆ’ ದಯಾನಂದ ಸಾಗರ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡಿದರು.

‘ಕ್ಯಾಂಟೀನ್ ಮಾಡುವುದರಿಂದ ಬಡವರಿಗೆ ಊಟ ಸಿಕ್ಕಿದೆ. ಇದನ್ನು ನಾನು ಒಪ್ಪುತ್ತೇನೆ. ಆದರೆ, ಇದಕ್ಕಿಂತ ನಮ್ಮ ‘ಮುದ್ರಾ ಯೋಜನೆ’ ಹೆಚ್ಚು ಯಶಸ್ವಿಯಾದುದು. ಅದನ್ನು ಈ ಕಾಲದ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ’ ಎಂದರು.

ADVERTISEMENT

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಶೇ 60ರಷ್ಟು ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ ಅವರು ಶಾಲಾ ಕಾಲೇಜುಗಳಿಂದ ವಿಮುಖರಾಗುತ್ತಿದ್ದರು. ನಮ್ಮ ಸರ್ಕಾರ ‘ಸ್ವಚ್ಛ ಭಾರತ’ ಯೋಜನೆ ಅಡಿಯಲ್ಲಿ 6 ಕೋಟಿ ಶೌಚಾಲಯಗಳನ್ನು ಕಟ್ಟಿಸಿದೆ. ಅಲ್ಲದೇ ನಮ್ಮ ಅವಧಿಯಲ್ಲಿಯೇ ‘ತ್ರಿವಳಿ ತಲಾಖ್‌’ ವಿರುದ್ಧ ನಿಲುವು ತಳೆದದ್ದು. ಇದು ನಮ್ಮ ಹೆಮ್ಮೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಮೋದಿ–ಯಡಿಯೂರಪ್ಪ ಜೋಡಿ ಮಿಂಚಲಿದೆ. ಇಂದಿನ ದಿನಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದಕ್ಕೆ ಕರ್ನಾಟಕವೇ ದೊಡ್ಡ ಉದಾಹರಣೆ’ ಎಂದರು.

‘ಮಾವೋವಾದಿಗಳ ಪ್ರಭಾವ ಕುಗ್ಗಿಸುವುದರಲ್ಲಿ ಬಿಜೆಪಿ ಪಾತ್ರ ದೊಡ್ಡದು. 2022ರ ವೇಳೆಗೆ ದೇಶದಲ್ಲಿ ಸೂರು ಇಲ್ಲದವರನ್ನು ನೀವು ನೋಡಲು ಸಾಧ್ಯವಿಲ್ಲ. ಎಲ್ಲರೂ ಅವರವರ ಮನೆಯಲ್ಲಿ ಬೆಚ್ಚಗಿರುವುದು ನಮ್ಮ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.