ADVERTISEMENT

ಗೋಪಾಲಕೃಷ್ಣ ಬಿಜೆಪಿಗೆ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ಬೆಂಗಳೂರು: ಕಾಂಗ್ರೆಸ್‌ ಟಿಕೆಟ್‌ ಸಿಗದಿರುವ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಎನ್‌.ವೈ.ಗೋಪಾಲಕೃಷ್ಣ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.

ಅವರನ್ನು ಸೋಮವಾರ ಭೇಟಿ ಮಾಡಿದ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಸುದೀರ್ಘ ಸಮಾಲೋಚನೆ ನಡೆಸಿದರು. ಅವರನ್ನು ಕೂಡ್ಲಿಗಿಯಲ್ಲಿ ಕಣಕ್ಕೆ ಇಳಿಸುವ ಕುರಿತು ಚರ್ಚೆ ನಡೆಯಿತು.

‘ಕಾಂಗ್ರೆಸ್‌ನಲ್ಲಿ ನನಗೆ ಅವಮಾನವಾಗಿದೆ. ಕೂಡ್ಲಿಗಿಯಲ್ಲಿ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ. ಸದ್ಯದಲ್ಲೇ ಪಕ್ಷ ಸೇರುವೆ’ ಎಂದು ಗೋಪಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. 2013ರ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್‌ನ ಎಸ್‌. ತಿಪ್ಪೇಸ್ವಾಮಿ ಎದುರು ಅವರು ಸೋತಿದ್ದರು. 2014ರಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ (ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರ) ಗೆದ್ದಿದ್ದರು.

ADVERTISEMENT

‘ಗ್ರಾಮೀಣ ಕ್ಷೇತ್ರ ಸಾಕು. ಮುಂದಿನ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವೆ’ ಎಂದು ಅವರು ಕಾಂಗ್ರೆಸ್ ವರಿಷ್ಠರ ಮುಂದೆ ಹೇಳಿಕೊಂಡಿದ್ದರು. ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸಿದ ಕಾರಣ ಕ್ಷೇತ್ರ ಬದಲಾವಣೆ ತೀರ್ಮಾನವನ್ನು ಅವರು ಕೈಬಿಟ್ಟಿದ್ದರು.

ಗೋಪಾಲಕೃಷ್ಣ ಹಿಂದೇಟು ಹಾಕಿದ್ದರಿಂದಾಗಿ, ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರಿಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.