ADVERTISEMENT

ಎಚ್‌ಡಿಕೆ–ದೇವೇಗೌಡರು ಸತ್ಯ ಹರಿಶ್ಚಂದ್ರರೇ?

​ಪ್ರಜಾವಾಣಿ ವಾರ್ತೆ
Published 28 ಮೇ 2018, 20:23 IST
Last Updated 28 ಮೇ 2018, 20:23 IST
ಎಚ್‌ಡಿಕೆ–ದೇವೇಗೌಡರು ಸತ್ಯ ಹರಿಶ್ಚಂದ್ರರೇ?
ಎಚ್‌ಡಿಕೆ–ದೇವೇಗೌಡರು ಸತ್ಯ ಹರಿಶ್ಚಂದ್ರರೇ?   

ಬೆಂಗಳೂರು: ‘ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರು ಸತ್ಯ ಹರಿಶ್ಚಂದ್ರರಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ಇವರಿಬ್ಬರ ಅಧಿಕಾರದ ಅವಧಿಯಲ್ಲಿ ಆಗಿರುವ ಅಕ್ರಮಗಳು ಮತ್ತು ಹಗರಣಗಳನ್ನು ಮುಂದಿನ ದಿನಗಳಲ್ಲಿ ಬಯಲಿಗೆಳೆಯುತ್ತೇನೆ ಎಂದು ಸೋಮವಾರ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ವಿರೋಧ ಪಕ್ಷವಾಗಿ ನಾವು ಜನರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಆದ್ದರಿಂದ, ಅಧಿಕಾರ ನಡೆಸುವವರ ವಿರುದ್ಧ ಹೋರಾಟವನ್ನು ನಡೆಸುತ್ತೇವೆ’ ಎಂದೂ ಅವರು ಹೇಳಿದರು.

ADVERTISEMENT

ಜನತೆಗೆ ಅಪಮಾನ: ತಾವು ರಾಜ್ಯದ ಜನತೆಯ ಮುಲಾಜಿನಲ್ಲಿ ಇಲ್ಲ. ಕಾಂಗ್ರೆಸ್‌ ಮುಲಾಜಿನಲ್ಲಿ ಇರುವುದಾಗಿ ಹೇಳುವ ಮೂಲಕ ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.

ಇವರ ಹೇಳಿಕೆ ಪ್ರಜಾತಂತ್ರಕ್ಕೇ ಅವಮಾನ. ಈವರೆಗೆ ಯಾವುದೇ ಮುಖ್ಯಮಂತ್ರಿ  ಈ ರೀತಿ ಹಗುರವಾಗಿ ಮಾತನಾಡಿಲ್ಲ. ಮತದಾರರನ್ನು ಅಪಮಾನಿಸಿ
ದ್ದಾರೆ. ಆದ್ದರಿಂದ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ತಮ್ಮ ವಿರುದ್ಧ ಕಟುವಾಗಿ ಮಾತನಾಡಿದ್ದೇನೆ ಎಂದು ದೇವೇಗೌಡರು ಹೇಳಿಕೆ ನೀಡಿದ್ದಾರೆ. ವಿರೋಧಪಕ್ಷದಲ್ಲಿ ಕುಳಿತು ಹೇಗೆ ಮಾತನಾಡಬೇಕು ಎಂಬುದನ್ನು ದೇವೇಗೌಡರಿಂದ ಪಾಠ ಕಲಿಯಬೇಕಾಗಿಲ್ಲ ಎಂದೂ ಹೇಳಿದರು.

ರೈತರರ ನಿರ್ಲಕ್ಷ್ಯ: ಕುಮಾರಸ್ವಾಮಿ ಇನ್ನೂ ಖಾತೆ ಹಂಚಿಕೆ, ಸಂಪುಟ ವಿಸ್ತರಣೆಯ ಜಂಜಾಟದಲ್ಲೇ ಮುಳುಗಿದ್ದಾರೆ. ರಾಹುಲ್‌ ಗಾಂಧಿ ವಿದೇಶದಿಂದ ಬರುವವರೆಗೂ ಸರ್ಕಾರದ ರಚನೆ ಪೂರ್ಣ ಪ್ರಮಾಣದಲ್ಲಿ ಆಗುವುದಿಲ್ಲ. ಇವರಿಗೆ ರೈತರ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ಕುಮಾರಸ್ವಾಮಿ ಪ್ರಮಾಣ ಸ್ವೀಕರಿಸಿ ಐದು ದಿನಗಳು ಕಳೆದಿವೆ. ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್‌– ಜೆಡಿಎಸ್‌ನ ದೊಂಬರಾಟ ನಿಂತಿಲ್ಲ. ರಾಹುಲ್‌ಗಾಂಧಿ ವಿದೇಶಕ್ಕೆ ತೆರಳುವ ತರಾತುರಿಯಲ್ಲಿ ಗುಲಾಂನಬಿ ಆಜಾದ್‌ ಅವರಿಗೆ ರಾಜ್ಯದ ಉಸ್ತುವಾರಿ ವಹಿಸಿದ್ದಾರೆ. ರಾಹುಲ್‌ ವಾಪಾಸ್‌ ಬಂದರೂ ಕಚ್ಚಾಟ ನಿಲ್ಲುವುದಿಲ್ಲ. ಯಾರೆಲ್ಲ ಸಚಿವರಾಗುತ್ತಾರೆ, ಯಾವ ಖಾತೆ ಯಾರಿಗೆ ಸಿಗುತ್ತದೆ ಎಂಬ ವಿಶ್ವಾಸ ಅವರಲ್ಲಿ ಯಾರಿಗೂ ಇಲ್ಲ ಎಂದರು.

ಬಂದ್‌ ಯಶಸ್ವಿ

ಸೋಮವಾರ ಬಂದ್ ಯಶಸ್ವಿಯಾಗಿದೆ. ನಾವು ಯಾವುದೇ ಸಂಘಟನೆಗಳ ಬೆಂಬಲ ಕೋರಿರಲಿಲ್ಲ. ಸರ್ಕಾರ ಬಂದ್ ಹತ್ತಿಕ್ಕಲು ಕುಮಾರಸ್ವಾಮಿ ಪೊಲೀಸ್ ಬಲವನ್ನು  ಬಳಸಿದ್ದಾರೆ ಎಂದು ಯಡಿಯೂಪ್ಪ ಹೇಳಿದರು.

ಬೆಂಗಳೂರು ಹೊರತುಪಡಿಸಿ ಉಳಿದ 30 ಜಿಲ್ಲೆಗಳಲ್ಲಿ ಸ್ವಯಂ ಪ್ರೇರಿತ ಬಂದ್‌ ಆಗಿದೆ. ಮುಖ್ಯಮಂತ್ರಿಯವರಿಗೆ ರೈತರ ವಿಷಯ ಆದ್ಯತೆ ಆಗಿಯೇ ಇಲ್ಲ. ಪ್ರತಿಭಟನೆಗೆ ಹೊರಟವರನ್ನು ಪೊಲೀಸ್‌ ಬಲ ಬಳಸಿಕೊಂಡು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಶಾಸಕರು, ಸಂಸದರನ್ನು ಬಂಧಿಸಲಾಗಿದೆ. ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರಿಗೆ ಪ್ರತಿಭಟನೆ ನಡೆಸುವ ಹಕ್ಕು ಇಲ್ಲವೆ ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ ನೀಡಿದ ಭರವಸೆಯನ್ನು ಈಗ ಈಡೇರಿಸದೇ ಇರುವುದು ನಂಬಿಕೆ ದ್ರೋಹ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.