ADVERTISEMENT

ಟಿಕೆಟ್‌ಗಾಗಿ ರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಬಿ.ಶಿವಪ್ಪ ಅವರಿಗೇ ಟಿಕೆಟ್‌ ನೀಡುವಂತೆ ಆಗ್ರಹಿಸಿ ಬಿಜೆಪಿ ಕಚೇರಿ ಎದುರು ಗುರುವಾರ ರಾತ್ರಿ ಶಿವಪ್ಪ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಅಮಿತ್‌ ಶಾ ಕೋರ್ ಕಮಿಟಿಯ ಪ್ರಮುಖ ಸಭೆ ನಡೆಸುವಾಗಲೇ ಈ ಪ್ರತಿಭಟನೆ ನಡೆಯಿತು. ‘ಶಿವಪ್ಪ ಅವರಿಗೆ ಟಿಕೆಟ್ ನೀಡಲೇಬೇಕು, ನ್ಯಾಯ ಬೇಕು’ ಎಂದು ಘೋಷಣೆ ಹಾಕಿದರು. ಸುಮಾರು 50 ಬೆಂಬಲಿಗರು ಇದ್ದರು.

ಗಾಂಧಿನಗರ ಕ್ಷೇತ್ರಕ್ಕೆ ಬಿಜೆಪಿ ನಾಯಕ ರಾಮಚಂದ್ರಗೌಡ ಪುತ್ರ ಸಪ್ತಗಿರಿಗೌಡ ಅವರಿಗೆ ಟಿಕೆಟ್‌ ನೀಡುವ ಸುಳಿವು ಸಿಕ್ಕಿದ ಕಾರಣ ಈ ಪ್ರತಿಭಟನೆ ನಡೆಸಿದರು. ಶಿವಪ್ಪ ಅವರಿಗೆ ಟಿಕೆಟ್‌ ನೀಡಬೇಕೆಂದು ಎಸ್‌.ಎಂ.ಕೃಷ್ಣ ಅವರು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ADVERTISEMENT

ಶಾ ಸಭೆಗೆ ಬಂದ ಕರಡಿ ಸಂಗಣ್ಣ: ವಿಧಾನಸಭೆ ಟಿಕೆಟ್‌ಗಾಗಿ ಮುನಿಸಿಕೊಂಡಿದ್ದ ಸಂಸದ ಕರಡಿ ಸಂಗಣ್ಣ ಅವರನ್ನು ಅಮಿತ್‌ ಶಾ ಸಭೆಗೆ ಕರೆಸಿಕೊಂಡರು. ಸಂಸದರ ಪೈಕಿ ಯಡಿಯೂರಪ್ಪ, ಶ್ರೀರಾಮುಲು ಅವರಿಗೆ ಈಗಾಗಲೇ ಟಿಕೆಟ್‌ ಘೋಷಿಸಲಾಗಿದೆ. ಶೋಭಾ ಅವರಿಗೂ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ತಮಗೆ ಏಕೆ ಟಿಕೆಟ್‌ ನೀಡುವುದಿಲ್ಲ ಎಂಬುದಾಗಿ ಪ್ರಶ್ನಿಸಿದರು. ಕೊಪ್ಪಳ ವಿಧಾನಸಭೆಗೆ ಟಿಕೆಟ್‌ ನೀಡುವ ಬಗ್ಗೆ ಶಾ ಚರ್ಚೆ ನಡೆಸಿದರೆಂದು ಮೂಲಗಳು ಹೇಳಿವೆ.

ವಿರೂಪಾಕ್ಷಪ್ಪ ರಾಜೀನಾಮೆ:  ಮಾಜಿ ಸಂಸದ ಹಾಗೂ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರಾಜ್ಯ ಕೆ.ವಿರೂಪಾಕ್ಷಪ್ಪ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

‘ಪಕ್ಷದಲ್ಲಿ 5 ವರ್ಷ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಆದರೆ, ಪಕ್ಷವು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದೆ. ಆದ್ದರಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿರೂಪಾಕ್ಷಪ್ಪ ರಾಯಣ್ಣ ಬ್ರಿಗೆಡ್‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.