ADVERTISEMENT

ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಮಿತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಮಧುಸೂದನ ಮಿಸ್ತ್ರಿ
ಮಧುಸೂದನ ಮಿಸ್ತ್ರಿ   

ಬೆಂಗಳೂರು: ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ಮಿತಿ ಹಾಕುವುದಿಲ್ಲ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಧುಸೂದನ ಮಿಸ್ತ್ರಿ ನೇತೃತ್ವದ ಅಭ್ಯರ್ಥಿಗಳ ಪರಿಶೀಲನಾ ಸಮಿತಿ ಸ್ಪಷ್ಟಪಡಿಸಿದೆ.

ರಾಜ್ಯ ಕಾಂಗ್ರೆಸ್‌ ನಾಯಕರು ತಮ್ಮ ಪುತ್ರರು ಹಾಗೂ ಪುತ್ರಿಯರಿಗೆ ಟಿಕೆಟ್‌ ಕೊಡಬೇಕೆಂದು ಪಕ್ಷದ ಮೇಲೆ ಒತ್ತಡ ಹೇರುತ್ತಿರುವುದರಿಂದ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ನೀತಿ ಜಾರಿಗೊಳಿಸಬೇಕು ಎಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿ. ಪರಮೇಶ್ವರ ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ಮಿಸ್ತ್ರಿ ಅವರ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ತಮ್ಮಮಕ್ಕಳಿಗೆ ಟಿಕೆಟ್‌ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ADVERTISEMENT

ಚುನಾವಣೆ ಗೆಲುವೊಂದೇ ಟಿಕೆಟ್‌ ಹಂಚಿಕೆಗೆ ಮಾನದಂಡ ಎಂದು ಮಧುಸೂದನ ಮಿಸ್ತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಟಿಕೆಟ್‌ ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು. ಛತ್ತೀಸ್‌ಗಡದ ಸಂಸದ ತಾಮ್ರಧ್ವಜ ಸಾಹು, ಅಸ್ಸಾಂ ಸಂಸದ ಗೌರವ್‌ ಗೊಗೋಯ್‌ ಸಭೆಯಲ್ಲಿದ್ದರು.

ಪಕ್ಷದ ಯಾವುದೇ ನಾಯಕರು ಇದುವರೆಗೂ ತಮ್ಮ ಮಗ ಅಥವಾ ಮಗಳಿಗೆ ಟಿಕೆಟ್‌ ಕೊಡುವಂತೆ ತಮ್ಮ ಬಳಿ ಕೇಳಿಲ್ಲ ಎಂದು ಮಿಸ್ತ್ರಿ ಸ್ಪಷ್ಟಪಡಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರ ಹಿಡಿದಾಗ ಮಿಸ್ತ್ರಿ ರಾಜ್ಯದ ಉಸ್ತುವಾರಿ ಹೊತ್ತಿದ್ದರು.

ರಾಜ್ಯ ಕಾಂಗ್ರೆಸ್‌ ಫೆಬ್ರುವರಿ 26ರ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸೇರಿದಂತೆ ಸುಮಾರು ಮೂರು ಸಾವಿರ ಆಕಾಂಕ್ಷಿಗಳಿಗೆ ಅರ್ಜಿ ನಮೂನೆ ವಿತರಿಸಿದೆ. ಮುಖ್ಯಮಂತ್ರಿ ಈ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ತಮ್ಮ ವರುಣಾ ಕ್ಷೇತ್ರವನ್ನು ಯತೀಂದ್ರ ಅವರಿಗೆ ಬಿಟ್ಟುಕೊಡಲಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ತಮ್ಮ ಪುತ್ರ ಹರ್ಷ ಮೊಯಿಲಿ, ಸಚಿವರಾದ ರೋಷನ್‌ ಬೇಗ್‌, ಟಿ.ಬಿ. ಜಯಚಂದ್ರ, ಕಾಗೋಡು ತಿಮ್ಮಪ್ಪ, ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತಿತರರು ತಮ್ಮ ಮಕ್ಕಳಿಗೆ ಪಕ್ಷದ ಟಿಕೆಟ್‌ ಕೊಡುವಂತೆ ಒತ್ತಡ ಹೇರುತ್ತಿದ್ದಾರೆ.

ಟಿಕೆಟ್‌ ಆಕಾಂಕ್ಷಿಗಳ ಅರ್ಜಿಗಳನ್ನು ರಾಜ್ಯ ಚುನಾವಣಾ ಸಮಿತಿ ಪರಿಶೀಲಿಸಿದ ಬಳಿಕ ಪರಿಶೀಲನಾ ಸಮಿತಿಗೆ ಕಳುಹಿಸಲಿದೆ. ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಅಭ್ಯರ್ಥಿಗಳ ‍ಪಟ್ಟಿ ಸಿದ್ಧಪಡಿಸಲಿದೆ.

ಮಿಸ್ತ್ರಿ ಸಮಿತಿ ಅನೇಕ ಅಭ್ಯರ್ಥಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿತು. ರಾಜಾಜಿನಗರದಿಂದ ಟಿಕೆಟ್‌ ಕೇಳಿರುವ ಮಾಜಿ ಮೇಯರ್‌ ಜಿ. ಪದ್ಮಾವತಿ, ನಗರದ ತಗ್ಗು ಪ್ರದೇಶಗಳಿಗೆ ಈಚೆಗೆ ಮಳೆ ನೀರು ನುಗ್ಗಿದಾಗ ತಾವು ಮಾಡಿದ ಕೆಲಸವನ್ನು ಸಮಿತಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.