ADVERTISEMENT

ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ
ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ   

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ 72 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಪಕ್ಷದ 40 ಹಾಲಿ ಶಾಸಕರಿಗೆ ಹಾಗೂ ಇಬ್ಬರು ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರ ಬದಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಬಿ.ಎಸ್‌.ಯಡಿಯೂರಪ್ಪ, ಮೊಳಕಾಲ್ಮುರಿನಲ್ಲಿ ಎಸ್.ತಿಪ್ಪೇಸ್ವಾಮಿ ಬದಲು ಬಿ.ಶ್ರೀರಾಮುಲು ಕಣಕ್ಕಿಳಿಯಲಿದ್ದಾರೆ.

ಕೆಜಿಎಫ್‌ನಲ್ಲಿ ವೈ.ರಾಮಕ್ಕ ಬದಲು ಪುತ್ರ, ಮಾಜಿ ಶಾಸಕ ವೈ.ಸಂಪಂಗಿಗೆ ಟಿಕೆಟ್‌ ಸಿಕ್ಕಿದೆ. ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಕೆ.ಜಿ. ಬೋಪಯ್ಯ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದ ಕುಪಿತಗೊಂಡ ಬೆಂಬಲಿಗರು ಬೋಪಯ್ಯರ ಮಡಿಕೇರಿಯ ನಿವಾಸದ ಎದುರು ಜಮಾಯಿಸಿದರು. ‘ಮೊದಲ ಪಟ್ಟಿಯಲ್ಲಿ ಹೆಸರೇಕೆ ಕಾಣಿಸಿಕೊಂಡಿಲ್ಲ’ ಎಂದೂ ಅಚ್ಚರಿ ವ್ಯಕ್ತಪಡಿಸಿದರು.

‘ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬೋಪಯ್ಯ ಗೆಲ್ಲುವುದು ಕಷ್ಟ ಎಂಬ ಮಾಹಿತಿ ಬಂದಿದೆ. ಹೀಗಾಗಿ, ವಿರಾಜಪೇಟೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಮೊದಲ ಪಟ್ಟಿಯನ್ನು ಆಖೈರುಗೊಳಿಸುವಾಗ ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ, ಗೋಪಾಲಕೃಷ್ಣ ವಿರುದ್ಧ ಜಯ ಗಳಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ತಿಪ್ಪೇಸ್ವಾಮಿ ಅವರು, ತಮ್ಮ ಬೆಂಬಲಿಗರ ಜತೆಗೆ ಸಮಾಲೋಚನೆ ನಡೆಸಿದರು. ಬಳಿಕ ಬೆಂಗಳೂರಿಗೆ ಧಾವಿಸಿದರು. ಡಾಲರ್ಸ್‌ ಕಾಲೊನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ತೆರಳಿದರು. ಮನೆಯ ಹೊರಗೆ ಸುಮಾರು ಹೊತ್ತು ಕಾದರು. ಬಳಿಕ ಯಡಿಯೂರಪ್ಪ ಜತೆಗೆ ಚರ್ಚಿಸಿದರು.

‘ಮೊಳಕಾಲ್ಮುರಿನಿಂದ ಟಿಕೆಟ್‌ ಕೊಡಿಸಲು ವರಿಷ್ಠರ ಮೇಲೆ ಒತ್ತಡ ಹೇರುವುದಾಗಿ ಶ್ರೀರಾಮುಲು ಭರವಸೆ ನೀಡಿದ್ದಾರೆ’ ಎಂದು ತಿಪ್ಪೇಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮಾಲೀಕಯ್ಯ ಗುತ್ತೇದಾರ, ಪಿ.ರಾಜೀವ್‌, ಡಾ.ಶಿವರಾಜ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಡಾ.ಶಿವರಾಜ ಪಾಟೀಲ ಸೇರಿದಂತೆ 12 ವಲಸಿಗರಿಗೆ ಮಣೆ ಹಾಕಿರುವುದು ಸೀಟು ಆಕಾಂಕ್ಷಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ ಕೆಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆಯನ್ನೂ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಯತ್ನಾಳ ಅವರನ್ನು ಹುರಿಯಾಳನ್ನಾಗಿ ಮಾಡಿರುವುದಕ್ಕೆ ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಕಿಡಿಕಾರಿದ್ದಾರೆ. ಕಳೆದ ವಾರ ಯತ್ನಾಳ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಪಟ್ಟಣಶೆಟ್ಟಿ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದರು. ಮುದ್ದೇಬಿಹಾಳದಲ್ಲಿ ಮಂಗಳಾದೇವಿ ಬಿರಾದಾರ ಬೇಸರಗೊಂಡಿದ್ದಾರೆ.

‘ಪಕ್ಷದ ವತಿಯಿಂದ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ನನ್ನ ಹೆಸರು ಮೊದಲ ಸ್ಥಾನದಲ್ಲಿತ್ತು. ಆದರೆ, ಈಗ ನನ್ನನ್ನು ಬಿಟ್ಟು 3ನೇ ಸ್ಥಾನದಲ್ಲಿದ್ದ ಡಾ.ವಿಶ್ವನಾಥ ಪಾಟೀಲ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರ ಬಗ್ಗೆ ಮುಖಂಡರ ಗಮನಕ್ಕೆ ತಂದಿದ್ದೇನೆ. ಮುಂದೆ ಏನು ಮಾಡಬೇಕು ಎನ್ನುವುದನ್ನು ನನ್ನ ಹಿತೈಷಿಗಳು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಬೈಲಹೊಂಗಲ ಕ್ಷೇತ್ರದ ಆಕಾಂಕ್ಷಿ, ಮಾಜಿ ಶಾಸಕ ಜಗದೀಶ ಮೆಟಗುಡ್‌ ತಿಳಿಸಿದರು.

ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಲ್ಲಿ ಕಳೆದ ಬಾರಿ ಸೋತಿದ್ದ ಉದ್ಯಮಿ ಉದಯ ಗರುಡಾಚಾರ್ ಅವರಿಗೆ ಮತ್ತೆ ಮಣೆ ಹಾಕಲಾಗಿದೆ. ಇದು ಟಿಕೆಟ್‌ ಆಕಾಂಕ್ಷಿಯಾಗಿದ್ದ ಬೆಂಗಳೂರು ನಗರ ವಕ್ತಾರ ಎನ್‌.ಆರ್‌. ರಮೇಶ್‌ ಆಕ್ರೋಶಕ್ಕೆ ಕಾರಣವಾಗಿದೆ. ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು, ಲೋಪ ಸರಿಪಡಿಸಲು ಪಕ್ಷದ ವರಿಷ್ಠರಿಗೆ 48 ಗಂಟೆಗಳ ಗಡುವು ನೀಡಿದ್ದಾರೆ. ‘ಟಿಕೆಟ್‌ ತಪ್ಪಲು ಕೇಂದ್ರ ಸಚಿವ ಅನಂತಕುಮಾರ್‌ ಕಾರಣ. ಕಿಕ್‌ ಬ್ಯಾಕ್‌ ಪಡೆದಿರುವ ಶಂಕೆ ಇದೆ’ ಎಂದು ಅವರು ಕಿಡಿಕಾರಿದ್ದಾರೆ.

‘ಅಸಮಾಧಾನ ಇಲ್ಲ’

‘ಟಿಕೆಟ್‌ ಹಂಚಿಕೆಯಿಂದ ಯಾರಿಗೂ ಅಸಮಾಧಾನ ಆಗಿಲ್ಲ. ಒಗ್ಗಟ್ಟಾಗಿ ಮಿಷನ್‌ 150 ಗುರಿ ತಲುಪುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

‘ಟಿಕೆಟ್ ವಂಚಿತರಿಗೆ ಬೇಸರ ಆಗಿರುವುದು ಸಹಜ. ಟಿಕೆಟ್ ಕೈತಪ್ಪಿದವರಿಗೆ ನಮ್ಮ ಸರ್ಕಾರ ಬಂದ ಬಳಿಕ ಬೇರೆ ಸವಲತ್ತುಗಳನ್ನು ಕೊಡುತ್ತೇವೆ. ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದರು.

‘3–4 ದಿನಗಳಲ್ಲಿ 50-60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಬಳಿಕ ಕೆಲವೇ ದಿನಗಳಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಗೊಳಿಸುತ್ತೇವೆ’ ಎಂದರು.

ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು–ಉಡುಪಿ ಸಂಸದೆ ಶೋಭಾ ಕರಂದ್ಲಾಜೆಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

‘ಇಬ್ಬರು ಸಂಸದರಿಗೆ ಮಾತ್ರ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.