ADVERTISEMENT

ದಕ್ಕಲಿದೆ ನಮಗೆ ‘ಭಾಗ್ಯ’ಗಳ ಫಲ

ವೈ.ಗ.ಜಗದೀಶ್‌
Published 24 ಏಪ್ರಿಲ್ 2018, 19:58 IST
Last Updated 24 ಏಪ್ರಿಲ್ 2018, 19:58 IST
ದಕ್ಕಲಿದೆ ನಮಗೆ ‘ಭಾಗ್ಯ’ಗಳ ಫಲ
ದಕ್ಕಲಿದೆ ನಮಗೆ ‘ಭಾಗ್ಯ’ಗಳ ಫಲ   

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರಾಗಿ ಸತತ ಏಳು ವರ್ಷ ಪೂರೈಸಿರುವ ಜಿ.ಪರಮೇಶ್ವರ ಅವರು ರಾಜ್ಯ ಸರ್ಕಾರದ ಸಾಧನೆ, ವಿಧಾನಸಭಾ ಚುನಾವಣೆಯ ಸವಾಲುಗಳ ಕುರಿತು ಮಾತನಾಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.

*ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲವೇ?

ಇಡೀ ರಾಜ್ಯ ಪ್ರವಾಸ ಮಾಡಿದ್ದೇನೆ. ಆಡಳಿತ ವಿರೋಧಿ ಅಲೆ ಕಾಣಿಸಲಿಲ್ಲ. 1994ರಿಂದ ಚುನಾವಣೆಗಳನ್ನು ನೋಡಿದ್ದೇನೆ. ಆಗೆಲ್ಲ, ಎಲ್ಲಿ ಹೋದರೂ ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ ಎಂಬ ಸಿಟ್ಟನ್ನು ಜನ ಹೊರಹಾಕುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲ. ತಳಸ್ತರದಲ್ಲಿ ಜನ ನಮ್ಮ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಕಡಿಮೆ.

ADVERTISEMENT

*ಹಿಂದಿನ ಚುನಾವಣೆ ವೇಳೆ ನೀಡಿದ್ದ 165 ಭರವಸೆಗಳ ಪೈಕಿ 159 ಅನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೀರಿ. ಅದು ಚುನಾವಣೆಯಲ್ಲಿ ನಿಮ್ಮ ನೆರವಿಗೆ ಬರುತ್ತದೆಯೇ?

ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ಮೊದಲಿನಿಂದಲೂ ಹೊಂದಾಣಿಕೆ ಇದೆ. ಅವರಿಗೆ ಮುಜುಗರ ಆಗುವ ರೀತಿಯಲ್ಲಿ ಎಂದಿಗೂ ನಡೆದುಕೊಂಡಿಲ್ಲ. ಕೆಟ್ಟ ಸರ್ಕಾರ ಎನ್ನುವುದಕ್ಕೆ 2–3 ಮಾನದಂಡಗಳು ಇರಬೇಕಲ್ಲವೇ? ಅಧಿಕಾರಿಗಳ ಹಂತದಲ್ಲಿ ಯಾವುದೇ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿಲ್ಲ. ಸರ್ಕಾರದ ವಿರುದ್ಧದ ಮಾತುಗಳೂ ಬರಲಿಲ್ಲ. ಆಡಳಿತ ಸುಸೂತ್ರವಾಗಿ ನಡೆಯಬೇಕಾದರೆ ಸಂಪನ್ಮೂಲ ಕ್ರೋಡೀಕರಣ ಮುಖ್ಯ. ಸರ್ಕಾರಕ್ಕೆ ಯಾವತ್ತೂ ಹಣಕಾಸಿನ ತೊಂದರೆ ಎದುರಾಗಲಿಲ್ಲ. ಕಣ್ಣಿಗೆ ರಾಚುವಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅನೇಕ ಭಾಗ್ಯಗಳನ್ನು ಜನರಿಗೆ ತಲುಪಿಸಿದ್ದೇವೆ. ಎಲ್ಲಿಯೇ ಹೋದರೂ ‘ಅನ್ನ ಕೊಟ್ಟಿರುವವರಿಗೆ ಮೋಸ ಮಾಡುತ್ತೇವಾ’ ಎಂದು ಜನ ನಮ್ಮನ್ನು ಕೇಳುತ್ತಿದ್ದಾರೆ. ಭಾಗ್ಯಗಳ ಸರಣಿ ನಮ್ಮನ್ನು ಗೆಲುವಿನ ದಡ ಸೇರಿಸುವುದು ದಿಟ.

*ಈ ಬಾರಿಯ ಪ್ರಣಾಳಿಕೆಯಲ್ಲಿ ಹೊಸ ಆಶ್ವಾಸನೆಗಳೇನು?

ಸಮಗ್ರ ಅಭಿವೃದ್ಧಿಯ ಕಲ್ಪನೆ, ಕರ್ನಾಟಕದ ಮಾದರಿ ಏನೆಂಬುದನ್ನು ಐದು ವರ್ಷಗಳಲ್ಲಿ ತೋರಿಸಿದ್ದೇವೆ. ಇದನ್ನು ವಿಧಾನಸಭಾ ಕ್ಷೇತ್ರಗಳ ಹಂತದವರೆಗೆ ಕೊಂಡೊಯ್ಯುವುದಕ್ಕೆ ಈ ಬಾರಿ ಆದ್ಯತೆ ನೀಡಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಭಿವೃದ್ಧಿಯ ನೀಲ ನಕ್ಷೆ ಸಿದ್ಧಪಡಿಸಿ, ಗ್ರಾಮರಾಜ್ಯ– ರಾಮರಾಜ್ಯದ ಸಂಕಲ್ಪವನ್ನು ಸಾಕಾರಗೊಳಿಸುವುದು ನಮ್ಮ ಧ್ಯೇಯ. ‌

*ನರೇಂದ್ರ ಮೋದಿ– ಅಮಿತ್ ಶಾ ಅವರು, ನಮ್ಮದು ಅಭಿವೃದ್ಧಿ, ಕಾಂಗ್ರೆಸ್‌ನದು ಭ್ರಷ್ಟಾಚಾರ ಎಂದು ಟೀಕಿಸುತ್ತಿದ್ದಾರಲ್ಲ?

ಅವರು ಸುಳ್ಳು ಭರವಸೆ, ಹೇಳಿಕೆಗಳನ್ನು ನೀಡಿ ಜನರ ಮನಸ್ಸನ್ನು ಗೆಲ್ಲಲು ನೋಡುತ್ತಿದ್ದಾರೆ. ನಾವು ಕಣ್ಣೆದುರಿಗೆ ಕಾಣಿಸುವ ಅಭಿವೃದ್ಧಿಯ ಯಶೋಗಾಥೆಗಳನ್ನು ಮುಂದಿಟ್ಟು ಹೋಗುತ್ತಿದ್ದೇವೆ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ಭಾರಿ ಮುಖಬೆಲೆಯ ನೋಟು ರದ್ದತಿಯಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ, 15ರಿಂದ 20 ಪರ್ಸೆಂಟ್ ಜಿಎಸ್‌ಟಿ ಹೇರುವ ಮೂಲಕ ಸಣ್ಣ ಉದ್ದಿಮೆದಾರರನ್ನು ತುಳಿದುಹಾಕಲಾಗಿದೆ. ಅದು ಬಿಟ್ಟರೆ ಏನು ಆಗಿದೆ?

*ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ತೃಪ್ತಿ ತಂದಿದೆಯೇ? ಅನೇಕ ಕ್ಷೇತ್ರಗಳಲ್ಲಿ ಬಂಡಾಯ ಇದೆಯಲ್ಲ?

*ಹೆಚ್ಚೂ ಕಡಿಮೆ ತೃಪ್ತಿ ತಂದಿದೆ. ಕೇವಲ 5 ಕ್ಷೇತ್ರಗಳಲ್ಲಿ ವಿರೋಧ ಎದುರಾಗಿತ್ತು. ಪ್ರತಿ ಚುನಾವಣೆಯಲ್ಲೂ ಅಂತಹದ್ದೆಲ್ಲ ಸಾಮಾನ್ಯ. ನಾವು ಒಂದೇ ಬಾರಿಗೆ 218 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಇತಿಹಾಸ ಸೃಷ್ಟಿಸಿದ್ದೇವೆ. ಇದೊಂದು ಹೆಗ್ಗಳಿಕೆ ಅಲ್ಲವೇ?

*ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಅಗತ್ಯವಿತ್ತಾ?

ಅವರು ಬಾದಾಮಿಯಲ್ಲಿ ನಿಲ್ಲಬೇಕು ಎಂದು ತೀರ್ಮಾನವಾಗಿದೆ. ಅವರು ಅಲ್ಲಿ ನಿಂತರೆ ಬಾಗಲಕೋಟೆಯಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ಬರುತ್ತದೆ ಎಂಬ ಅಭಿಪ್ರಾಯ ಇದೆ. ಆ ಕಾರಣಕ್ಕೆ ಅವರು ಎರಡು ಕಡೆ ಕಣಕ್ಕೆ ಇಳಿಯಲು ಪಕ್ಷ ಅನುಮತಿ ಕೊಟ್ಟಿದೆ.

*ಮುಖ್ಯಮಂತ್ರಿಯಾಗಬೇಕು ಎಂಬ ನಿಮ್ಮ ಅಪೇಕ್ಷೆ ಈ ಬಾರಿ ಕೈಗೂಡುತ್ತದೆಯೇ?

ವೈಯಕ್ತಿಕ ಬಯಕೆ ಏನೇ ಇರಬಹುದು. ಆದರೆ, ಪ್ರಜಾತಂತ್ರ ವ್ಯವಸ್ಥೆ ಬೇರೆಯೇ ತೆರನಾಗಿರುತ್ತದೆ. ಮೊದಲು 113 ಕ್ಷೇತ್ರಗಳಲ್ಲಿ ಗೆದ್ದು ಬಹುಮತ ಬರಬೇಕು. ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಆಗಬೇಕು. ಅದಾದ ಮೇಲೆ ಪಕ್ಷದ ವರಿಷ್ಠರು ಅನುಮೋದನೆ ನೀಡಬೇಕು. ಸಿದ್ದರಾಮಯ್ಯ, ಪರಮೇಶ್ವರ ಮುಖ್ಯಮಂತ್ರಿಯಾಗಬೇಕು ಎಂಬ ಅಪೇಕ್ಷೆ ಇದ್ದರಷ್ಟೇ ಸಾಲದು. ಅದಕ್ಕೆ ಇನ್ನೂ ಅನೇಕ ಹಂತಗಳಿವೆ. ಆ ವಿಷಯದ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದಿಲ್ಲ.

*ದಲಿತರಲ್ಲಿ ಎಡಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗಿದೆ?

ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿತ್ತು. ಈ ಬಗ್ಗೆ ಅಧ್ಯಯನ ಮಾಡಲು ನ್ಯಾಯಮೂರ್ತಿ ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚಿಸಿದ್ದು ನಮ್ಮ ಸರ್ಕಾರ. ವರದಿಯ ಶಿಫಾರಸುಗಳ ಅನ್ವಯ, ಮೀಸಲಾತಿ ಮರು ಹಂಚಿಕೆ ಮಾಡಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲು ಬದ್ಧ. ಎಡಗೈ ಸಮುದಾಯಕ್ಕೆ ನ್ಯಾಯ ಒದಗಿಸುವ ಸಲುವಾಗಿ ನಿಗಮ ರಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇತ್ತು. ಅದನ್ನು ಈಗಾಗಲೇ ಮಾಡಿದ್ದೇವೆ.

*ನಿಮ್ಮ ಎದುರಾಳಿ ನರೇಂದ್ರ ಮೋದಿಯವರೋ ಅಥವಾ ಜೆಡಿಎಸ್‌ ನಾಯಕರೋ?

ಕರ್ನಾಟಕದ ಮಟ್ಟಿಗೆ ಮೋದಿ ಅವರು ನಮಗೆ ಎದುರಾಳಿಯಲ್ಲ. ರಾಷ್ಟ್ರೀಯ ಪಕ್ಷ ಎಂದ ಮೇಲೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪೈಪೋಟಿ ಒಡ್ಡಿದರೆ, ಐದು ಜಿಲ್ಲೆಗಳಲ್ಲಿ ಜೆಡಿಎಸ್ ನಮ್ಮ ಎದುರಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.