ADVERTISEMENT

ಕೈ– ಕಮಲ ಗಾಂಧರ್ವ ವಿವಾಹ

ಕೆ.ಜೆ.ಮರಿಯಪ್ಪ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ಕೈ– ಕಮಲ ಗಾಂಧರ್ವ ವಿವಾಹ
ಕೈ– ಕಮಲ ಗಾಂಧರ್ವ ವಿವಾಹ   

ದೇವರಾಜ ಅರಸು ಅವರನ್ನು ಗುರು ಎಂದು ಪರಿಗಣಿಸಿ, ಕಾಂಗ್ರೆಸ್‌ನಲ್ಲಿ ರಾಜಕೀಯ ಜೀವನ ಆರಂಭಿಸಿದವರು ಹಿರಿಯ ರಾಜಕಾರಣಿ ಅಡಗೂರು ಎಚ್.ವಿಶ್ವನಾಥ್. ಇತ್ತೀಚೆಗೆ ಜೆಡಿಎಸ್ ಸೇರಿರುವ ಅವರು, ಹುಣಸೂರು ಕ್ಷೇತ್ರದಲ್ಲಿ ರಾಜಕೀಯದ ಎರಡನೇ ಅಧ್ಯಾಯ ಆರಂಭಿಸಿದ್ದಾರೆ. ಕಾಂಗ್ರೆಸ್‌ ತೊರೆಯಲು ನಿರ್ಮಾಣವಾದ ಸನ್ನಿವೇಶ, ಈಗಿನ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ:

l ಕಾಂಗ್ರೆಸ್‌ನಿಂದ ಹೊರಬಂದಿದ್ದಕ್ಕೆ ನೀವು ಸಮರ್ಥ ಕಾರಣ ನೀಡಿಲ್ಲ?

ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ಮುಖ್ಯಮಂತ್ರಿಯಾದ ನಂತರ, ಸಂಪತ್ತು ಕೊಳ್ಳೆ ಹೊಡೆದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿಲ್ಲ. ಇದನ್ನು ನಾನು ಪ್ರಶ್ನಿಸಿದ್ದೇ ತಪ್ಪಾಯಿತು.

ADVERTISEMENT

ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಮಕ್ಕಳು ಮೈಸೂರು ಜಿಲ್ಲೆಯಲ್ಲಿ ಮರಳು ದಂಧೆ ನಡೆಸುತ್ತಿದ್ದರು. ಮರಳು ಸಾಗಿಸಲು ಕೇರಳದ ಗಡಿಯವರೆಗೆ ಪೊಲೀಸರೇ ರಕ್ಷಣೆಗೆ ನಿಂತಿದ್ದರು. ಇದನ್ನು ಸಿದ್ದರಾಮಯ್ಯ ಅವರ ಬಳಿ ಪ್ರಸ್ತಾಪಿಸುತ್ತಿದ್ದಂತೆ ಸಿಟ್ಟಾದರು. ತಮ್ಮ ಮಕ್ಕಳ ಬಗ್ಗೆ ಹೇಳಿದ್ದು ಕಣ್ಣು ಕೆಂಪಾಗಿಸಿತು. ತಪ್ಪುಗಳನ್ನು ಸರಿಪಡಿಸಿ ಎಂದು ಹೇಳಿದ್ದು ಆಪ್ಯಾಯಮಾನವಾಗಿ ಕಾಣಲಿಲ್ಲ. ನನ್ನನ್ನು ದೂರ ತಳ್ಳಿದರು. ಜನರ ಎದುರು ಅವಮಾನಿಸತೊಡಗಿದರು. ಪಕ್ಷದಿಂದ ಹೊರಕ್ಕೆ ಹಾಕಿಸಲು ಸಂಚು ರೂಪಿಸಿದರು. ಇಂತಹ ಅವಮಾನದಿಂದಾಗಿ ಪಕ್ಷ ಬಿಟ್ಟು ಹೊರಬಂದೆ.

l ಪಕ್ಷ ಬಿಡಲು ಇದಿಷ್ಟೇ ಕಾರಣವಾಯಿತೇ?

ರಾಜ್ಯದಲ್ಲಿ ಮತ್ತೊಬ್ಬ ಕುರುಬ ನಾಯಕ ಇರಬಾರದು ಎಂಬ ಸಿದ್ದರಾಮಯ್ಯ ಲೆಕ್ಕಾಚಾರವೂ ಮತ್ತೊಂದು ಕಾರಣ. ಇದಕ್ಕಾಗಿ ನಮ್ಮ ಸಮಾಜದ ಯಾರನ್ನೂ ಮಂತ್ರಿ ಮಾಡಲಿಲ್ಲ. ನೆಪಮಾತ್ರಕ್ಕೆ ಎಚ್.ವೈ.ಮೇಟಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಒಬ್ಬರನ್ನೂ ಬೆಳೆಸಲಿಲ್ಲ. ಕುರುಬ ನಾಯಕರನ್ನು ತುಳಿದರು. ಹಾಗಂತ ನಮ್ಮ ಸಮುದಾಯಕ್ಕೆ ಸಿದ್ದರಾಮಯ್ಯ ಏಕೈಕ ನಾಯಕ ಅಲ್ಲ. ಅವರನ್ನು ಮುಖ್ಯಮಂತ್ರಿ ಮಾಡಲು ಸಮುದಾಯದವರು ಪಕ್ಷಾತೀತವಾಗಿ ಒಂದಾದರು. ಈಗ ಆ ಪರಿಸ್ಥಿತಿ ಇಲ್ಲ. ಎಮ್ಮೆ, ದನ ಮೇಯಿಸಿದೆ ಎನ್ನುತ್ತಾರೆ. ಕುರಿ ಮೇಯಿಸಿದೆ ಎಂದು ಹೇಳುತ್ತಿಲ್ಲ. ಇದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಿ.

l ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿತ್ತು. ಸಿದ್ದರಾಮಯ್ಯ ಅವರಿಗಾಗಿ ಪಕ್ಷ ತೊರೆಯಬೇಕಾಯಿತೆ?

ಸಾರ್ವಜನಿಕ ಜೀವನದ ಸಂಧ್ಯಾಕಾಲದಲ್ಲಿ ಸುಖಮಯ ಬದುಕು ಬಯಸುವುದು ಸಹಜ. ಈ ಆಸೆ ಎಲ್ಲರಿಗೂ ಇರುತ್ತದೆ. ಅಂತಹ ಬದುಕನ್ನೇ ಹಾಳು ಮಾಡಿದರು. ಇದರಿಂದ ಸಾಕಷ್ಟು ನೊಂದು, ಬೆಂದು ಕಠಿಣ ನಿರ್ಧಾರ ಕೈಗೊಂಡೆ. ಕಾಂಗ್ರೆಸ್ ತಾಯಿ ಇದ್ದಂತೆ. ಪಕ್ಷವನ್ನು ಎಂದೂ ಟೀಕಿಸಿಲ್ಲ. ನಾಯಕತ್ವ ಪ್ರಶ್ನಿಸಿದ್ದೇನೆ.

l ದೇವರಾಜ ಅರಸು ಅವರ ಕಾಲಕ್ಕೂ ಈಗಿನ ಕಾಂಗ್ರೆಸ್‌ಗೂ ಏನು ವ್ಯತ್ಯಾಸ?

ಹಿಂದೆ ಪಕ್ಷ, ನಾಯಕ ನಿಷ್ಠೆ ಇತ್ತು. ಈಗ ಏನಿದೆ ಹೇಳಿ? ಪಕ್ಷದ ಮೇಲೆ ಯಾರಿಗೂ ಗೌರವ ಇಲ್ಲ. ದುಡಿದವರಿಗೆ ಬೆಲೆ ಸಿಗುತ್ತಿಲ್ಲ. ದುಡ್ಡಿದ್ದವರಿಗೆ ಮಣೆ ಎನ್ನುವಂತಾಗಿದೆ. ಆ ಪಕ್ಷದಲ್ಲಿ ತತ್ವ, ಸಿದ್ಧಾಂತ ಆಧಾರಿತ ಕಾರ್ಯಕ್ರಮಗಳು ಇಲ್ಲ. ಈಗೇನಿದ್ದರೂ ಸಿದ್ದರಾಮಯ್ಯ ಕಾಂಗ್ರೆಸ್ ಆಗಿದೆ. ರಾಹುಲ್ ಗಾಂಧಿ ಅವರನ್ನು ಹೈಕಮಾಂಡ್ ಎನ್ನಲಾಗುತ್ತದೆಯೇ?

l ಎಚ್.ಡಿ.ದೇವೇಗೌಡ ಅವರನ್ನು ಟೀಕಿಸುತ್ತಿದ್ದಿರಿ. ಕೊನೆಗೆ ಅದೇ ಪಕ್ಷ ಸೇರಿದ್ದೀರಿ?

ನನ್ನ ನಡವಳಿಕೆ ಬಿಟ್ಟಿಲ್ಲ. ಆ ಪಕ್ಷದ ತತ್ವ, ಸಿದ್ಧಾಂತ ಟೀಕಿಸಿಲ್ಲ. ಕೆಲ ಸಂದರ್ಭಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿದ್ದೇನೆ. ಒಂದು ಜಾತ್ಯತೀತ ಪಕ್ಷದಿಂದ ಮತ್ತೊಂದು ಜಾತ್ಯತೀತ ಪಕ್ಷಕ್ಕೆ ಬಂದಿದ್ದೇನೆ.

l ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಿಲ್ಲವೇ?

ಕುಮಾರಸ್ವಾಮಿ ಎರಡು ಕಡೆ ಸ್ಪರ್ಧಿಸಿರುವುದು ಸಂಪೂರ್ಣ ರಾಜಕಾರಣ. ರಾಮನಗರ, ಚನ್ನಪಟ್ಟಣದಲ್ಲಿ ವೈರಿಗಳನ್ನು ಮಣಿಸಬೇಕಿದೆ. ಆದರೆ ಅಧಿಕಾರ ಅನುಭವಿಸಿದವರು ಜಾಗ ಖಾಲಿ ಮಾಡಬಾರದಿತ್ತು. ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಿತ್ತು.

l ಅತಂತ್ರ ವಿಧಾನಸಭೆ ನಿರ್ಮಾಣವಾದರೆ ನಿಮ್ಮ ಆಯ್ಕೆ?

ಮತದಾರರು ಈ ರೀತಿ ಮಾಡುವುದಿಲ್ಲ ಅಂದುಕೊಂಡಿ ದ್ದೇನೆ. ಜೆಡಿಎಸ್‌ಗೆ ಬಹುಮತ ಬರಲಿದೆ. ಹೊಂದಾಣಿಕೆ ಅನಿವಾರ್ಯವಾದರೆ ಜಾತ್ಯತೀತ ಪಕ್ಷದ ಜತೆ ಹೋಗಬೇಕಾಗುತ್ತದೆ. ಷರತ್ತು ಇಲ್ಲದೆ ಯಾವುದೂ ನಡೆಯುವುದಿಲ್ಲ.

l ಚಾಮುಂಡೇಶ್ವರಿ– ವರುಣಾದಲ್ಲಿ ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಆರೋಪ ಇದೆ...

ಚಾಮುಂಡೇಶ್ವರಿಯಲ್ಲಿ ಯಾರ ಜತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ. ವರುಣಾದಲ್ಲಿ ಬಿಜೆಪಿಯಿಂದ ಬಿ.ವೈ.ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದು ನೋಡಿದರೆ ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರು ತಮ್ಮ ಪುತ್ರ ಡಾ. ಯತೀಂದ್ರ ಅವರನ್ನು ಗೆಲ್ಲಿಸಿಕೊಳ್ಳಲು ಬಿಜೆಪಿಯಿಂದ ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸುವಂತೆ ನೋಡಿಕೊಂಡಿದ್ದಾರೆ. ಅನಂತಕುಮಾರ್– ಸಿದ್ದರಾಮಯ್ಯ ನಡುವಿನ ಒಳ ಒಪ್ಪಂದದಿಂದ ಇದೆಲ್ಲ ಆಗಿದೆ.

ಚುನಾವಣೆ ಪೂರ್ವದಲ್ಲೇ ಬಿಜೆಪಿ ಜತೆ ಕಾಂಗ್ರೆಸ್ ಕೈ ಜೋಡಿಸಿದೆ. ಇದು ಈ ಕ್ಷೇತ್ರದ ಹೊಂದಾಣಿಕೆಯಂತೆ ಕಾಣುತ್ತಿಲ್ಲ. ಮುಂದಿನ ಭವಿಷ್ಯವನ್ನು ಸೂಚಿಸುತ್ತದೆ. ಬಿಜೆಪಿ– ಕಾಂಗ್ರೆಸ್ ನಡುವೆ ಗಾಂಧರ್ವ ವಿವಾಹವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ಅದಕ್ಕಾಗಿ ಕೋಮುವಾದಿಗಳ ಜತೆ ಕೈ ಜೋಡಿಸಿದೆ. ದೇವೇಗೌಡರಿಗೆ ಪುತ್ರ ವ್ಯಾಮೋಹ ಇದೆ. ಆದರೆ ಸಿದ್ದರಾಮಯ್ಯಗೆ ಧೃತರಾಷ್ಟ್ರನನ್ನೂ ಮೀರಿದ ಪುತ್ರ ಮೋಹ. ಅದಕ್ಕಾಗಿ ಕಾಂಗ್ರೆಸ್‌ನ ತತ್ವ, ಸಿದ್ಧಾಂತವನ್ನು ತ್ಯಾಗ ಮಾಡಿದ್ದಾರೆ.

l ಮುಂದಿನ ಬೆಳವಣಿಗೆ?

ಸಿದ್ದರಾಮಯ್ಯ ಅವರಿಗೆ ಕುಡಿಸಲು ಎಲ್ಲರೂ ವಿಷ ಅರೆಯುತ್ತಿದ್ದಾರೆ. ಅದರ ಪರಿಣಾಮ ಮುಂದೆ ಗೋಚರಿಸಲಿದೆ. ಅತಿಯಾಗಿ ಹೆಲಿಕಾಪ್ಟರ್ ಬಳಸಿದವರು ಮತ್ತೆ ಅಧಿಕಾರಕ್ಕೆ ಬಂದಿಲ್ಲ. ಗುಂಡೂರಾವ್, ಎಸ್.ಎಂ.ಕೃಷ್ಣ ಹೆಲಿಕಾಪ್ಟರ್ ಬಳಸಿ ಏನಾದರು? ಸಿದ್ದರಾಮಯ್ಯ ಅವರಿಗೂ ಅದೇ ಗತಿ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.