ADVERTISEMENT

ಕ್ಷೇತ್ರದತ್ತ ತಲೆ ಹಾಕದಿರುವುದೇ ಅಂಬರೀಷ್ ಸಾಧನೆ

ಆಪ್ತರ ಮನೆಯಿಂದ ಸರ್ಕಾರದ ಕೆಲಸಗಳಿಗೆ ಚಾಲನೆ!

ಎಂ.ಎನ್.ಯೋಗೇಶ್‌
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಕ್ಷೇತ್ರದತ್ತ ತಲೆ ಹಾಕದಿರುವುದೇ ಅಂಬರೀಷ್ ಸಾಧನೆ
ಕ್ಷೇತ್ರದತ್ತ ತಲೆ ಹಾಕದಿರುವುದೇ ಅಂಬರೀಷ್ ಸಾಧನೆ   

ಮಂಡ್ಯ: ಕೆ.ವಿ.ಶಂಕರೇಗೌಡ, ಜಿ.ಎಸ್‌.ಬೊಮ್ಮೇಗೌಡ, ಎಸ್‌.ಡಿ.ಜಯರಾಂ ಮುಂತಾದವರ ಸಾಮೂಹಿಕ ನಾಯಕತ್ವಕ್ಕೆ ಹೆಸರಾಗಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರ ಈಗ ಹಲವು ಬದಲಾವಣೆಗಳಿಗೆ ಒಳಗಾಗಿದೆ.

ಕಾಂಗ್ರೆಸ್‌ ಶಾಸಕ, ನಟ ಅಂಬರೀಷ್‌ ಅವರ ನಿರಂತರ ಗೈರುಹಾಜರಿ, ಜೆಡಿಎಸ್‌ನಲ್ಲಿ ಪ್ರಬಲ ನಾಯಕತ್ವದ ಕೊರತೆ, ಗಟ್ಟಿಗೊಳ್ಳದ ಬಿಜೆಪಿ ಬೇರು ಮುಂತಾದ ವಿಷಯಗಳಿಂದಾಗಿ ಕ್ಷೇತ್ರ ಮಹತ್ವ ಪಡೆದುಕೊಂಡಿದೆ.

ಕ್ಷೇತ್ರದ ಇತಿಹಾಸದಲ್ಲಿ 16 ಮಂದಿ ಶಾಸಕರು ಬಂದು ಹೋಗಿದ್ದಾರೆ. ಆದರೆ ಸಚಿವರಾದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಪರೂಪಕ್ಕೆಂಬಂತೆ ಕ್ಷೇತ್ರಕ್ಕೆ ಭೇಟಿ ನೀಡುವ ಶಾಸಕ ಅಂಬರೀಷ್‌ ನಡೆ ಸಾಮಾನ್ಯರಲ್ಲಿ ಸಿಟ್ಟು ತರಿಸಿದೆ. ಅವರ ಆಪ್ತ ಅಮರಾವತಿ ಚಂದ್ರಶೇಖರ್‌, ಮನೆಯಿಂದಲೇ ಸರ್ಕಾರದ ಕೆಲಸ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದರು.

ADVERTISEMENT

‘ಅಂಬರೀಷ್‌ ಅವರು ಕಳೆದ ಐದು ವರ್ಷಗಳಲ್ಲಿ ಒಮ್ಮೆ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದಾರೆ. ಕ್ಷೇತ್ರಕ್ಕೆ ಅವರು ಏನೇನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಅಂಬರೀಷ್‌ ಅಥವಾ ಅಮರಾವತಿ ಚಂದ್ರಶೇಖರ್‌ ಅವರನ್ನೇ ಕೇಳಬೇಕು. ನಮ್ಮ ಯಾವ ಸಭೆಗಳಿಗೂ ಬಂದಿಲ್ಲ, ಹಿರಿಯರ ಮಾತುಗಳಿಗೆ ಬೆಲೆ ನೀಡಿಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ ಹೇಳುತ್ತಾರೆ.

ಮುಂದಿನ ಚುನಾವಣೆಯಲ್ಲಿ ಅಂಬರೀಷ್‌ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆರಂಭದಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಹೆಸರಿತ್ತು. ಆದರೆ ಈಗ ರಮ್ಯಾ ಎಐಸಿಸಿ ಸಾಮಾಜಿಕ ಜಾಲತಾಣಗಳ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಅಂಬರೀಷ್‌ ಮಾತ್ರವಲ್ಲದೆ ಯುವ ಮುಖಂಡ, ರವಿಕುಮಾರ್‌ ಪಿ.ಗಣಿಗ, ಎಂ.ಎಸ್‌.ಆತ್ಮಾನಂದ, ಎಚ್‌.ರಾಮಲಿಂಗಯ್ಯ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ನಲ್ಲಿ ಹೆಚ್ಚಿದ ಆಕಾಂಕ್ಷಿಗಳು: ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್‌ ಪ್ರಕಟಿಸಿದೆ. ಆದರೆ ಮಂಡ್ಯ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ 12ಕ್ಕೂ ಹೆಚ್ಚಾಗಿರುವ ಕಾರಣ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಉಳಿದಿದೆ. ಕ್ಷೇತ್ರದ ಜೆಡಿಎಸ್‌ ಮುಖಂಡರಲ್ಲಿ ಪ್ರಬಲ ನಾಯಕತ್ವದ ಕೊರತೆ ಇದ್ದು, ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ನಿರ್ಧರಿಸಬೇಕಿದೆ.

ಎಂ.ಶ್ರೀನಿವಾಸ್‌, ಡಾ. ಎಚ್‌.ಕೃಷ್ಣ, ಕೆ.ಕೆ.ರಾಧಾಕೃಷ್ಣ, ಸಿದ್ಧರಾಮೇಗೌಡ, ಡಾ. ಶಂಕರೇಗೌಡ, ಎನ್‌.ಶಿವಣ್ಣ, ಅಶೋಕ್‌ ಜಯರಾಂ, ಅಂಬುಜಮ್ಮ, ಎಚ್‌.ಎನ್‌.ಯೋಗೇಶ್‌, ಜಿ.ಬಿ.ಶಿವಕುಮಾರ್‌ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಬಂಡಾಯ ಅಭ್ಯರ್ಥಿಗಳಿಗೆ ಬಿಜೆಪಿ ಗಾಳ: ಜೆಡಿಎಸ್‌ ಅಭ್ಯರ್ಥಿಯ ಹೆಸರು ಪ್ರಕಟವಾದ ನಂತರ ಬಂಡಾಯವೇಳುವ ವ್ಯಕ್ತಿಗೆ ಟಿಕೆಟ್‌ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಈಗಾಗಲೇ ಎಂ.ಶ್ರೀನಿವಾಸ್‌, ಐದು ರೂಪಾಯಿ ವೈದ್ಯ ಡಾ. ಶಂಕರೇಗೌಡ ಅವರನ್ನು ಬಿಜೆಪಿ ಸಂಪರ್ಕಿಸಿದೆ. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮನೆಗೆ ಬಂದಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಗೆ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ನ್ಯಾಯಯುತವಾಗಿ ಟಿಕೆಟ್‌ ಕೇಳುತ್ತಿದ್ದೇನೆ. ಬಿಜೆಪಿ ಮುಖಂಡರು ಮೇಲುಕೋಟೆ ಅಥವಾ ಮಂಡ್ಯದಲ್ಲಿ ಟಿಕೆಟ್‌ ನೀಡಲು ಮುಂದೆ ಬಂದಿದ್ದಾರೆ. ಜೆಡಿಎಸ್‌ ಪಟ್ಟಿ ಪ್ರಕಟವಾದ ನಂತರ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ. ಈ ಬಾರಿ ಚುನಾವಣೆಗೆ ನಿಲ್ಲುವುದು ಶತಃಸಿದ್ಧ ’ ಎಂದು ಡಾ. ಶಂಕರೇಗೌಡ ಹೇಳಿದರು.

*


-ಅಂಬರೀಷ್‌

ಸಂಪರ್ಕಕ್ಕೆ ಸಿಗದ ಶಾಸಕ‌
ಶಾಸಕ ಅಂಬರೀಷ್‌ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ಫಲ ಕೊಡಲಿಲ್ಲ. ಅವರ ಮೂರು ಮೊಬೈಲ್‌ ಫೋನ್‌ಗಳು ಸ್ಥಗಿತಗೊಂಡಿದ್ದವು. ಅವರ ಆಪ್ತರಿಗೆ ಕರೆ ಮಾಡಿದಾಗ, ‘ಅಂಬಿ ನಿನಗೆ ವಯಸ್ಸಾಯ್ತು’ ಸಿನಿಮಾಗಾಗಿ ಅಂಬರೀಷ್‌ ಅಣ್ಣ ಮೇಕಪ್‌ ಮಾಡಿಕೊಳ್ಳುತ್ತಿದ್ದಾರೆ, ಅವರು ಮಾತನಾಡುವುದಿಲ್ಲ ಎಂಬ ಉತ್ತರ ಸಿಕ್ಕಿತು.

‘ಅಂಬರೀಷ್‌ ಅಣ್ಣ ಕ್ಷೇತ್ರದಲ್ಲಿ ಇಲ್ಲದಿದ್ದರೂ ಕೆಲಸ ಮಾಡಿದ್ದಾರೆ. ಗುತ್ತಲು– ಬನ್ನೂರು ರಸ್ತೆ ದ್ವಿಪಥ, ಕೆರಗೋಡು– ಬಸರಾಳು ರಸ್ತೆ ಆಧುನೀಕರಣ, ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ’ ಎಂದು ಅಂಬರೀಷ್‌ ಆಪ್ತ ಅಮರಾವತಿ ಚಂದ್ರಶೇಖರ್‌ ಹೇಳಿದರು.

*

ಮಂಡ್ಯದ ದುರಂತ
‘ನಿತ್ಯವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂಬರೀಷ್‌ ಒಂದು ದಿನವೂ ರೈತರ ಕಷ್ಟ ಕೇಳಲಿಲ್ಲ. ಕೇಂದ್ರ ಸ್ಥಾನದಲ್ಲಿ ಇದ್ದು ರೈತರ ಪರ ಕೆಲಸ ಮಾಡುವ ಎಲ್ಲಾ ಅವಕಾಶ ಅವರಿಗೆ ಇತ್ತು. ವಿಧಾನಸಭೆಗೂ ಹೋಗದೆ ಐದು ವರ್ಷ ಮುಗಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವದ ಸವಿ ನೆನಪಿನ ಕುರುಹಿಗಾಗಿ ನಗರದಲ್ಲಿ ಯಾವ ಕೆಲಸವೂ ಆಗಲಿಲ್ಲ. ಅಂಬರೀಷ್‌ರಂತಹ ಶಾಸಕರನ್ನು ಆಯ್ಕೆ ಮಾಡಿದ್ದು ಮಂಡ್ಯದ ದುರಂತ ’ ಎಂದು ಹಿರಿಯ ಸಾಹಿತಿ ಜಿ.ಟಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.

*

ಗಂಡಸರಿಗೆ ಮಾತ್ರ ಅವಕಾಶ
‘ಗಂಡುಮೆಟ್ಟಿದ ನಾಡು ಮಂಡ್ಯದಲ್ಲಿ ಗಂಡಸರಿಗೆ ಮಾತ್ರ ಅವಕಾಶ. ಮಹಿಳೆ ಶಾಸಕಿಯಾಗಲು ಗಂಡ ಸತ್ತು ಅನುಕಂಪದ ಅಲೆ ಸೃಷ್ಟಿಯಾಗಬೇಕು. ನಾಗಮಣಿ ನಾಗೇಗೌಡ, ವಿಜಯಲಕ್ಷ್ಮಿ ಬಂಡಿಸಿದ್ಧೇಗೌಡ, ಕಲ್ಪನಾ ಸಿದ್ಧರಾಜು, ಪ್ರಭಾವತಿ ಜಯರಾಂ ಎಲ್ಲರೂ ಗಂಡ ಸತ್ತ ನಂತರ ಅನುಕಂಪದಿಂದಲೇ ಶಾಸಕಿಯರಾದವರು. ಇನ್ನು ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ 30 ವರ್ಷಗಳಿಂದ ಬಡವರಿಗೆ ನಿವೇಶನ ಸಿಕ್ಕಿಲ್ಲ’ ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.