ADVERTISEMENT

‘ಪ್ರಿಯ’ ನಾಯಕನ ಬೆನ್ನಿಗೆ ಯುವಪಡೆ

ನಾಗರಬಾವಿ: ಚುನಾವಣಾ ‍ಪ್ರಚಾರಕ್ಕೆ ಡೋಲು ತಮಟೆ ಸದ್ದಿನ ಅಬ್ಬರ

ಪ್ರವೀಣ ಕುಮಾರ್ ಪಿ.ವಿ.
Published 7 ಮೇ 2018, 20:05 IST
Last Updated 7 ಮೇ 2018, 20:05 IST
ಚುನಾವಣಾ ಪ್ರಚಾರಕ್ಕೆ ನಾಗರಬಾವಿಗೆ ಬಂದ ಪ್ರಿಯಕೃಷ್ಣ ಅವರ ಕೈ ಕುಲುಕಲು ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಮುಗಿಬಿದ್ದರು –ಪ್ರಜಾವಾಣಿ ಚಿತ್ರ/ರಂಜು ಪಿ.
ಚುನಾವಣಾ ಪ್ರಚಾರಕ್ಕೆ ನಾಗರಬಾವಿಗೆ ಬಂದ ಪ್ರಿಯಕೃಷ್ಣ ಅವರ ಕೈ ಕುಲುಕಲು ಮಹಿಳೆಯರು, ಮಕ್ಕಳು ಮತ್ತು ಯುವತಿಯರು ಮುಗಿಬಿದ್ದರು –ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ‘ಏನ್ರೋ... ಎಲ್ಲಾ ಇಲ್ಲೇ ಇದ್ದೀರಲ್ಲೋ... ಇಷ್ಟೊಂದು ಜನ ಇಲ್ಲಿ ಏನು ಮಾಡ್ತೀರಿ. ಸ್ವಲ್ಪ ಬೇರೆ ವಾರ್ಡ್‌ಗಳಿಗೂ ಹೋಗ್ರೋ....’ ಎಂದು ತಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದ ಯುವ ಪಡೆಯನ್ನು ಪ್ರೀತಿಯಿಂದ ಮಾತನಾಡಿಸುತ್ತಲೇ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಮತ ಯಾಚಿಸಲು ಸರಸರನೇ ಹೆಜ್ಜೆ ಹಾಕಿದರು.

ಅವರನ್ನು ಸುತ್ತುವರಿದಿದ್ದ ಯುವಕರು ‘ಅಯ್ಯೋ ಬಿಡಣ್ಣಾ... ಎಲ್ಲಾ ಕಡೆ ಜನ ಅವ್ರಣ್ಣ... ಏನೂ ತಲೆಬಿಸಿ ಬೇಡ’ ಎನ್ನುತ್ತಾ ನೆಚ್ಚಿನ ನಾಯಕನಿಗೆ ಜೈಕಾರ ಹಾಕುತ್ತಾ ಮುಂದೆ ಸಾಗಿದರು.

ಸೋಮವಾರ ಬೆಳಿಗ್ಗೆ 6 ಗಂಟೆಗೆ ಎದ್ದ ಅವರು ಮನೆಗೆ ಬಂದಿದ್ದವರನ್ನು ಮಾತನಾಡಿಸಿ ಹಾಗೂ ಉಪಾಹಾರ ಮುಗಿಸಿ 8 ಗಂಟೆಗೆ ಹೊರಬಿದ್ದರು. ಕಾವೇರಿ‍ಪುರ ಹಾಗೂ ನಾಗರಬಾವಿಯಲ್ಲಿ ಕೆಲವು ಸ್ಥಳೀಯ ಮುಖಂಡರ ಮನೆಗಳಿಗೆ ಭೇಟಿ ನೀಡಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಬೆಳಿಗ್ಗೆ 9.15ರ ಸುಮಾರಿಗೆ ನಾಗರಬಾವಿಯ ವೀರಾಂಜನೇಯಸ್ವಾಮಿ ಹಾಗೂ ಗಣಪತಿ ದೇವಸ್ಥಾನ ಬಳಿ ಬಂದ ಅವರನ್ನು ಬೆಂಬಲಿಗರು ಮಾಲೆ ಪಟಾಕಿ ಸಿಡಿಸುವ ಮೂಲಕ ಬರಮಾಡಿಕೊಂಡರು. ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದಂತೆಯೇ ತಂದೆ ಎ.ಕೃಷ್ಣಪ್ಪ ಅವರೂ ಬೆಂಜ್‌ ಕಾರಿನಲ್ಲಿ ಅಲ್ಲಿಗೆ ಬಂದರು.

ADVERTISEMENT

ಅಪ್ಪ– ಮಗ ಪಾದಯಾತ್ರೆ ಮೂಲಕ ಮತಯಾಚನೆ ಆರಂಭಿಸಿದರು. ಡೋಲು– ತಮಟೆಯ ನಾದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿತ್ತು. ನಾದದ ಲಯಕ್ಕೆ ಕೆಲವರು ವಿಚಿತ್ರ ಭಂಗಿಗಳಲ್ಲಿ ಕುಣಿಯುತ್ತಾ ಮನರಂಜನೆ ಒದಗಿಸಿದರು. ಅಭ್ಯರ್ಥಿಗೆ ಕೇಸರಿ (ಕನಕಾಂಬರ) ಬಿಳಿ (ಮಲ್ಲಿಗೆ) ಹಾಗೂ ಹಸಿರು (ಎಲೆಗಳು) ಬಣ್ಣದ ಭಾರಿ ಗಾತ್ರದ ಮಾಲೆ ಹಾಕಿ ಅಭಿಮಾನಿಗಳು ಘೋಷಣೆ ಕೂಗಿದರು. ಹಾರದ ಭಾರ ಹೊರಲಾಗದೇ ಅದನ್ನು ಮತ್ತೆ ಬೆಂಬಲಿಗರಿಗೆ ಹಸ್ತಾಂತರಿಸಿದ ಪ್ರಿಯಕೃಷ್ಣ ಕೈಮುಗಿಯುತ್ತಲೇ ಮುಂದಡಿಯಿಟ್ಟರು. ‘ನನ್ನನ್ನು ಮತ್ತೆ ಹರಿಸಿ’ ಎಂದು ವಿನಮ್ರವಾಗಿ ಕೋರಿದರು.

ಮತಯಾತ್ರೆಯಲ್ಲಿ ಫೋಟೊ ಸೆಷನ್‌: ಚಿಗುರು ಮೀಸೆಯ ಯುವನಾಯಕನ ಜೊತೆ ಸ್ವಂತಿ (ಸೆಲ್ಫಿ) ತೆಗೆಸಿಕೊಳ್ಳಲು ಮಕ್ಕಳು, ಯುವಕ–ಯುವತಿಯರು ಮುಗಿಬಿದ್ದರು. ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಳ್ಳಲು ಅನುಮಾಡಿಕೊಡಬೇಕು ಎಂದು ಪುಟಾಣಿ ಬಾಲಕನೊಬ್ಬ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಒತ್ತಾಯಿಸಿದ. ಆತನನ್ನು ನಿರಾಸೆ ಪಡಿಸಲು ಬಯಸದ ಅಭ್ಯರ್ಥಿ, ಅವನ ಪಕ್ಕ ನಿಂತು ನಗೆ ಬೀರಿದರು. ಕೆಲವು ಮನೆಗಳಿಗೆ ಭೇಟಿ ನೀಡಿದಾಗ, ಆ ಕುಟಂಬಸ್ಥರೂ ಅಭ್ಯರ್ಥಿ ಜೊತೆ ಫೋಟೊ ತೆಗೆಸಿಕೊಂಡರು. ಅಲ್ಲಲ್ಲಿ ನಿಂತು, ಯುವಕ–ಯುವತಿಯರ ಗುಂಪುಗಳ ಜೊತೆಗೆ ಫೋಟೋಗೆ ಫೋಸು ನೀಡುತ್ತಾ ಸಾಗಿದರು.

‘ಪಾನಕ ಮಾಡಿ ತರುತ್ತೇವೆ... ಮಜ್ಜಿಗೆಯನ್ನಾದರೂ ಕುಡಿದು ಹೋಗಿ’ ಎಂದು ಕೆಲ ಗೃಹಿಣಿಯರು ಮನೆಗೆ ಬಂದ ಅಭ್ಯರ್ಥಿಯನ್ನು ಒತ್ತಾಯಿಸುತ್ತಿದ್ದರು. ಅವನ್ನೆಲ್ಲ ನಯವಾಗಿ ನಿರಾಕರಿಸುತ್ತಿದ್ದ ಪ್ರಿಯಕೃಷ್ಣ, ‘ನನ್ನನ್ನು ಗೆಲ್ಲಿಸಿ, ಅಷ್ಟೇ ಸಾಕು’ ಎಂದು ಪಕ್ಕದ ಮನೆಯ‌ತ್ತ ಹೆಜ್ಜೆ ಹಾಕುತ್ತಿದ್ದರು. ಕೆಲವು ಮನೆಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದರು.

ನಾಗರಬಾವಿಯ ವಿಜಯನಗರ ಕಾಲೇಜ್‌ ಆಫ್‌ ನರ್ಸಿಂಗ್‌ಗೂ ಭೇಟಿ ನೀಡಿದರು. ಅಲ್ಲಿನ ವಿದ್ಯಾರ್ಥಿನಿಯರು ಅವರನ್ನು ಸುತ್ತುವರಿದು ಫೋಟೊ ತೆಗೆಸಿಕೊಂಡರು. ಅಲ್ಲಿಂದ ನಿರ್ಗಮಿಸಿದ ಬಳಿಕವೂ ಕಾಲೇಜಿನ ಗೇಟಿನಿಂದ ಹೊರಗೆ ಬಂದು ಅವರು ಮರೆಯಾಗುವರೆಗೆ ಇಣುಕುತ್ತಿದ್ದರು.

‘ದೇಶದ ಬೇರೆ ಬೇರೆ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಕಲಿಯುತ್ತಿದ್ದಾರೆ. ನಮಗೆ ಇಲ್ಲಿ ಮತದಾನದ ಹಕ್ಕಿಲ್ಲ. ಈ ಯುವ ನಾಯಕನ ಉತ್ಸಾಹ ನಮ್ಮಲ್ಲಿ ಕುತೂಹಲ ಮೂಡಿಸಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.

ಮತದಾರರು ಅಭ್ಯರ್ಥಿ ಜೊತೆ ಸಣ್ಣಪುಟ್ಟ ಸಮಸ್ಯೆಗಳನ್ನೂ ಹೇಳಿಕೊಂಡರು. ಈ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕೆಲವರು ತಿಳಿಸಿದರು.

ಬಿಡುಬಿಸಿಲಿನ ಬೇಗೆಯಿಂದಾಗಿ ಮುಖದಲ್ಲಿ ಮೂಡುತ್ತಿದ್ದ ಬೆವರನ್ನು ಕರವಸ್ತ್ರದಲ್ಲಿ ಒರೆಸಿಕೊಳ್ಳುತ್ತಾ ಪ್ರಿಯಕೃಷ್ಣ ಲಗುಬಗೆಯಿಂದ ಹೆಜ್ಜೆಹಾಕಿದರೂ ಮಧ್ಯಾಹ್ನ 12.30 ಆಗುವಷ್ಟರಲ್ಲಿ ವಾರ್ಡ್‌ನ ಐದಾರು ಬೀದಿಗಳಲ್ಲಿ ಮಾತ್ರ ಪ್ರಚಾರ ಮುಗಿಸಲು ಸಾಧ್ಯವಾಗಿತ್ತು. ಹೋದಲ್ಲೆಲ್ಲ ಸುತ್ತುವರಿಯುತ್ತಿದ್ದ ಯುವ ಪಡೆಯ ನಡುವೆ ಬಿಡುಬೀಸಾಗಿ ನಡೆಯಲಾಗುತ್ತಿರಲಿಲ್ಲ. ಆದರೂ, ಸಂಜೆ ಒಳಗೆ ವಾರ್ಡ್‌ನಲ್ಲಿ ಪ್ರಚಾರ ಮುಗಿಸಲೇಬೇಕೆಂಬ ಧಾವಂತ ಕಾಣಿಸುತ್ತಿತ್ತು.

‘ಗಾಲ್ಫ್‌, ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿಲ್ಲ’

‘ನಾನು ಗಾಲ್ಫ್‌ ಪಟು. ಕಳೆದ ಕೆಲವು ವರ್ಷಗಳಿಂದ ಗಾಲ್ಫ್‌ ಆಡುವುದನ್ನು ಬಿಟ್ಟಿದ್ದೇನೆ. ಏಳೆಂಟು ವರ್ಷಗಳ ಹಿಂದಿನವರೆಗೂ ಗೆಳೆಯರ ಜೊತೆ ಕ್ರಿಕೆಟ್‌ ಆಡುತ್ತಿದ್ದೆ. ಆದರೆ, ಶಾಸಕನಾದ ಬಳಿಕ ಇದಕ್ಕೆಲ್ಲಾ ಸಮಯವೇ ಸಿಗುತ್ತಿಲ್ಲ. ಕ್ರೀಡಾಕೂಟಗಳನ್ನು ಆಯೋಜಿಸಲು ನೆರವಾಗುವ ಮೂಲಕ ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದನ್ನು ನೋಡಿ ಖುಷಿಪಡುತ್ತಿದ್ದೇನೆ’ ಎಂದು ಪ್ರಿಯಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಮಾನ್ಯವಾಗಿ ಬೆಳಿಗ್ಗೆ 6 ಗಂಟೆಗೆ ಏಳುತ್ತೇನೆ. ಬಳಿಕ ಸ್ವಲ್ಪ ಹೊತ್ತು ವ್ಯಾಯಾಮ ಮಾಡುತ್ತೇನೆ. ನಂತರ ನೆರವು ಕೋರಿ ಮನೆಗೆ ಬರುವವರನ್ನು ಭೇಟಿಯಾಗುತ್ತೇನೆ. ಬಳಿಕ ಕ್ಷೇತ್ರದ ಕೆಲವು ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದರು.

‘ಚುನಾವಣೆ ಸಂದರ್ಭದಲ್ಲಿ ದಿನಚರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ. 6 ಗಂಟೆಗೆ ಮನೆಯಿಂದ ಹೊರಬೀಳುತ್ತೇನೆ. ವಾಯುವಿಹಾರಕ್ಕೆ ಬರುವವರಲ್ಲಿ ಮತ ಯಾಚಿಸುತ್ತೇನೆ. ನಂತರ ಮನೆ ಮನೆಗಳಿಗೆ ಭೇಟಿ ನೀಡಿ ವೋಟು ಕೇಳುತ್ತೇನೆ. ಪಕ್ಷದ ಮುಖಂಡರ ಮನೆಯಲ್ಲೇ ಊಟ ತಿಂಡಿ ಸೇವಿಸುತ್ತೇನೆ. ಮನೆಗೆ ಮರಳುವಾಗ ರಾತ್ರಿ 11 ಗಂಟೆ ಆಗುತ್ತದೆ’ ಎಂದರು.

ಉಪಾಹಾರದ ತಟ್ಟೆ ಎಸೆದು ಹೋದರು!

ಕಾರ್ಯಕರ್ತರಿಗೆ ಪಾನೀಯ ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ‘ಸ್ವಚ್ಛ ಗೋವಿಂದರಾಜನಗರ’ ಎಂಬ ಬರಹ ಹೊಂದಿದ್ದ ಟಿ–ಶರ್ಟ್‌ಗಳನ್ನು ಧರಿಸಿದ್ದ ಕೆಲವು ಯುವ ಕಾರ್ಯಕರ್ತರು, ಉಪಾಹಾರ ಸೇವಿಸಿದ ಬಳಿಕ ತಟ್ಟೆಗಳನ್ನು ರಸ್ತೆಯಲ್ಲೇ ಎಸೆದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.