ADVERTISEMENT

ಕಿರಿದಾದ ಓಣಿಗಳಲ್ಲಿ ಕಿಕ್ಕಿರಿದು ಸೇರಿದ ಜನ

ದಿನೇಶ್ ಗುಂಡೂರಾವ್ ಪರ ಪ್ರಚಾರದ ವೇಳೆ ಪೈಪೋಟಿಗೆ ಬಿದ್ದ ಬೆಂಗಲಿಗರ ನಡುವೆ ಮಾತಿನ ಚಕಮಕಿ

ಪ್ರವೀಣ ಕುಮಾರ್ ಪಿ.ವಿ.
Published 9 ಮೇ 2018, 19:44 IST
Last Updated 9 ಮೇ 2018, 19:44 IST
ಸ್ವತಂತ್ರಪಾಳ್ಯದಲ್ಲಿ ದಿನೇಶ್ ಗುಂಡೂರಾವ್ ಮತಯಾಚಿಸಿದರು. -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್‌
ಸ್ವತಂತ್ರಪಾಳ್ಯದಲ್ಲಿ ದಿನೇಶ್ ಗುಂಡೂರಾವ್ ಮತಯಾಚಿಸಿದರು. -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್‌   

ಬೆಂಗಳೂರು: ರುಮಾಲು ಸುತ್ತಿದಂತೆ ಬೆಸೆದುಕೊಂಡ ಓಣಿಗಳಿರುವ ಪ್ರದೇಶ ಸ್ವತಂತ್ರಪಾಳ್ಯ. ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಗುಂಡೂರಾವ್‌ ಭಾರಿ ಸಂಖ್ಯೆಯಲ್ಲಿದ್ದ ಬೆಂಬಲಿಗರ ಪಡೆಯ ನಡುವೆ ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ಅಲೆದು ಮತ ಕೇಳಿದರು.

ಮನೆಗೆ ಬಂದಿದ್ದವರನ್ನು ಮಾತನಾಡಿಸಿ ಬೆಳಿಗ್ಗೆ 7.45ಕ್ಕೆ ಮನೆ ಬಿಟ್ಟ ದಿನೇಶ್‌, 8 ಗಂಟೆ ಸುಮಾರಿಗೆ ಸ್ವತಂತ್ರಪಾಳ್ಯ ತಲುಪಿದ್ದರು. ಅಲ್ಲಿನ ದ್ರೌಪದಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮತಯಾಚನೆ ಆರಂಭಿಸಿದರು. ಅವರು ಸ್ಥಳಕ್ಕೆ ಬರುವಾಗಲೇ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು.

ಓಣಿಗಳಲ್ಲಿ ಸಾಗುತ್ತಿದ್ದ ಅಭ್ಯರ್ಥಿಯನ್ನು ಹಿಂಬಾಲಿಸಲು ಕಾರ್ಯಕರ್ತರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಅವರನ್ನು ಸಂಭಾಳಿಸಿಕೊಂಡು ಮುಂದೆ ಹೋಗಲು ಅಭ್ಯರ್ಥಿ ಹರಸಾಹಸ ಪಡಬೇಕಾದ ಸ್ಥಿತಿ ಇತ್ತು.

ADVERTISEMENT

ಚುನಾವಣಾ ಪ್ರಚಾರಕ್ಕೆ ಎರಡೇ ದಿನ ಬಾಕಿ ಇರುವುದರಿಂದ ಅಲ್ಪಾವಧಿಯಲ್ಲಿ ಆದಷ್ಟು ಹೆಚ್ಚು ಮತದಾರರನ್ನು ತಲುಪಬೇಕೆಂಬ ಧಾವಂತ ಅಭ್ಯರ್ಥಿಯ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು. ‘ಸ್ವಲ್ಪ ಬೇಗ ಬೇಗ ಹೋಗ್ರೋ’ ಎಂದು ಬೆಂಬಲಿಗರನ್ನು ಮೆಲುದನಿಯಲ್ಲಿ ಗದರುತ್ತಲೇ ಸಾಗಿದರು.

‘ಸಾಹೇಬ್ರಿಗೆ ಜಾಗ ಬಿಡ್ರೋ.. ಸ್ವಲ್ಪ ಪಕ್ಕಕ್ಕೆ ಸರೀರೋ..’ ಎಂದು ಸ್ಥಳೀಯ ಮುಖಂಡರು ದಾರಿ ಮಾಡಿಕೊಡುತ್ತಿದ್ದರು. ಅಭ್ಯರ್ಥಿ ಪಕ್ಕವೇ ಹೋಗಬೇಕೆಂದು ಬೆಂಬಲಿಗರು ಪೈಪೋಟಿಗೆ ಬಿದ್ದಿದ್ದರಿಂದ ಒಂದೆರಡು ಕಡೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪ್ರಚಾರ ಕಾರ್ಯದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ ಹುಡುಗರು, ಅಭ್ಯರ್ಥಿ ಸಾಗುವ ಹಾದಿಯ ಮನೆಗಳ ಮಹಡಿಗಳನ್ನೇರಿ ಹೂ–ಪಕಳೆಗಳನ್ನು ಎಸೆದರು. ಇನ್ನು ಕೆಲವು ಯುವಕರು ಪೇಪರ್‌ ಬ್ಲಾಸ್ಟ್‌ನಿಂದ ಬಣ್ಣದ ಕಾಗದದ ಚೂರುಗಳ ಮಳೆ ಸುರಿಸಿದರು.ಎಳೆ

ಯರಿಗೆ ಘೋಷಣೆ ಕೂಗುವ ತವಕ. ಒಮ್ಮೆ ಕನ್ನಡದಲ್ಲಿ, ಮಗದೊಮ್ಮೆ ತಮಿಳಿನಲ್ಲಿ ರಾಗವಾಗಿ ಬಗೆ ಬಗೆಯ ಘೋಷವಾಕ್ಯಗಳನ್ನು ಕೂಗುತ್ತಾ ಚುನಾವಣಾ ಪ್ರಚಾರ ರಂಗೇರುವಂತೆ ಮಾಡಿದರು.

ಬೀದಿ ಜಗಳ: ‘ಆ ಬೀದಿ ಬೇಡ. ಈ ಬೀದಿಯಲ್ಲಿ ಬನ್ನಿ. ನಮ್ಮ ಜನ ಕಾಯುತ್ತಿದ್ದಾರೆ’ ಎಂದು ಸ್ಥಳೀಯ ಮುಖಂಡರೊಬ್ಬರು ಆಹ್ವಾನವಿತ್ತರು. ಆಗ ಇನ್ನೊಬ್ಬ ಮುಖಂಡ, ‘ಸಾರ್‌... ಇಲ್ಲೇ ಮುಂದೆ ಹೋಗಿ, ಮತ್ತೆ ಇಲ್ಲಿಗೆ ಬರೋಣ’ ಎಂದು ಅರ್ಧ ದಾರಿವರೆಗೆ ಹೋಗಿದ್ದ ಅಭ್ಯರ್ಥಿಯನ್ನು ಹಿಂದಕ್ಕೆ ಕರೆದರು. ‘ನೀವಿಬ್ಬರೂ ಹೀಗೆ ಒಟ್ಟೊಟ್ಟಿಗೆ ಕರೆದರೆ ನಾನೇನು ಮಾಡುವುದು. ಎರಡು ಕಡೆಗೂ ಬರುತ್ತೇನೆ. ಯಾರಿಗೂ ಬೇಜಾರು ಮಾಡುವುದಿಲ್ಲ’ ಎಂದು ದಿನೇಶ್‌ ಸಮಾಧಾನಪಡಿಸಿದರು.

ಈ ಹಿಂದೆ ಕೊಳೆಗೇರಿಯಾಗಿದ್ದ ಈ ಪ್ರದೇಶದಲ್ಲಿ ಪೆಟ್ಟಿಗೆ ಜೋಡಿಸಿಟ್ಟಂತೆ ಪುಟ್ಟ ಪುಟ್ಟ ಆರ್‌ಸಿಸಿ ಮನೆಗಳಿವೆ. ಒಳಗೆ ಸಾಕಷ್ಟು ಸ್ಥಳಾವಕಾಶ ಇಲ್ಲ. ಹಾಗಾಗಿ ಜನ ಮನೆ ಎದುರಿನ ಓಣಿಗಳಲ್ಲೇ ಬಟ್ಟೆ ಒಗೆಯುತ್ತಿದ್ದ, ಅಡುಗೆ ಮಾಡುತ್ತಿದ್ದ ದೃಶ್ಯಗಳೂ ಕಂಡು ಬಂದವು. ಏಕಾಏಕಿ ನುಗ್ಗಿಬಂದ ಜನರ ದಂಡನ್ನು ಕಂಡು ಕಂಗಾಲಾದ ಕೆಲವು ಮಹಿಳೆಯರು ಬಟ್ಟೆ ಒಗೆಯುವುದನ್ನು ನಿಲ್ಲಿಸಿ ಮನೆಯೊಳಗೆ ಹೋದರು. ಇನ್ನು ಕೆಲವೆಡೆ ಉಪಾಹಾರ ಸೇವಿಸುತ್ತಿದ್ದ ಮಂದಿ ಕಾರ್ಯಕರ್ತರ ಘೋಷಣೆಯ ಸದ್ದು ಕೇಳಿ ಮನೆಯಿಂದ ಹೊರಗೋಡಿ ಬಂದರು.

ಸ್ವತಂತ್ರಪಾಳ್ಯ, ಹನುಮಂತಪುರ, ಕ್ರಿಶ್ಚಿಯನ್‌ ಕಾಲೊನಿ ಹಾಗೂ ಬಾಪೂಜಿ ಬ್ಲಾಕ್‌ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೆ ಪ್ರಚಾರ ನಡೆಸಿದ ಅಭ್ಯರ್ಥಿ ದಾರಿ ಮಧ್ಯೆ ಸಿಕ್ಕ ಮಂದಿರ, ಚರ್ಚ್‌ಗಳಿಗೂ ಭೇಟಿ ನೀಡಿದರು.

ಕಾರ್ಯಕರ್ತರು ಅಲ್ಲಲ್ಲಿ ಸಿಡಿಸುತ್ತಿದ್ದ ಮಾಲೆ ಪಟಾಕಿಯ ದಟ್ಟ ಹೊಗೆ ಒಣಿಗಳ ತುಂಬಾ ಆವರಿಸುತ್ತಿತ್ತು. ಆ ಹೊಗೆ ತಿಳಿಯಾಗುವವರೆಗೆ ಕಾದು ಅಭ್ಯರ್ಥಿ ಮುಂದೆ ಹೋಗುತ್ತಿದ್ದರು.

‘ತಣ್ಣಿ ಬರುತ್ತಿಲ್ಲ– ಬೋರ್‌ವೆಲ್‌ ಹಾಕಿಸಿ’
‘ನಮಗೆ ಎರಡು ಮೂರು ದಿನಗಳಿಗೊಮ್ಮೆ ಕಾವೇರಿ ನೀರು ಬರುತ್ತದೆ. ಬಟ್ಟೆ ಒಗೆಯಲು, ಸ್ನಾನಕ್ಕೆ ತಣ್ಣಿ ಇಲ್ಲ. ಇಲ್ಲೊಂದು ಬೋರ್‌ವೆಲ್‌ ಹಾಕಿಸಿಕೊಡಿ’ ಎಂದು ಹನುಮಂತಪುರದ ಸಾವಿತ್ರಿ ಅಳಲು ತೋಡಿಕೊಂಡರು.

‘ಚುನಾವಣೆ ಮುಗೀಲಿ ಹಾಕಿಸಿ ಕೊಡೋಣ’ ಎಂದು ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

‘ಸ್ವತಂತ್ರ ಪಾಳ್ಯದ ಜನ ಈಗಲೂ ಅತಂತ್ರ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ಇಲ್ಲಿನ ಬಹುತೇಕ ಮನೆಗಳಿಗೆ ಖಾತೆ ಆಗಿಲ್ಲ. ಕೆಲವರಂತೂ 70 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ’ ಎಂದು ಏಳನೇ ಮುಖ್ಯರಸ್ತೆ ಬಳಿಯ ನಿವಾಸಿ ಅಲವೇಲು ಅಳಲು ತೋಡಿಕೊಂಡರು.

ಪ್ರಚಾರಕ್ಕಾಗಿ ವ್ಯಾಯಾಮಕ್ಕೆ ಗುಡ್‌ಬೈ
ದಿನೇಶ್‌ ಗುಂಡೂರಾವ್‌ ಬೆಳಿಗ್ಗೆ 6 ಗಂಟೆಗೆ ಎದ್ದು, ನಿತ್ಯ 1 ಗಂಟೆ ವ್ಯಾಯಾಮ ಮಾಡುತ್ತಾರೆ. ಬಳಿಕ ತುಸು ವಿಶ್ರಾಂತಿ ಪಡೆಯುತ್ತಾರೆ. 8 ಗಂಟೆಯಿಂದ 9.30ರವರೆಗೆ ಮನೆಗೆ ಭೇಟಿ ನೀಡುವ ಜನರನ್ನು ಮಾತನಾಡಿಸುತ್ತಾರೆ. ಬಳಿಕ ಉಪಾಹಾರ ಮುಗಿಸಿ ಶೇಷಾದ್ರಿಪುರ ಶಾಸಕರ ಕಚೇರಿಗೆ ಹೋಗುತ್ತಾರೆ. ನಂತರ ಮನೆ ಸೇರುವುದು ರಾತ್ರಿಯ ಬಳಿಕವೇ. ಮಧ್ಯಾಹ್ನದ ಊಟ, ಸಂಜೆ ಉಪಾಹಾರಗಳೆಲ್ಲ ಮನೆಯಿಂದ ಹೊರಗಡೆಯೇ.

ಈಗ ಹೆಚ್ಚಾಗಿ ಬೆಳಿಗ್ಗೆ 6 ಗಂಟೆಗೇ ಉದ್ಯಾನಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಾರೆ. ಮನೆಗೆ ಬಂದವರನ್ನು ಮಾತನಾಡಿಸಿ ಹೊರಡುವಾಗ ಕೆಲವೊಮ್ಮೆ ತಡವಾಗುತ್ತದೆ. ಈಗಂತೂ ಮನೆ ಸೇರುವಾಗ ರಾತ್ರಿ 11 ದಾಟಿರುತ್ತದೆ. ಪ್ರಚಾರದ ಭರಾಟೆಯಲ್ಲಿ ಸಾಹೇಬರಿಗೆ ವ್ಯಾಯಾಮಕ್ಕೆ ಸಮಯವೇ ಸಿಗುತ್ತಿಲ್ಲ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

‘ಆರತಿ’ಗೆ ‘ಕಾಣಿಕೆ’
ಮನೆಬಾಗಿಲಿಗೆ ಮತ ಭಿಕ್ಷೆ ಬೇಡಿ ಬಂದ ನಾಯಕನಿಗೆ ಅಭಿಮಾನಿಗಳು ಹಾರ ಹಾಕಿ, ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ಇನ್ನು ಕೆಲವೆಡೆ ಮಹಿಳೆಯರು ಆರತಿ ಬೆಳಗಿದರು. ಅಭ್ಯರ್ಥಿಯು ಆರತಿ ಸಲುವಾಗಿ ಅಲ್ಲಲ್ಲಿ ನಿಂತು ಮಂದಗತಿಯಲ್ಲಿ ಮುಂದೆ ಸಾಗಬೇಕಾಗುತ್ತಿತ್ತು. ‘ಏನಮ್ಮಾ... ಈ ಸಲವೂ ಮರೀಬೇಡಿ..’ ಎಂದು ವಿನಮ್ರವಾಗಿ ಕೈಮುಗಿದು ಮುಂದಕ್ಕೆ ಹೋದರು. ಆರತಿ ಬೆಳಗಿದವರ ಕೈಗೆ ‘ಕಾಣಿಕೆ’ ಸಂದಾಯವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.