ADVERTISEMENT

ಇವರನ್ನು ನಂಬಬೇಕೇ?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಇವರನ್ನು ನಂಬಬೇಕೇ?
ಇವರನ್ನು ನಂಬಬೇಕೇ?   

ಇವರನ್ನು ನಂಬಬೇಕೇ?

ಹಣ ಚೆಲ್ಲಿ ಚುನಾವಣೆಯಲ್ಲಿ ಗೆಲ್ಲುವುದು, ಅಧಿಕಾರದಲ್ಲಿದ್ದಾಗ ಹಣ, ಆಸ್ತಿ ಮಾಡುವುದು... ಇದೇ ರಾಜಕಾರಣಿಗಳ ಬೀಜಮಂತ್ರ. ಇವರ ಕನ್ನಡಾಭಿಮಾನ ಕೇವಲ ಬೂಟಾಟಿಕೆ, ಮತ ಸೆಳೆಯುವ ಕುತಂತ್ರ ಎನ್ನುವುದಕ್ಕೆ ಪ್ರತಿ ವರ್ಷ ಮುಚ್ಚುತ್ತಿರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮತ್ತು ಹೆಚ್ಚುತ್ತಾ ಹೋಗುತ್ತಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳೇ ಜ್ವಲಂತ ಸಾಕ್ಷಿ. ಇನ್ನೂ ಇವರನ್ನು ನಂಬಬೇಕೆ?

–ಡಾ. ಬೈರಮಂಗಲ ರಾಮೇಗೌಡ, ಬೆಂಗಳೂರು

ADVERTISEMENT

ಕನ್ನಡ ಶಾಲೆಗಳ ಬಗ್ಗೆ ಕಾಳಜಿ ಏಕಿಲ್ಲ?

ಕಳೆದ ಕೆಲವು ತಿಂಗಳುಗಳಿಂದ ನಾಡಿನ ಯಾವುದೇ ದೈನಿಕ, ನಿಯತಕಾಲಿಕಗಳನ್ನು ತಿರುವಿ ಹಾಕಿದರೆ ನವ ಕರ್ನಾಟಕ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ಪ್ರಾಯೋಜಿತ ಪುಟಗಟ್ಟಲೆ ಜಾಹೀರಾತುಗಳು ಅಚ್ಚರಿ ಮೂಡಿಸುತ್ತವೆ. ಹಿಂದೆ ಯಾವತ್ತೂ ಇಲ್ಲದ ಈ ಉತ್ಸಾಹ ದಿಢೀರ್ ಆಗಿ ಬಂದಿದ್ದೇಕೆ? ಜನರ ಹಣವನ್ನು ಸರ್ಕಾರವೇ ಈ ರೀತಿ ದುಂದು ವೆಚ್ಚ ಮಾಡುವ ಅಗತ್ಯವಾದರೂ ಏನಿದೆ? ಪತ್ರಿಕೆಗಳಿಗೆ, ಸರ್ಕಾರಕ್ಕೂ ಜಾಹೀರಾತು ಅಗತ್ಯವಿದೆ ನಿಜ. ಆದರೆ, ಪ್ರತಿ ದಿನವೂ ಪುಟಗಟ್ಟಲೆ ನೀಡುವ ಅಗತ್ಯವಾದರೂ ಏನಿದೆ?

ನಿಜವಾಗಿಯೂ ನವ ಕರ್ನಾಟಕದ ಕಾಳಜಿ ಇದ್ದವರು, ನಾಳಿನ ಕರ್ನಾಟಕದ ಭವಿಷ್ಯಕ್ಕೆ ಆತ್ಮವಿಶ್ವಾಸದಿಂದ ಹೆಗಲು ಕೊಡಬೇಕಾದ ಕನ್ನಡ ಶಾಲೆಯ ಕಂದಮ್ಮಗಳಿಗೆ ಸ್ವಾಭಿಮಾನದ, ಶಿಕ್ಷಕರಿಗೆ ನೆಮ್ಮದಿಯ ವಾತಾವರಣ ಮತ್ತು  ತಮ್ಮ ಮಕ್ಕಳನ್ನು ನಾಡಿನ ಕನ್ನಡ ಶಾಲೆಗಳಿಗೆ ಕಳಿಸಿಕೊಡುವ ಉತ್ಸಾಹದ ವಾತಾವರಣವನ್ನು ಹೆತ್ತವರಿಗೆ ನಿರ್ಮಿಸಿ ಕೊಡಲಿ. ಹಾಗಾದಾಗ ನವ ಕರ್ನಾಟಕ ನಿರ್ಮಾಣದ ಕನಸು ಅರ್ಧ ನನಸಾದಂತೆಯೇ.

- ಗಣೇಶ್ ಕಾಮತ್, ಮೂಡುಬಿದಿರೆ

ಶ್ರೀಸಾಮಾನ್ಯನ ಪಾಡು

ಸಿದ್ದರಾಮಯ್ಯ ಹೇಳುತ್ತಾರೆ:
ಪ್ರಧಾನಿಯಾಗಲು ಮೋದಿ ನಾಲಾಯಕ್ಕು!
ಬಿಜೆಪಿಯವರು ಹೇಳುತ್ತಾರೆ:
ಮುಖ್ಯಮಂತ್ರಿಯಾಗಲು ಸಿದ್ದು ನಾಲಾಯಕ್ಕು!
ಈ ನಾಲಾಯಕ್ಕುಗಳ ನಡುವೆ
ಲಾಯಕ್ಕುಗಳಿಗಿಲ್ಲ ಸಿದ್ದು-ಮೋದಿಗಳ ಲಕ್ಕು!
ಇಂಥವರಿಗೆ ಅಧಿಕಾರ ಕೊಟ್ಟು
ಆಗಿದ್ದಾನಿಂದು ಶ್ರೀಸಾಮಾನ್ಯ ಬೀದಿ ಭಿಕ್ಷುಕ!

–ಎನ್. ನರಹರಿ, ಬೆಂಗಳೂರು

‘ಪ್ರಜಾಮತ–ಜನತಂತ್ರದ ಹಬ್ಬ 2018’ರ ಮೂಲಕ 'ಪ್ರಜಾವಾಣಿ'ಯು ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ವಿವಿಧ ಆಯಾಮಗಳಲ್ಲಿ ಬಹಳ ಅಚ್ಚುಕಟ್ಟಾಗಿ ವಿಶ್ಲೇಷಣೆ ಮಾಡುತ್ತಿದೆ. 70 ವರ್ಷಗಳ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸಾಮಾಜಿಕ ನ್ಯಾಯ ಎಂಬುದು ಶೀತಲ ಪೆಟ್ಟಿಗೆ ಸೇರಿದೆ. ಚುನಾವಣೆ ಕೆಲವರ ಆಡುಂಬೊಲ ಆಗಿದೆ. ಸಮಾಜ ಸೇವೆ ಎಂದರೆ ತಮ್ಮ ಜಾತಿ, ಮತ, ಭಾಷೆ, ವರ್ಗ, ಧರ್ಮ, ಪ್ರದೇಶಗಳ ಬಗ್ಗೆ ಮಾತ್ರ ಚಿಂತಿಸುವುದಲ್ಲ; ಬದಲಾಗಿ ಸರ್ವರ, ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುವುದು. ಅಂತಹ ನಾಯಕರ ಪರಿಚಯವನ್ನು ಪತ್ರಿಕೆಯು ಮಾಡಬೇಕು ಎಂದು ಕೋರುತ್ತೇನೆ. ಚುನಾವಣಾ ಆಯೋಗವು ಚುನಾವಣಾ ವೆಚ್ಚ ಭರಿಸುವ ವಿಚಾರದ ಬಗ್ಗೆಯೂ ಲೇಖನ ಬರಲಿ.

-ಬಿ.ಆರ್. ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.