ADVERTISEMENT

ಇವಿಎಂ ಬಗ್ಗೆ ಆತಂಕ: ಬ್ರಿಜೇಶ್‌ಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ‘ಚುನಾವಣೆಯಲ್ಲಿ ಇವಿಎಂ ಬಳಕೆ ಬೇಡ. ನಮ್ಮ ಶಾಸಕರು ಇವಿಎಂ ಬಗ್ಗೆ ಆತಂಕಗೊಂಡಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದರು.

‘ಚುನಾವಣೆ ಮತ್ತು ರಾಜಕೀಯ ಸುಧಾರಣೆಗಳು‌’ ವಿಷಯ ಕುರಿತು ಐಐಎಂನಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಹಣ ಮತ್ತು ತೋಳ್ಬಲ’ ಗೋಷ್ಠಿಯಲ್ಲಿ ಮಾತನಾಡಿದ ಕಾಳಪ್ಪ, ಇವಿಎಂ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದಾಗ, ಸಭಿಕರು ತರಾಟೆಗೆ ತೆಗೆದುಕೊಂಡರು. ‘ಈಗ ನೀವು ಮಾತನಾಡಬೇಕಾಗಿರುವುದು ಹಣಬಲ ಮತ್ತು ತೋಳ್ಬಲ ರಾಜಕೀಯದ ಬಗ್ಗೆ. ವಿಷಯಾಂತರ ಮಾಡಬೇಡಿ’ ಎಂದರು.

ಇದು ಕೂಡ ಚುನಾವಣೆ ಸುಧಾರಣೆ ವಿಷಯವೇ ಎಂದು ತಮ್ಮನ್ನು ಸಮರ್ಥಿಸಿಕೊಂಡ ಅವರು, ಒಂದು ರಾಜಕೀಯ ಪಕ್ಷ ಎಲ್ಲ ಚುನಾವಣೆಗಳಲ್ಲೂ ಗೆಲ್ಲುತ್ತಿರುವುದರಿಂದ ಸಾರ್ವಜನಿಕರು ಇವಿಎಂ ಬಗ್ಗೆ ಸಂಶಯ ಹೊಂದಿದ್ದಾರೆ. ವಿವಿಪ್ಯಾಟ್‌ ಬಗ್ಗೆಯೂ ತೃಪ್ತಿ ಇಲ್ಲ ಎಂದು ದೂರಿದರು.

ADVERTISEMENT

ಮಧ್ಯ ಪ್ರವೇಶಿಸಿದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌, ‘ನಿಮ್ಮ ಎಲ್ಲ ಪ್ರಶ್ನೆಗ
ಳಿಗೂ ಚುನಾವಣಾ ಆಯೋಗ ಹೊರತಂದಿರುವ ‘ಸ್ಟೇಟಸ್‌ ಪೇಪರ್‌ ಆನ್‌ ಇವಿಎಂ’ನಲ್ಲಿ ಉತ್ತರವಿದೆ. ಆಸಕ್ತರು ಇದನ್ನು ಓದಿದರೆ ವದಂತಿ ಹರಡುವುದು ನಿಲ್ಲುತ್ತದೆ’ ಎಂದರು.

ಸಿ–ವೋಟರ್ಸ್‌ನ ಯಶವಂತ ದೇಶಮುಖ್‌ ಮಾತನಾಡಿ, ನಾನು 98 ದೇಶಗಳ ಚುನಾವಣೆ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ, ಭಾರತದಲ್ಲಿ ಇರುವ ಚುನಾವಣೆ ವ್ಯವಸ್ಥೆ ಅತ್ಯಂತ ಉತ್ತಮವಾದುದು. ಇಲ್ಲಿ ಇವಿಎಂ ಪೂರ್ವದ ಚುನಾವಣೆಗಳಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಅಧಿಕಾರದಲ್ಲಿದ್ದ ಪಕ್ಷಗಳೇ ಗೆಲ್ಲುತ್ತಿದ್ದವು. ಇವಿಎಂ ಬಳಕೆಗೆ ಬಂದ ಬಳಿಕ ಆಡಳಿತ ವಿರೋಧಿ ಅಲೆ ಇದ್ದಾಗ ಅಧಿಕಾರದಲ್ಲಿದ್ದ ಪಕ್ಷಗಳು ಸೋಲುತ್ತಿವೆ. ಇವಿಎಂ ಬಗ್ಗೆ ಸಂಶಯ ಬೇಡ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.