ADVERTISEMENT

ಕಾನೂನು ಮತ್ತು ಸುವ್ಯವಸ್ಥೆ: ಸರ್ಕಾರಕ್ಕೆ ಸಿಗದ ಮನ್ನಣೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಕಾನೂನು ಮತ್ತು ಸುವ್ಯವಸ್ಥೆ: ಸರ್ಕಾರಕ್ಕೆ ಸಿಗದ ಮನ್ನಣೆ
ಕಾನೂನು ಮತ್ತು ಸುವ್ಯವಸ್ಥೆ: ಸರ್ಕಾರಕ್ಕೆ ಸಿಗದ ಮನ್ನಣೆ   

ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ಆಪಾದಿಸುತ್ತಿವೆ. ಈ ಸಂದರ್ಭದಲ್ಲಿ, ‘ದಕ್ಷ್‌’ ಸಂಸ್ಥೆ ಜತೆ ನಡೆಸಿದ ಸಮೀಕ್ಷೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕಂಡುಕೊಂಡ ಜನಾಭಿಪ್ರಾಯವನ್ನು ‘ಪ್ರಜಾವಾಣಿ’ ಇಲ್ಲಿ ಪ್ರಸ್ತುತಪಡಿಸುತ್ತಿದೆ.

ವಿರೋಧ ಪಕ್ಷಗಳ ಇಂತಹ ಆರೋಪ ಕಾವೇರುವುದಕ್ಕೆ ಮುನ್ನವೇ ನಡೆಸಿದ ಸಮೀಕ್ಷೆಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕೇಳಲಾದ ಪ್ರಶ್ನೆಗೆ ರಾಜ್ಯ ಸರ್ಕಾರ ಅತ್ಯುತ್ತಮ ಅಂಕವನ್ನೇನೂ ಪಡೆದಿಲ್ಲ. ಸಂಗ್ರಹಿಸಿದ ದತ್ತಾಂಶಗಳನ್ನು ಕ್ರೋಡೀಕರಿಸಿ, ಅದನ್ನು ಮರು ವಿಭಜಿಸಿ, 10 ಅಂಕಗಳಿಗೆ ಜನರು ಎಷ್ಟು ಅಂಕ ಕೊಟ್ಟಿದ್ದಾರೆ ಎಂದು ಸಮೀಕ್ಷಾ ವರದಿ ವಿಶ್ಲೇಷಿಸಿದೆ.

ಈ ವಿಷಯದಲ್ಲಿ ಇಡೀ ರಾಜ್ಯದ ಸರಾಸರಿ ಲೆಕ್ಕದಲ್ಲಿ 10ಕ್ಕೆ 7.1 ಅಂಕ ಸಿಕ್ಕಿದೆ. ಇದರಿಂದ ಅದು ‘ಮೊದಲ ದರ್ಜೆ’ಯಲ್ಲಿ ತೇರ್ಗಡೆಯಾಗಿದೆಯಾದರೂ, ಕಾನೂನು ಮತ್ತು ಸುವ್ಯವಸ್ಥೆ ಪಕ್ಕಾ ಸರಿದಾರಿಯಲ್ಲಿದೆ ಎಂಬುದನ್ನು ಸಾಬೀತು ಪಡಿಸುವಂತೆ ಎಲ್ಲಿಯೂ 10ಕ್ಕೆ 10 ಅಂದರೆ, ನೂರಕ್ಕೆ ನೂರು ಉತ್ತಮ ಆಡಳಿತ ಇದೆ ಎಂದು ಜನರು ಹೇಳಿಲ್ಲ.

ADVERTISEMENT

224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಸಮೀಕ್ಷೆ ಆಧರಿಸಿ ಕಾನೂನು ಮತ್ತು ಸುವ್ಯವಸ್ಥೆ ವಲಯವಾರು ಹೇಗಿದೆ ಎಂದು ಅರ್ಥೈಸಿಕೊಳ್ಳುವ ಯತ್ನವನ್ನೂ ಸಮೀಕ್ಷೆಯಲ್ಲಿ ಮಾಡಲಾಗಿದೆ. ಇಲ್ಲಿಯೂ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಹುತೇಕ ಪ್ರದೇಶಗಳಲ್ಲಿ ಸರಾಸರಿ ಅಂಕ 7ಕ್ಕಿಂತ ಕಡಿಮೆ ಇದೆ.

ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಮತದಾರರು ತಮ್ಮ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಳಿದ ಐದು ವಲಯಗಳಿಗೆ ಹೋಲಿಸಿದರೆ ಈ ಭಾಗದಲ್ಲೇ 7.88 ಅಂಕ ರಾಜ್ಯ ಸರ್ಕಾರಕ್ಕೆ ಸಿಕ್ಕಿದೆ.

ಆದರೆ, ಈ ವಲಯದ ಗ್ರಾಮೀಣ ಪ್ರದೇಶದ ಜನರು ಮಾತ್ರ 6.51 ಅಂಕ ಕೊಟ್ಟಿದ್ದಾರೆ. ನಗರ ಪ್ರದೇಶದಲ್ಲಿ ಉತ್ತಮವಾಗಿದ್ದರೂ ಗ್ರಾಮೀಣ ಪ್ರದೇಶದ ಜನ ಅತೃಪ್ತಿ ಹೊಂದಿರುವುದು ಇದರಿಂದ ಸ್ಪಷ್ಟ.

ಆರು ವಲಯಗಳಿಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸರ್ಕಾರಕ್ಕೆ ಅತ್ಯಂತ ಕಡಿಮೆ ಅಂಕ ಸಿಕ್ಕಿದೆ. ಅಂದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬುದನ್ನು ಸಮೀಕ್ಷೆ ತೋರಿಸಿದೆ. ಈ ಭಾಗದ ಗ್ರಾಮೀಣ ಪ್ರದೇಶದಲ್ಲಂತೂ ಸರ್ಕಾರ ಪಡೆದ ಅಂಕ 6.48.

ಮುಂಬೈ ಕರ್ನಾಟಕದಲ್ಲಿಮತದಾರರು ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಸರ್ಕಾರಕ್ಕೆ ಒಳ್ಳೆಯ ಅಂಕವನ್ನೇ ದಯಪಾಲಿಸಿದ್ದಾರೆ. ಈ ಭಾಗದಲ್ಲಿ ಸರ್ಕಾರ ಪಡೆದ ಸರಾಸರಿ ಅಂಕ 7.64.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗದ 10 ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸರ್ಕಾರ 7.03 ಅಂಕ ಪಡೆದಿದೆ.

ಇಡೀ ರಾಜ್ಯದ ಒಟ್ಟಾರೆ ಸರಾಸರಿಗಿಂತ ಈ ಭಾಗದಲ್ಲಿ ಕಡಿಮೆ ಅಂಕಗಳನ್ನು ಸರ್ಕಾರ ಗಿಟ್ಟಿಸಿದೆ. ಗ್ರಾಮೀಣ ಪ್ರದೇಶದಲ್ಲಿ 6.98 ಅಂಕ ಸಿಕ್ಕಿದ್ದರೆ, ನಗರ ಪ್ರದೇಶದಲ್ಲಿ 7.08 ಅಂಕವನ್ನು ಸರ್ಕಾರ ಪಡೆದಿದೆ.

‘ಕದಡಿದ ಕರಾವಳಿ’ಯ ಸ್ಥಿತಿಗತಿಯೇ ಉತ್ತಮ!
ಇತ್ತೀಚಿನ ದಿನಮಾನಗಳಲ್ಲಿ ಕೋಮುಗಲಭೆ, ಮತೀಯ ಗೂಂಡಾಗಿರಿ ಹಾಗೂ ಮತೀಯ ದ್ವೇಷದ ಕೊಲೆಗಳಿಗೆ ಕರಾವಳಿಯು ತುತ್ತಾಗಿರುವುದು ರಹಸ್ಯವೇನಲ್ಲ.

ಈ ಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಗೃಹ ಇಲಾಖೆ ಕೂಡ ಒಪ್ಪಿಕೊಳ್ಳುತ್ತದೆ. ‘ಹಿಂದೂ’ಗಳಿಗೆ ರಕ್ಷಣೆ ಇಲ್ಲವೆಂದು ಹೇಳುತ್ತಲೇ ಬಂದಿರುವ ಬಿಜೆಪಿ ನಾಯಕರು, ಇದಕ್ಕಾಗಿ ಮಂಗಳೂರು ಚಲೋ, ರ‍್ಯಾಲಿಗಳನ್ನೂ ನಡೆಸಿದ್ದಾರೆ. ಆದರೆ, ಸಮೀಕ್ಷೆಯಲ್ಲಿ ಮಾತ್ರ ಇದಕ್ಕಿಂತ ವ್ಯತಿರಿಕ್ತವಾದ ಅಭಿಮತ ಹೊರಹೊಮ್ಮಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನಗರ ಪ್ರದೇಶಗಳ ಜನರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರದ ಪಾತ್ರದ ಬಗ್ಗೆ ಕೇಳಿದ್ದಕ್ಕೆ, 10 ಅಂಕಗಳಿಗೆ 8.11 ಅಂಕ ನೀಡಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಈ ಅಂಕ 7.32ರಷ್ಟಿದೆ.  ನಗರ ಪ್ರದೇಶದ ಜನರು ಸರ್ಕಾರದ ಕ್ರಮದ ಬಗ್ಗೆ ಹೆಚ್ಚಿನ ತೃಪ್ತಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.