ADVERTISEMENT

ತಾಕತ್ತಿದ್ದರೆ ಸಂವಿಧಾನ ಮುಟ್ಟಿ ನೋಡಿ: ಬಿಜೆಪಿಗೆ ರಾಹುಲ್‌ ಗಾಂಧಿ ಸವಾಲು

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ರಾಜ್‌ಕುಮಾರ್‌ ಸಮಾಧಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ
ರಾಜ್‌ಕುಮಾರ್‌ ಸಮಾಧಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂವಿಧಾನ ಬದಲಿಸುವ ಮಾತಿರಲಿ, ತಾಕತ್ತಿದ್ದರೆ ಸಂವಿಧಾನ ಮುಟ್ಟಿ ನೋಡಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿಗೆ ಸವಾಲು ಹಾಕಿದರು.

‘ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಅದನ್ನು ಕೇಳಿಯೂ ನರೇಂದ್ರ ಮೋದಿ ಸುಮ್ಮನಿದ್ದಾರೆ. ಆರ್‍ಎಸ್‍ಎಸ್, ಬಿಜೆಪಿ, ಮೋದಿ... ಯಾರೇ ಬಂದರೂ ಸಂವಿಧಾನ ಮುಟ್ಟಲು ಬಿಡುವುದಿಲ್ಲ. ಇಷ್ಟು ಹೇಳಿದ ಮೇಲೂ ಬದಲಾಗದಿದ್ದರೆ, ಒಮ್ಮೆ ಮುಟ್ಟಿ ನೋಡಿ. ಮುಂದೆ ಏನು ಮಾಡುತ್ತೇವೆ ಗೊತ್ತಾಗುತ್ತದೆ’ ಎಂದು ಗುಡುಗಿದರು.

ಶಿವಾಜಿನಗರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಈ ದೇಶವನ್ನು ಆಳುವ ಕನಸು ಕಾಣುತ್ತಿದೆ. ಆದರೆ, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಮೋದಿಯವರೇ ನೀವೇನು ಮಾಡಿದ್ದೀರಿ ಅನ್ನುವುದನ್ನು ಜನ ನೋಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನದ ಜನ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. ಬಳಿಕ ದೇಶದಿಂದಲೇ ಓಡಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಐದು ವರ್ಷಗಳಲ್ಲಿ ₹ 10 ಸಾವಿರ ಕೋಟಿ ಖರ್ಚು ಮಾಡಿದೆ. ಆದರೆ, ಬಿಜೆಪಿ ಕೊಟ್ಟಿರುವುದು ಕೇವಲ ₹ 550 ಕೋಟಿ. ಸಿಲಿಕಾನ್ ಸಿಟಿ ಖ್ಯಾತಿಯ ನಗರವನ್ನು ‘ಪಾಪದ ಕಣಿವೆ’ ಎಂದು ಕರೆದು ಮೋದಿ ಬೆಂಗಳೂರಿಗೆ ಮತ್ತು ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡಿದ್ದಾರೆ’ ಎಂದರು.

‘ಮೋದಿ ಮಹಾನ್ ಸುಳ್ಳುಗಾರ. ಹೋದಲ್ಲೆಲ್ಲ ಹೊಸ ಹೊಸ ಸುಳ್ಳನ್ನು ಹೇಳಿ ಜನರ ವಿಶ್ವಾಸ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇಂತಹ ರಾಜಕೀಯ ಮಾಡಲು ನಾಚಿಕೆ ಆಗಬೇಕು. ಶೇಮ್‌... ಶೇಮ್‌... ಮೋದಿ’ ಎಂದರು.

ಸಂವಾದ: ರೋಡ್‌ ಷೋ ಮೂಲಕವೇ ಹೊಸೂರು ರಸ್ತೆಯ ‘ಕ್ರಿಯೇಟಿವ್ ಗಾರ್ಮೆಂಟ್ಸ್ ಕಂಪನಿ’ಗೆ ತೆರಳಿದ ರಾಹುಲ್, ಮಹಿಳಾ ನೌಕರರ ಜತೆ ಸಂವಾದ ನಡೆಸಿದರು.

‘ನಾವು ₹ 6,000ದಿಂದ ₹ 8,000 ವೇತನಕ್ಕೆ ಕೆಲಸ ಮಾಡುತ್ತಿದ್ದೇವೆ. ಅದರಲ್ಲಿ ಬಸ್ ಪಾಸ್‌ಗೇ ₹ 2,000 ಹೋಗುತ್ತದೆ. ಉಳಿದ ಹಣದಲ್ಲಿ ಜೀವನ ನಿರ್ವಹಣೆ ಕಷ್ಟ. ಹೀಗಾಗಿ, ಉಚಿತ ಬಸ್ ಪಾಸ್ ನೀಡಬೇಕು. ‌ಡೊನೇಶನ್ ಕೊಟ್ಟು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಶಕ್ತಿ ನಮಗಿಲ್ಲ. ಎಲ್ಲ ಮಕ್ಕಳಿಗೂ ಆರ್‌ಟಿಐ ಅಡಿ ಶಿಕ್ಷಣ ದೊರೆಯುವಂತೆ ಮಾಡಬೇಕು’ ಎಂದು ನೌಕರರು ರಾಹುಲ್‌ ಅವರಿಗೆ ಮನವಿ ಮಾಡಿದರು.

‘15 ಉದ್ಯಮಿಗಳ ₹ 2 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರಕ್ಕೆ, ರೈತರು ಹಾಗೂ ದಿನಗೂಲಿ ನೌಕರರ ಬಗ್ಗೆ ಕಾಳಜಿ ಇಲ್ಲ. ನಾವು ಅಧಿಕಾರಕ್ಕೆ ಬಂದರೆ, ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತೇವೆ’ ಎಂದು ರಾಹುಲ್‌ ಭರವಸೆ ನೀಡಿದರು.

‘ನಿಮ್ಮ ಪ್ರೀತಿ ಮರೆಯುವುದಿಲ್ಲ’

ಬೆಂಗಳೂರು: ‘ಎರಡು ತಿಂಗಳಿಂದ ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ನನ್ನ ಮೇಲೆ ಬಹಳ ಪ್ರೀತಿ ತೋರಿಸಿದ್ದೀರಿ. ಇದನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ನಿಮ್ಮ ಸೇವೆಗೆ ನಾನು ಸದಾ ಸಿದ್ಧ’ ಎಂದು ರಾಹುಲ್‌ ಹೇಳಿದರು.

‘2019ರಲ್ಲಿ ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿ ಇರಲಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.