ADVERTISEMENT

ಎರಡು ಕಡೆ ಚುನಾವಣೆಗೆ ನಿಂತ್ರೆ ತಪ್ಪೇನು? ಸಿದ್ದರಾಮಯ್ಯ ಪ್ರಶ್ನೆ

ಬಾದಾಮಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಬನಶಂಕರಿ ದರ್ಶನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:06 IST
Last Updated 24 ಏಪ್ರಿಲ್ 2018, 9:06 IST
ಬಾದಾಮಿಯ ವೀರಪುಲಿಕೇಶಿ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು
ಬಾದಾಮಿಯ ವೀರಪುಲಿಕೇಶಿ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು   

ಬಾದಾಮಿ (ಬಾಗಲಕೋಟ): ‘ಹೈಕಮಾಂಡ್ ಸೂಚನೆ ಮೇರೆಗೆ ನಾನು ಬಾದಾಮಿಯಿಂದ ಸ್ಪರ್ಧಿಸುತ್ತಿದ್ದೇನೆ. ಎರಡು ಚುನಾವಣೆಗೆ ನಿಂತರೆ ತಪ್ಪೇನು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬನಶಂಕರಿ ದೇವಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ‘ಮೋದಿ ಈ ಹಿಂದೆ ವಾರಣಾಸಿ, ವಡೋದರ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲವೇ? ದೇವೇಗೌಡ ಹಾಗೂ ಕುಮಾರಸ್ವಾಮಿ ಸಹ ಎರಡೆರಡು ಕಡೆ ಸ್ಪರ್ಧಿಸಿದ್ದರು. ಅವರೆಲ್ಲ ಎರಡೆರಡು ಕಡೆ ಯಾಕೆ ನಿಂತಿದ್ರು? ಅವರಿಗೂ ಸೋಲಿನ ಭಯವಿತ್ತೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೇ ಪ್ರಶ್ನೆ ಹಾಕಿದರು.

‘ನಾನು ಉತ್ತರ ಕರ್ನಾಟಕ– ನೀನು ದಕ್ಷಿಣ ಕರ್ನಾಟಕ ಎನ್ನುವ ಚರ್ಚೆ ಬಹುಕಾಲದಿಂದ ನಡೆಯುತ್ತಲೇ ಇದೆ. ನಾನೇನು ಉತ್ತರ ಕರ್ನಾಟಕಕ್ಕೆ ಹೊಸಬನಲ್ಲ. ಈ ಹಿಂದೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಈ ಬಾರಿ ನಾನು ನಿಲ್ಲಬೇಕು ಎಂದು ಈ ಭಾಗದ ಜನರು ಒತ್ತಾಯಿಸಿದ್ದರು. ಅವರೇ ಹೈಕಮಾಂಡ್ ಮೇಲೆಯೂ ಒತ್ತಡ ತಂದಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಊರ ತುಂಬ ಜನವೋ ಜನ

ಬಾದಾಮಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆಗಳಲ್ಲಿ ಸಾಗುತ್ತಿರುವುದು ಸಾಮಾನ್ಯ ದೃಶ್ಯ ಎನಿಸಿದೆ. ಕೆಲ ವೃತ್ತಗಳಲ್ಲಿ ಒಂದೇ ಗುಂಪಿನಲ್ಲಿ ಎರಡೂ ಪಕ್ಷಗಳ ಧ್ವಜ ಹೊತ್ತವರು ಕಾಣಸಿಗುತ್ತಿದ್ದಾರೆ.
ಟ್ರಾಫಿಕ್‌ ಸಂಪೂರ್ಣ ಸ್ತಬ್ಧಗೊಂಡಿದ್ದು ಗದಗ ಮತ್ತು ಬಾಗಲಕೋಟ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.