ADVERTISEMENT

‘ಗೋಲ್ಡ್‌ಫಿಂಚ್‌’ನಲ್ಲಿ ರಾಜಕೀಯ ಹೈಡ್ರಾಮಾ!

ಆನಂದ್‌ ಸಿಂಗ್, ಪ್ರತಾಪ್‌ಗೌಡ ಪಾಟೀಲ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
‘ಗೋಲ್ಡ್‌ಫಿಂಚ್‌’ನಲ್ಲಿ ರಾಜಕೀಯ ಹೈಡ್ರಾಮಾ!
‘ಗೋಲ್ಡ್‌ಫಿಂಚ್‌’ನಲ್ಲಿ ರಾಜಕೀಯ ಹೈಡ್ರಾಮಾ!   

ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾದ ಕ್ಷಣದಿಂದ ನಾಪತ್ತೆಯಾಗಿದ್ದ ವಿಜಯನಗರ ಶಾಸಕ ಆನಂದ್‌ ಸಿಂಗ್ ಹಾಗೂ ರಾಯಚೂರು ಜಿಲ್ಲೆ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ, ಶನಿವಾರ ಬೆಂಗಳೂರಿನ ‘ಗೋಲ್ಡ್‌ಫಿಂಚ್’ ಹೋಟೆಲ್‌ನಲ್ಲಿ ಪ್ರತ್ಯಕ್ಷರಾದರು.

ಅವರಿಬ್ಬರೂ ಬೆಳಿಗ್ಗೆಯೇ ಹೋಟೆಲ್‌ಗೆ ಬಂದು ಸೇರಿಕೊಂಡಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಈ ವಿಚಾರ ತಿಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಶಾಸಕರು ಎಲ್ಲಿ ತಮ್ಮ ಕೈತಪ್ಪುತ್ತಾರೋ ಎಂಬ ಆತಂಕದಲ್ಲಿ ಹೋಟೆಲ್‌ನತ್ತ ದೌಡಾಯಿಸಿದರು. ಅಷ್ಟೊತ್ತಿಗಾಗಲೇ, ಡಿಜಿಪಿ ನೀಲಮಣಿ ಎನ್‌.ರಾಜು ಹಾಗೂ ಪೊಲೀಸ್ ಕಮಿಷನರ್ ಟಿ.ಸುನೀಲ್‌ ಕುಮಾರ್ ಸಹ ಹೋಟೆಲ್‌ ಬಳಿ ಬಂದಿದ್ದರು.

ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ, ‘ನಮ್ಮ ಶಾಸಕರಿಬ್ಬರೂ ಬಿಜೆಪಿಯ ಸೋಮಶೇಖರ ರೆಡ್ಡಿಯ ವಶದಲ್ಲಿದ್ದಾರೆ. ಖಾಸಗಿ ವಿಮಾನದಲ್ಲಿ ನಗರಕ್ಕೆ ಕರೆತಂದು, ಹೋಟೆಲ್‌ನಲ್ಲಿ ಇರಿಸಲಾಗಿದೆ. ನಮ್ಮವರಿಗೆ ವಿಪ್‌ ಕೊಡಲು ಬಂದಿದ್ದೇವೆ. ಆದರೆ, ಪೊಲೀಸರು ಒಳಗೆ ಬಿಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ, ಅವರನ್ನು ಭೇಟಿಯಾಗಲು ಅವಕಾಶ ನೀಡುವುದಿಲ್ಲ’ ಎಂದು ಪೊಲೀಸರು ಮುಖಂಡರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದರು. ಶಾಸಕರು ತಂಗಿದ್ದ ಕೊಠಡಿಗಳ ಬಗ್ಗೆ ಮಾಹಿತಿ ನೀಡಲು ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದರಿಂದ, ಪೊಲೀಸರೇ ಶೋಧ ನಡೆಸಿ ಅವರನ್ನು ಪತ್ತೆ ಹಚ್ಚಿದರು.

ಕೊಠಡಿ ಸಂಖ್ಯೆ 402ರಲ್ಲಿ ತಂಗಿದ್ದ ಪ್ರತಾಪ್‌ಗೌಡ ಅವರನ್ನು ಭೇಟಿಯಾದ ಡಿಜಿಪಿ ಹಾಗೂ ಕಮಿಷನರ್, ಸುಮಾರು ಮುಕ್ಕಾಲು ತಾಸು ಅವರೊಂದಿಗೆ ಸಮಾಲೋಚನೆ ನಡೆಸಿದರು. ಆದರೆ, ತಾವು ಇಷ್ಟು ದಿನ ಇದ್ದುದೆಲ್ಲಿ, ಯಾರು ಕರೆದುಕೊಂಡು ಹೋಗಿದ್ದರು ಎಂಬ ಬಗ್ಗೆ ಅವರು ಬಾಯಿಬಿಡಲಿಲ್ಲ. ಮಧ್ಯಾಹ್ನ 2.30ರ ಸುಮಾರಿಗೆ ಅವರನ್ನು ಹೊರಗೆ ಕರೆದುಕೊಂಡು ಬಂದ ಪೊಲೀಸರು, ತಮ್ಮ ವಾಹನದಲ್ಲೇ ವಿಧಾನಸೌಧಕ್ಕೆ ಕರೆದೊಯ್ದರು.

ಅವರನ್ನು ಸೆಳೆಯಲು ವಿಧಾನಸೌಧದಲ್ಲೂ ಪೈಪೋಟಿ ಮುಂದುವರಿಯಿತು. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ಮೊದಲು ಅವರ ಕೈ ಹಿಡಿದು ಎಳೆದುಕೊಳ್ಳಲು ಮುಂದಾದರು. ಈ ಹಂತದಲ್ಲಿ ಕಾಂಗ್ರೆಸ್ ನಾಯಕರು ಸಹ ಅಲ್ಲಿಗೆ ಬಂದು ಮನವೊಲಿಸಲು ಶುರು ಮಾಡಿದರು. ಸುಮಾರು ಎರಡು ನಿಮಿಷ ನಡೆದ ಈ ಹಗ್ಗ–ಜಗ್ಗಾಟ, ಶಾಸಕ ಯಾರತ್ತ ವಾಲುತ್ತಾರೆ ಎಂಬ ಕುತೂಹಲ ಹುಟ್ಟುಹಾಕಿತು. ಕೊನೆಗೆ ಕಾಂಗ್ರೆಸ್‌ ಮೊಗಸಾಲೆಗೆ ತೆರಳುವ ಮೂಲಕ ಆ ಕುತೂಹಲಕ್ಕೆ ಪ್ರತಾಪ್‌ಗೌಡ ತೆರೆ ಎಳೆದರು.

ಒಳಗೆ ಹೋಗುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್, ಅವರ ಜೇಬಿಗೆ ವಿಪ್ ಪತ್ರವನ್ನಿಟ್ಟರು. ಇತರ ಮುಖಂಡರು, ‘ಅಂತೂ ಬಂದ್ಯಲ್ಲಪ್ಪ. ಬಾ ಕೂತ್ಕೊ’ ಎನ್ನುತ್ತ ಅವರಿಗೆ ಅಲ್ಲೇ ಊಟ ತರಿಸಿಕೊಟ್ಟರು.

ಪಾರ್ಕಿಂಗ್‌ನಿಂದ ಹೋದ ಶಾಸಕ: ಮತ್ತೊಬ್ಬ ಶಾಸಕ ಆನಂದ್‌ ಸಿಂಗ್, 3 ಗಂಟೆ ಸುಮಾರಿಗೆ ಹೋಟೆಲ್‌ನ ಒಳಗಿನಿಂದಲೇ ಪಾರ್ಕಿಂಗ್ ಪ್ರದೇಶಕ್ಕೆ ತೆರಳಿದರು. ಅವರ ಬರುವಿಕೆಗಾಗಿ ಎಲ್ಲರೂ ಮುಖ್ಯ ದ್ವಾರದಲ್ಲಿ ಎದುರು ನೋಡುತ್ತಿದ್ದರೆ, ಪಕ್ಕದ ಗೇಟ್ ಮೂಲಕ ಕಾರಿನಲ್ಲಿ ವೇಗವಾಗಿ ಹೊರಟು ವಿಧಾನಸೌಧ ತಲುಪಿದರು. ಹೀಗೆ, ಇಡೀ ದಿನದ ರಾಜಕೀಯ ನಾಟಕಕ್ಕೆ ‘ಗೋಲ್ಡ್‌ಫಿಂಚ್’ ಹೋಟೆಲ್‌ ವೇದಿಕೆಯಾಯಿತು.

ಮಧ್ಯಾಹ್ನ 3.30ರ ಸುಮಾರಿಗೆ ವಿಧಾನಸೌಧಕ್ಕೆ ಬಂದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರಿಗೆ ಡಿ.ಕೆ.ಶಿವಕುಮಾರ್ ಎದುರಾದರು. ಇಬ್ಬರೂ ಒಂದೆರಡು ನಿಮಿಷ ಮಾತನಾಡಿ ತಮ್ಮ ಪಕ್ಷಗಳ ಮೊಗಸಾಲೆಗಳತ್ತ ತೆರಳಿದರು.

‘ನಾನು ಸಹೋದರನೊಂದಿಗೆ ತಾಜ್‌ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ತಂಗಿದ್ದೆ. ಆನಂದ್‌ಸಿಂಗ್ ಹಾಗೂ ಪ್ರತಾಪ್‌ಗೌಡ ನನ್ನೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ’ ಎಂದು ಸೋಮಶೇಖರ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.