ADVERTISEMENT

ಜನ ಸುರಕ್ಷೆಗಲ್ಲ; ಅಧಿಕಾರಕ್ಕಾಗಿ ಢೋಂಗಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹುಬ್ಬಳ್ಳಿ: ‘ಭಟ್ಕಳ ಶಾಸಕರಾಗಿದ್ದ ಚಿತ್ತರಂಜನ್‌, ಪಕ್ಷದ ತಾಲ್ಲೂಕು ಮುಖಂಡ ತಿಮ್ಮಪ್ಪ ನಾಯ್ಕ ಅವರ ಕೊಲೆಗಳ ತನಿಖೆಗೆ ಎಂದೂ ಧ್ವನಿ ಎತ್ತದ ಬಿಜೆಪಿ ಇದೀಗ ಅಧಿಕಾರಕ್ಕೋಸ್ಕರ ಜನಸುರಕ್ಷಾ ಯಾತ್ರೆ ಎಂಬ ಢೋಂಗಿ ಯಾತ್ರೆ ಆರಂಭಿಸಿದೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಭಾನುವಾರ ಇಲ್ಲಿ ಹರಿಹಾಯ್ದರು.

‘ಭಟ್ಕಳದಲ್ಲಿ 1997ರಲ್ಲಿ 23 ಹಿಂದೂಗಳ ಕೊಲೆಯಾಗಿದೆ ಎಂದು ಜಗನ್ನಾಥ ಶೆಟ್ಟಿ ಆಯೋಗದ ವರದಿ ಹೇಳಿದೆ. ಬಿಜೆಪಿ ತಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ಬಗ್ಗೆ ಚಕಾರ ಎತ್ತಲಿಲ್ಲವೇಕೆ? ಕೂಲಿ ಕೆಲಸ ಬಿಟ್ಟು ಹಿಂದುತ್ವದ ಉಳಿವಿಗಾಗಿ ಶ್ರಮಿಸಿದ ನೂರಾರು ಹಿಂದೂ ಕಾರ್ಯಕರ್ತರು ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡು ಕೋರ್ಟಿಗೆ ಅಲೆಯುತ್ತಿದ್ದಾರೆ. ಅವರ ಬಗ್ಗೆ ಬಿಜೆಪಿಗೆ ಏಕೆ ಅನುಕಂಪವಿಲ್ಲ?’ ಎಂದು ಸುದ್ದಿಗೋಷ್ಠಿಯಲ್ಲಿ ಕೇಳಿದರು.

‘ಹುಸಿ ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿಯನ್ನು ತಿರಸ್ಕರಿಸುವಂತೆ ಜನರಿಗೆ ಕರೆ ನೀಡುತ್ತಿದ್ದೇವೆ. ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮಸೇನೆಯ ಬೆಂಬಲದಿಂದ ಕರ್ನಾಟಕ ಶಿವಸೇನೆಯು 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೇನೆ. ನಮಗೆ ಹಿಂದೂ ಮಹಾಸಭಾ ಕೂಡ ಬೆಂಬಲ ನೀಡಿದೆ. ಸಂಘಪರಿವಾರೇತರ ಹಿಂದೂ ಸಂಘಟನೆಗಳು ಬೆಂಬಲ ನೀಡಲು ಮುಂದೆ ಬಂದರೆ ಪಡೆಯುತ್ತೇವೆ’ ಎಂದು ಹೇಳಿದರು.‌

ADVERTISEMENT

‘ಗೋಮಾಂಸ ಸೇವನೆ ಕುರಿತು ಬಿಜೆಪಿ ಇಬ್ಬಗೆ ಧೋರಣೆ ಹೊಂದಿದೆ. ಈಶಾನ್ಯ ರಾಜ್ಯಗಳು ಹಾಗೂ ಅವರದೇ ಸರ್ಕಾರವಿರುವ ಗೋವಾದಲ್ಲಿ ಗೋಮಾಂಸ ಸೇವನೆ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಕರ್ನಾಟಕ, ಮಹಾರಾಷ್ಟ್ರದಿಂದ ಗೋಮಾಂಸ ತರಿಸಿಕೊಂಡು ಗೋವಾದಲ್ಲಿ ಪೂರೈಸುತ್ತಿರುವುದಾಗಿ ಸ್ವತಃ ಅಲ್ಲಿನ ಮುಖ್ಯಮಂತ್ರಿ ಮನೋಹರ ಪರ್ರೀಕರ್‌ ಅವರೇ ಹೇಳುತ್ತಿದ್ದಾರೆ. ಅಲ್ಲದೆ, ಭಾರತವೇ ಅತಿ ಹೆಚ್ಚು ಗೋಮಾಂಸವನ್ನು ರಫ್ತು ಮಾಡುತ್ತಿದೆ. ಮತ್ತೊಂದೆಡೆ ಬಿಜೆಪಿ ಗೋಹತ್ಯೆ ನಿಷೇಧಿಸುವ ಕುರಿತು ಹುಸಿ ನಾಟಕವಾಡುತ್ತಿದೆ. ಪ್ರಧಾನಿ ಗೋಮಾಂಸ ರಫ್ತು ನಿಷೇಧ ಮಾಡಿದರೆ ಗೋಹತ್ಯೆಗೂ ಕಡಿವಾಣ ಬೀಳಲಿದೆ’ ಎಂದರು.

ದತ್ತಮಂದಿರಗಳಲ್ಲಿ ಪೂಜೆ

‘ಚಿಕ್ಕಮಗಳೂರಿನ ದತ್ತಾತ್ರೇಯ ಪೀಠವನ್ನು ಮುಜರಾಯಿ ಇಲಾಖೆಗೆ ಸೇರಿಸಲು ನಿರ್ಧರಿಸಿರುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಇದು ನಮ್ಮ 20 ವರ್ಷಗಳ ಹೋರಾಟಕ್ಕೆ ಸಂದ ಜಯ. ಹಾಗಾಗಿ, ಬರುವ ಗುರುವಾರ ರಾಜ್ಯದ ಎಲ್ಲ ದತ್ತ ಮಂದಿರಗಳಲ್ಲಿ ಶ್ರೀರಾಮಸೇನೆ ವಿಶೇಷ ಪೂಜೆ ಹಮ್ಮಿಕೊಳ್ಳಲಿದೆ’ ಎಂದು ಮುತಾಲಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.