ADVERTISEMENT

ಜೆಡಿಎಸ್‌ಗೆ ಬೇಷರತ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:20 IST
Last Updated 15 ಮೇ 2018, 19:20 IST
ಜೆಡಿಎಸ್‌ಗೆ ಬೇಷರತ್‌ ಬೆಂಬಲ
ಜೆಡಿಎಸ್‌ಗೆ ಬೇಷರತ್‌ ಬೆಂಬಲ   

ಬೆಂಗಳೂರು: ‘ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿದ್ದೇವೆ ಹಾಗೂ ಈ ಕುರಿತಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರಮುಖೇನ ತಿಳಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಹೊರಬಂದ ನಂತರ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಮುಖ್ಯ. ಸರ್ಕಾರ ರಚಿಸುವಷ್ಟು ಸಂಖ್ಯಾಬಲವನ್ನು ನಾವು ಹೊಂದಿದ್ದೇವೆ. ಅದಕ್ಕಾಗಿಯೇ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದೇವೆ’ ಎಂದರು.

‘ಬಿಜೆಪಿಯವರು ಆಪರೇಷನ್ ಕಮಲ ನಡೆಸುವುದರಲ್ಲಿ ಎತ್ತಿದ ಕೈ. ಅವರು 2008ರಲ್ಲೇ ಇದನ್ನು ಮಾಡಿದ ಅನುಭವ ಹೊಂದಿದ್ದಾರೆ. ಅದಕ್ಕೇ ನಾವೀಗ ಮುಂಚಿತವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಅವಕಾಶ ಕೋರಿದ್ದೇವೆ’ ಎಂದರು.

ADVERTISEMENT

‘ಮೈತ್ರಿ ಸರ್ಕಾರದ ಸ್ವರೂಪ ಏನೆಂಬುದನ್ನು ಉಭಯ ಪಕ್ಷಗಳ ನಾಯಕರು ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳುತ್ತೇವೆ’ ಎಂದೂ ಅವರು ತಿಳಿಸಿದರು.

ಪ್ರಮಾಣ ಪತ್ರಗಳು ಕೈಸೇರಲಿ: ‘ಚುನಾವಣಾ ಆಯೋಗದಿಂದ ಗೆದ್ದ ಪ್ರತಿನಿಧಿಗಳ ಅಧಿಕೃತ ಪ್ರಮಾಣ ಪತ್ರ ಬಂದ ಮೇಲೆ ಸರ್ಕಾರ ರಚನೆಗೆ ಯಾರನ್ನು ಕರೆಯಬೇಕೆಂದು ತೀರ್ಮಾನಿಸುತ್ತೇನೆ’ ಎಂದು ರಾಜ್ಯಪಾಲರು ಹೇಳಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.

‘ಕಾಂಗ್ರೆಸ್‌ ನಮಗೆ ಬೆಂಬಲ ನೀಡಿದೆ. ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದೇವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್ ಇದ್ದರು.‘ಬೇಕಾದಷ್ಟು ಶಾಸಕರು ಜೊತೆಗಿದ್ದಾರೆ’: ‘ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರು ನಮ್ಮ ಜೊತೆ ಇದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್‌ ನಾಯಕರ ಜೊತೆ ಸಭೆ ಮಂಗಳವಾರ ರಾತ್ರಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಬುಧವಾರ ನಡೆಯುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ಬೆಂಬಲಿಸುವ ಕುರಿತು ನಿರ್ಣಯ ಅಂಗೀಕರಿಸುತ್ತೇವೆ. ಈ ನಿರ್ಣಯವನ್ನು ರಾಜ್ಯಪಾಲರಿಗೆ ತಿಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.