ADVERTISEMENT

ದಲಿತ ಮುಖ್ಯಮಂತ್ರಿಗೆ ನನ್ನ ವಿರೋಧವಿಲ್ಲ; ಸಹಕಾರವಿದೆ

ಕೆ.ಜೆ.ಮರಿಯಪ್ಪ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ಪೂರೈಸಿರುವ ಸಿದ್ದರಾಮಯ್ಯ, ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯವನ್ನು ಸುತ್ತಿದ್ದಾರೆ. ಎಲ್ಲೆಡೆ ಪ್ರಚಾರವನ್ನು ಪೂರೈಸಿದ್ದು ಕೊನೆಯ ಎರಡು ದಿನ, ತಾವು ಸ್ಪರ್ಧಿಸಿರುವ ಚಾಮುಂಡೇಶ್ವರಿ, ತಮ್ಮ ಪುತ್ರ ಕಣದಲ್ಲಿರುವ ವರುಣಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಸೋಲು ಗೆಲುವಿನ ಲೆಕ್ಕಾಚಾರ, ಪಕ್ಷದ ಮುಂದಿರುವ ಸವಾಲುಗಳ ಕುರಿತು ಮಾತನಾಡಿದ್ದಾರೆ:

* ರಾಜ್ಯ ಸುತ್ತಿ ಪ್ರಚಾರ ಮಾಡಿದ್ದೀರಿ. ಕಾಂಗ್ರೆಸ್ ಸ್ಥಿತಿ ಹೇಗಿದೆ?

ಮೊದಲಿದ್ದ ಪರಿಸ್ಥಿತಿ ಈಗಿಲ್ಲ. ದಿನಗಳು ಕಳೆದಂತೆ ಸುಧಾರಿಸಿದೆ. ಮತದಾರರ ಒಲವು ನಮ್ಮ ಕಡೆಗೆ ಜಾಸ್ತಿ ಆಗುತ್ತಿದೆ. ಏಪ್ರಿಲ್‌ನಲ್ಲಿ ಇದ್ದ ವಾತಾವರಣ ಬದಲಾಗಿದೆ. ಮೇ ಮೊದಲ ವಾರದಲ್ಲಿ ನಮ್ಮ ಪರವಾದ ಅಲೆ ಕಾಣುತ್ತಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನ್ನಭಾಗ್ಯ, ಕೃಷಿಭಾಗ್ಯದಂತಹ ಕಾರ್ಯಕ್ರಮಗಳು, ದಲಿತ, ಹಿಂದುಳಿದವರ ಪರವಾಗಿ ಕೆಲಸ ಮಾಡಿರುವುದು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದೆ.

ADVERTISEMENT

* ಆಡಳಿತ ವಿರೋಧಿ ಅಲೆ ಇದೆಯೇ?

ಇಲ್ಲ. ಕೆಲವು ಶಾಸಕರ ಕ್ಷೇತ್ರಗಳಲ್ಲಿ ಇದ್ದರೂ ಅದು ಹೆಚ್ಚು ಪ್ರಭಾವ ಬೀರುವುದಿಲ್ಲ. ಜನಪರ ಆಡಳಿತ ನೀಡಿರುವುದು, ಸಾಮಾಜಿಕ ನ್ಯಾಯ ಕಲ್ಪಿಸಿರುವುದು ಈ ಅಲೆಯನ್ನು ತಗ್ಗಿಸಿದೆ.

* ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ರಾಜ್ಯದಲ್ಲಿ ಕೆಲಸ ಮಾಡುವುದೇ?

ಎಷ್ಟಾದರೂ ಪ್ರಚಾರ ಮಾಡಲಿ, ಅದರ ಪರಿಣಾಮ ಶೂನ್ಯ. ರಾಜ್ಯಕ್ಕೆ ಮೋದಿ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ನೋಡಿ ಜನ ವೋಟು ಹಾಕುತ್ತಾರೆ. ಹಿಂದಿನ ವರ್ಷ ತೀವ್ರ ಬರಗಾಲ ಕಾಡಿತು. ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ನೆರವಿಗಾಗಿ ಮನವಿ ಮಾಡಿದೆವು. ಸ್ವಲ್ಪವೂ ಸ್ಪಂದಿಸಲಿಲ್ಲ. ಮಹದಾಯಿ ವಿವಾದಕ್ಕೆ ಪರಿಹಾರ ರೂಪಿಸಲಿಲ್ಲ. ಈಗ ಅಧಿಕಾರಕ್ಕೆ ಬಂದರೆ ಬಗೆಹರಿಸುವುದಾಗಿ ಹೇಳುತ್ತಾರೆ. ನಾವು ಮನವಿ ಮಾಡಿದಾಗ ಏಕೆ ಪರಿಹಾರ ರೂಪಿಸಲಿಲ್ಲ?

ರಾಮಮಂದಿರ ಸೇರಿದಂತೆ ಸಾಕಷ್ಟು ವಿವಾದಗಳು ಜೀವಂತವಾಗಿ ಇರುವಂತೆ ಬಿಜೆಪಿಯವರು ನೋಡಿಕೊಂಡಿದ್ದಾರೆ. ಮತಗಳು ಕೈ ತಪ್ಪಿ ಹೋಗುತ್ತವೆ ಎಂಬ ಕಾರಣಕ್ಕೆ ವಿವಾದಗಳನ್ನು ಅವರು ಬಗೆಹರಿಸುವುದಿಲ್ಲ. ವಿವಾದ ಇಟ್ಟುಕೊಂಡೇ ರಾಜಕಾರಣ ಮಾಡುತ್ತಾರೆ.

* 5 ವರ್ಷ ಆಡಳಿತ ನಡೆಸಿದ್ದೀರಿ, ಮತ್ತೆ ನಿಮಗೇ ಏಕೆ ಅಧಿಕಾರ ಕೊಡಬೇಕು?

ಉತ್ತಮ ಆಡಳಿತ ನೀಡಿದ್ದೇವೆ. ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜನರ ಸಮಸ್ಯೆ ಬಗೆಹರಿಸಿದ್ದೇವೆ. ಯಾವುದೇ ಕಳಂಕ ಇಲ್ಲ. ಹಾಗಾಗಿ ಮತ್ತೊಮ್ಮೆ ಅಧಿಕಾರ ಕೊಡಿ ಎಂದು ಕೇಳುತ್ತಿದ್ದೇವೆ.

* ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಸಾಕಷ್ಟು ಸಮೀಕ್ಷೆಗಳು ಹೇಳುತ್ತಿವೆಯಲ್ಲ?

ಸಮೀಕ್ಷೆಗಳೆಲ್ಲ ಸುಳ್ಳು. ನಾವೇ ಸರ್ಕಾರ ರಚಿಸುತ್ತೇವೆ. ಈ ಮಾತನ್ನು ವಿಶ್ವಾಸದಿಂದಲೇ ಹೇಳುತ್ತಿದ್ದೇನೆ.

* ಬಹುಮತ ಬರದಿದ್ದರೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವಿರಾ?

ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ. ಅನಿವಾರ್ಯ ಪರಿಸ್ಥಿತಿ ಎಂಬುದಿಲ್ಲ. ಸಮೀಕ್ಷೆಗಳು ಏನು ಹೇಳಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹೊಂದಾಣಿಕೆ, ಮುಂದಿನ ನಿರ್ಧಾರದ ಬಗ್ಗೆ ಈಗಲೇ ಏನು ಹೇಳುವುದು?

* ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿದೆ?

ದಲಿತರು ಮುಖ್ಯಮಂತ್ರಿ ಆಗಬೇಕು ಎಂಬುದು ಒಂದು ವಿಚಾರವೇ ಅಲ್ಲ. ದಲಿತರು ಮುಖ್ಯಮಂತ್ರಿ ಆಗುವುದಕ್ಕೆ ನನ್ನ ವಿರೋಧವೂ ಇಲ್ಲ. ಅದಕ್ಕೆ ನನ್ನ ಸಹಕಾರ ಇದೆ. ಇತರ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅನೇಕರು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ.

* ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧಿಸಿದ್ದೀರಾ?

ನಾನಾಗಿ ಎರಡು ಕಡೆ ಸ್ಪರ್ಧೆ ಮಾಡಿಲ್ಲ. ಸೋಲಿನ ಭಯದಿಂದಲೂ ಹೋಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಸಾಕಷ್ಟು ಮುಖಂಡರು ಒತ್ತಾಯಿಸಿದ್ದರು. ಕೊಪ್ಪಳ, ಕುಷ್ಟಗಿ, ಬೀಳಗಿ ಕ್ಷೇತ್ರಗಳಿಂದ ಆಹ್ವಾನ ಬಂದಿತ್ತು. ಕೊನೆಗೆ ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿತು. ಅದರಂತೆ ಸ್ಪರ್ಧಿಸಿದ್ದೇನೆ. ಚಾಮುಂಡೇಶ್ವರಿಯಲ್ಲೂ ಉತ್ತಮ ವಾತಾವರಣ ಇದೆ.

ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ನರೇಂದ್ರ ಮೋದಿ ಎರಡು ಕಡೆ ಸ್ಪರ್ಧಿಸಿದ್ದರು. ಈಗ ನಮ್ಮನ್ನು ‘2+1’ ಎಂದು ಟೀಕಿಸುತ್ತಿದ್ದಾರೆ. ಯಾವ ನೈತಿಕತೆ ಮೇಲೆ ನಮ್ಮನ್ನು ಟೀಕಿಸುತ್ತಾರೆ?

* ಲಿಂಗಾಯತ– ವೀರಶೈವ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವುದು ಚುನಾವಣೆಯಲ್ಲಿ ಅನುಕೂಲ ಆಗುವುದೇ?

ನಾವಾಗಿ ಧರ್ಮದ ವಿಚಾರ ಪ್ರಸ್ತಾಪಿಸಿಲ್ಲ. ಪ್ರತ್ಯೇಕ ಧರ್ಮ ಮಾಡುವಂತೆ ಅರ್ಜಿ ಬಂದಿದ್ದರಿಂದ ಪರಿಶೀಲಿಸಿ, ಸಮಿತಿ ನೀಡಿದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಇದರ ಪರಿಣಾಮ ಚುನಾವಣೆ ಮೇಲೆ ಆಗುವುದಿಲ್ಲ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿಲ್ಲ. ಆದರೆ, ಆರ್‌ಎಸ್‌ಎಸ್‌ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಲಿಂಗಾಯತರು ಹಿಂದೂ ಧರ್ಮದಿಂದ ಪ್ರತ್ಯೇಕ ಆಗಬಾರದು ಎಂಬ ಮನೋಭಾವವನ್ನು ಬಿಜೆಪಿಯವರು ತಾಳಿದ್ದಾರೆ.

* ಹಾಗಾದರೆ ಧರ್ಮದ ವಿಚಾರದಿಂದ ಯಾರಿಗೆ ಲಾಭವಾಗಲಿದೆ?

ನಾವು ವಿವಾದದಿಂದ ದೂರ ಇದ್ದೇವೆ. ಧರ್ಮದ ಆಧಾರದ ಮೇಲೆ ಮತ ಕೇಳುತ್ತಿಲ್ಲ. ಇದನ್ನು ವಿವಾದ ಮಾಡಲೂ ಬಯಸುವುದಿಲ್ಲ.

* ಸಂವಿಧಾನ ಬದಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದರು. ಈ ವಿವಾದ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡುತ್ತದೆಯೇ?

ಏಕೆ ಸಂವಿಧಾನ ಬದಲಿಸಬೇಕು? ಈ ರೀತಿ ಹೇಳಿಕೆ ನೀಡಿದ ಸಚಿವರನ್ನು ಮೊದಲು ವಜಾ ಮಾಡಬೇಕಿತ್ತು. ಪಕ್ಷದಿಂದ ಕಿತ್ತು ಹಾಕಬೇಕಿತ್ತು. ಹೀಗೆ ಮಾಡದಿರುವುದನ್ನು ನೋಡಿದರೆ ಏನು ಅರ್ಥ ಕೊಡುತ್ತದೆ?

ಇಂಥ ಹೇಳಿಕೆ, ವಿವಾದಗಳಿಂದ ಸ್ವಲ್ಪ ಮಟ್ಟಿಗೆ ನಮ್ಮ ಪಕ್ಷಕ್ಕೆ ನೆರವಾಗಲಿದೆ. ಸಂವಿಧಾನ ಬದಲಿಸುವುದು ಬಿಜೆಪಿಯವರ ಹಿಡನ್ ಅಜೆಂಡಾ. ಮೀಸಲಾತಿ ವಿರೋಧಿಗಳು ಮಾತ್ರ ಸಂವಿಧಾನ ಬದಲಿಸುವ ಮಾತುಗಳನ್ನಾಡುತ್ತಾರೆ. ಮೊದಲಿನಿಂದಲೂ ಬಿಜೆಪಿಯವರು ಮೀಸಲಾತಿ ವಿರೋಧಿಸಿಕೊಂಡೇ ಬಂದಿದ್ದಾರೆ. ಅವರು ಡೋಂಗಿಗಳು, ಯಥಾಸ್ಥಿತಿವಾದಿಗಳು. ಮಂಡಲ್ ಆಯೋಗದ ವರದಿ ಜಾರಿ ಮಾಡುವಂತೆ ಕೇಳಲಿಲ್ಲ. ಐಐಟಿ, ಐಐಎಂಗಳಲ್ಲಿ ಮೀಸಲಾತಿ ತರಲು ಮುಂದಾದಾಗಲೂ ಅವಕಾಶ ನೀಡಲಿಲ್ಲ.

ರಾಜ್ಯದಲ್ಲಿ ಶೇ 14ರಷ್ಟು ಮುಸ್ಲಿಮರು ಇದ್ದಾರೆ. 224 ಕ್ಷೇತ್ರಗಳಲ್ಲಿ ಒಂದರಲ್ಲೂ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಟಿಕೆಟ್ ನೀಡಿಲ್ಲ. ಅವರಿಗೆ ಎಲ್ಲಾ ಸಮುದಾಯದ ಬಗ್ಗೆ ಇರುವ ಕಮಿಟ್‌ಮೆಂಟ್ ಏನು ಎಂಬುದನ್ನು ಇದು ತೋರಿಸುತ್ತದೆ.

* ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ತೋರಿಸುವ ನೀವೇ ಜಾತಿ ಗಣತಿಗೆ ಸಂಬಂಧಿಸಿದ ವರದಿ ಹೊರಕ್ಕೆ ಬರದಂತೆ ನೋಡಿಕೊಂಡಿದ್ದೀರಿ...

ನಾನೇ ಆಸಕ್ತಿ ವಹಿಸಿ ಆರ್ಥಿಕ, ಸಾಮಾಜಿಕ ಗಣತಿ ಮಾಡಿಸಿದೆ. ಹಿಂದುಳಿದ ಕೆಲ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಹೇಳಿದೆ. ಆ ಕೆಲಸ ಸ್ವಲ್ಪ ತಡವಾಯಿತು. ಮುಂದೆ ನಮ್ಮದೇ ಸರ್ಕಾರ ಬರಲಿದ್ದು, ಆ ವರದಿಯನ್ನು ಅಂಗೀಕರಿಸಲಾಗುವುದು. ವರದಿ ಆಧಾರದ ಮೇಲೆ ಮೀಸಲಾತಿ, ಇತರ ಸೌಲಭ್ಯ ಕಲ್ಪಿಸಲಾಗುವುದು.

* ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಬದಲಿಸಿದಂತೆ ರಾಜ್ಯದಲ್ಲೂ ಆಗುತ್ತದೆಯೇ?

ಕೇಂದ್ರದಲ್ಲಿ ಕಾಂಗ್ರೆಸ್‌ 10 ವರ್ಷ ಆಡಳಿತ ನಡೆಸಿತ್ತು. ಡಾ. ಮನಮೋಹನ್ ಸಿಂಗ್ ಒಳ್ಳೆಯ ಕೆಲಸ ಮಾಡಿದ್ದರು. ಆಡಳಿತ ವಿರೋಧಿ ಅಲೆಗಿಂತ ಜನ ಬದಲಾವಣೆ ಬಯಸಿದ್ದರು. ನಮ್ಮಲ್ಲಿನ ಪರಿಸ್ಥಿತಿ ಆ ರೀತಿ ಇಲ್ಲ.

* 10 ಪರ್ಸೆಂಟ್ ಕಮಿಷನ್ ಸರ್ಕಾರ, ಕರ್ನಾಟಕವು ಕಾಂಗ್ರೆಸ್‌ನ ಎಟಿಎಂ ಎಂದು ಪ್ರಧಾನಿ ಟೀಕಿಸುತ್ತಿದ್ದಾರಲ್ಲ?

ಎಲ್ಲಿ ಭ್ರಷ್ಟಾಚಾರ ನಡೆದಿದೆ ದಾಖಲೆ ತೋರಿಸಲಿ. ಆರೋಪಕ್ಕೆ ಆಧಾರ ಏನಿದೆ? ಯಾವ ಆಧಾರವೂ ಇಲ್ಲದೆ ಭ್ರಷ್ಟ ಸರ್ಕಾರ ಎಂದು ಹೇಗೆ ಕರೆಯುತ್ತೀರಿ? ಪ್ರಧಾನಿ ಸ್ಥಾನಕ್ಕೆ ಘನತೆ, ಗೌರವ ಕೊಟ್ಟು ನಡೆದುಕೊಳ್ಳಬೇಕು. ನನ್ನನ್ನು ಕೇಂದ್ರೀಕರಿಸಿ ಟೀಕಿಸುವುದು ಸರಿಯಲ್ಲ.

* ದೇವೇಗೌಡರನ್ನು ಮೋದಿ ಹೊಗಳುವ ಮೂಲಕ ಹತ್ತಿರ ಆಗುತ್ತಿದ್ದಾರೆಯೇ?

ಎಲ್ಲವೂ ರಾಜಕೀಯ ಪ್ರೇರಿತ ಹೇಳಿಕೆ. ಲೋಕಸಭೆ ಚುನಾವಣೆ ಸಮಯದಲ್ಲಿ ‘ಮೋದಿ ಅಧಿಕಾರಕ್ಕೆ ಬರಲ್ಲ, ಅವರು ಪ್ರಧಾನಿಯಾದರೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಗೌಡರು ಹೇಳಿದರು. ‘ದೇವೇಗೌಡರು ವೃದ್ಧಾಶ್ರಮ ಸೇರಿಕೊಳ್ಳಲಿ’ ಎಂದು ಮೋದಿ ಹೇಳಿದರು. ಇದು ಯಾವುದೂ ಆಗಲಿಲ್ಲ. ಈಗಲೂ ಸುಮ್ಮನೆ ಟೀಕೆ ಮಾಡಿಕೊಳ್ಳುತ್ತಾರೆ. ಇಂಥ ಹೇಳಿಕೆಗಳಿಂದ ನಮಗೇನೂ ಆಗುವುದಿಲ್ಲ. ಪರಿಣಾಮವೂ ಬೀರಲ್ಲ.

* ಲಿಂಗಾಯತ– ವೀರಶೈವ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವುದು ಚುನಾವಣೆಯಲ್ಲಿ ಅನುಕೂಲ ಆಗುವುದೇ?

ನಾವಾಗಿ ಧರ್ಮದ ವಿಚಾರ ಪ್ರಸ್ತಾಪಿಸಿಲ್ಲ. ಪ್ರತ್ಯೇಕ ಧರ್ಮ ಮಾಡುವಂತೆ ಅರ್ಜಿ ಬಂದಿದ್ದರಿಂದ ಪರಿಶೀಲಿಸಿ, ಸಮಿತಿ ನೀಡಿದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಇದರ ಪರಿಣಾಮ ಚುನಾವಣೆ ಮೇಲೆ ಆಗುವುದಿಲ್ಲ. ಇದನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿಲ್ಲ. ಆದರೆ, ಆರ್‌ಎಸ್‌ಎಸ್‌ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಲಿಂಗಾಯತರು ಹಿಂದೂ ಧರ್ಮದಿಂದ ಪ್ರತ್ಯೇಕ ಆಗಬಾರದು ಎಂಬ ಮನೋಭಾವವನ್ನು ಬಿಜೆಪಿಯವರು ತಾಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.