ADVERTISEMENT

ದೊರೆಯದ ಟಿಕೆಟ್‌: ಪ್ರಕಾಶಂ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಪ್ರಕಾಶಂ
ಪ್ರಕಾಶಂ   

ನವದೆಹಲಿ: ‘ಕಳೆದ 40 ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದರೂ ವಿಧಾನಸಭೆ ಚುನಾವಣೆಯ ಟಿಕೆಟ್ ದೊರೆಯಲಿಲ್ಲ. ಪಕ್ಷದ ಎಲ್ಲ ಮುಖಂಡರ ಕಾಲು ಹಿಡಿದುಕೊಂಡರೂ ಪ್ರಯೋಜನವಾಗಲಿಲ್ಲ’ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್‌.ಎಸ್. ಪ್ರಕಾಶಂ ಕಣ್ಣೀರು ಸುರಿಸಿದರು.

‘ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಟಿಕೆಟ್‌ ಕೋರಿ ಕಳೆದ 15 ದಿನಗಳಿಂದ ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಕೈ, ಕಾಲು ಹಿಡಿದುಕೊಂಡೆ. ಆದರೂ ಅವರಿಗೆ ನನ್ನ ಕೂಗು ಕೇಳಲಿಲ್ಲ’ ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗಳಗಳನೇ ಅತ್ತರು.

‘ಅಸಂಘಟಿತ ವಲಯದ ಕಾರ್ಮಿಕರಿಗಾಗಿ ದುಡಿಯುತ್ತ, ಅವರನ್ನೆಲ್ಲ ಆಕರ್ಷಿಸಿ, ಪಕ್ಷಕ್ಕೆ ಮತ ಕೊಡಿಸುವಲ್ಲಿ ಶ್ರಮಿಸಿದ್ದೇನೆ. ಈ ಬಾರಿಯೂ ಆ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಲಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪಕ್ಷದ ಪರ ಅಲೆ ಇರುವಾಗ ನಮ್ಮಂಥ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡುವಂತೆ ಕೋರಿದೆ ಅದಕ್ಕೆ ಬೆಲೆ ಸಿಗಲಿಲ್ಲ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.