ADVERTISEMENT

ಡಿಕೆಶಿ ಕೈಗೆ ಕಾಂಗ್ರೆಸ್‌ ಸಾರಥ್ಯ?

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಡಿಕೆಶಿ ಕೈಗೆ ಕಾಂಗ್ರೆಸ್‌ ಸಾರಥ್ಯ?
ಡಿಕೆಶಿ ಕೈಗೆ ಕಾಂಗ್ರೆಸ್‌ ಸಾರಥ್ಯ?   

ಬೆಂಗಳೂರು: ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೆ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರ ಪಾಲಾಗಬಹುದು ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದೆ.

ಹಲವು ಹಿರಿಯ ನಾಯಕರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರೂ, ಪಕ್ಷದ ಪ್ರಭಾವಿ ನಾಯಕ, ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಡಿ.ಕೆ. ಶಿವಕುಮಾರ್‌ ಹೆಸರು ಅಗ್ರಪಂಕ್ತಿಯಲ್ಲಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನೇ ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಆದರೆ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ಇದೆ.

ADVERTISEMENT

ಬಹುತೇಕ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳನ್ನು ಪುನರ್‍ರಚನೆ ಮಾಡಿರುವ ಹೈಕಮಾಂಡ್‌, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕಾಗಿ ಪರಮೇಶ್ವರ ಅವರನ್ನೇ ಮುಂದುವರಿಸಿತ್ತು. ಎರಡನೇ ಬಾರಿಗೂ ಅಧ್ಯಕ್ಷರಾಗಿ ಮುಂದುವರಿದಿರುವ ಅವರು, ಎಂಟು ವರ್ಷಗಳಿಂದ ಪಕ್ಷದ ಸಾರಥ್ಯ ವಹಿಸಿದ್ದಾರೆ.

ಶಿವಕುಮಾರ್ ಸೂಕ್ತ: 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದರೆ ಅದಕ್ಕೆ ಶಿವಕುಮಾರ್ ಸೂಕ್ತ ವ್ಯಕ್ತಿ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಲಿಂಗಾಯತ ಅಥವಾ ಒಕ್ಕಲಿಗರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆಯೂ ಇದೆ.

ಒಂದು ವೇಳೆ ಉಪಮುಖ್ಯಮಂತ್ರಿ ಹುದ್ದೆ ಶಿವಕುಮಾರ್ ಅವರಿಗೆ ಒಲಿದರೆ ಲೋಕಸಭೆ ಚುನಾವಣೆವರೆಗೂ ಪರಮೇಶ್ವರ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ಇದೆ. ಆದರೆ, ಎಚ್.ಡಿ. ಕುಮಾರಸ್ವಾಮಿ ಒಕ್ಕಲಿಗರಾಗಿದ್ದು, ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಒಕ್ಕಲಿಗರಾದ ಶಿವಕುಮಾರ್‌ಗೆ ನೀಡಿದರೆ ತಪ್ಪು ಸಂದೇಶ ಹೋಗಬಹುದು ಎಂಬ ಆತಂಕವೂ ಪಕ್ಷದಲ್ಲಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಪಕ್ಷದ ವರಿಷ್ಠರಿಗೆ ಈಗಾಗಲೇ ಈ ಕುರಿತು ವರದಿ ನೀಡಿದ್ದು, ಅದರಲ್ಲಿ ಶಿವಕುಮಾರ್ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.