ADVERTISEMENT

ಬಿಜೆಪಿ ಕೌಂಟ್‌ಡೌನ್‌ ಶುರು: ಪ್ರಕಾಶ್ ರೈ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಪ್ರಕಾಶ್ ರೈ
ಪ್ರಕಾಶ್ ರೈ   

ವಿಜಯಪುರ: ‘ಕರ್ನಾಟಕದಿಂದಲೇ ಬಿಜೆಪಿಯ ಕೌಂಟ್‌ಡೌನ್‌ ಶುರುವಾಗಲಿದೆ. ಉತ್ತರ ಭಾರತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರ ಅಸಹನೆ ಹೆಚ್ಚಿದೆ. 2019ರ ಲೋಕಸಭಾ ಚುನಾವಣೆಯಲ್ಲೇ ಇದರ ಫಲಿತಾಂಶ ದೊರಕಲಿದೆ’ ಎಂದು ಚಿತ್ರನಟ ಪ್ರಕಾಶ್‌ ರೈ ಹೇಳಿದರು.

‘ನಾನು ಯಾವುದೇ ಪಕ್ಷದ ಏಜೆಂಟ್‌ ಅಲ್ಲ. ರಾಜ್ಯದಲ್ಲಿ ರಾಕ್ಷಸರ ಆಳ್ವಿಕೆ ಬರಬಾರದು ಎಂದು ನಾಡಿನ ಜನರಿಗೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಕೇಳಿಕೊಳ್ಳುವೆ’ ಎಂದು ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾನು ಹಿಂದೂ ವಿರೋಧಿಯಲ್ಲ. ಮನುಷ್ಯರನ್ನು ಕೀಳಾಗಿ ಕಾಣುತ್ತಿರುವ ಅಮಿತ್‌ ಶಾ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಂತಹವರ ವಿರೋಧಿ. ಇವರ ನಡವಳಿಕೆ ಪ್ರಶ್ನಿಸಿದರೆ ದೇಶವಿರೋಧಿ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ’ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಅನಂತಕುಮಾರ ಹೆಗಡೆ ಅವರ ಹೇಳಿಕೆಗಳನ್ನು ಪ್ರಶ್ನಿಸಿದ್ದೇನೆ. ಇದಕ್ಕೆ ಉತ್ತರ ಕೊಡುವ ಮನಸ್ಸಿದ್ದರೆ ಅವರು ಮಾಧ್ಯಮದ ಮುಂದೆ ಬಹಿರಂಗ ಚರ್ಚೆಗೆ ಬರಲಿ. ನಾನು ಸಿದ್ಧನಿದ್ದೇನೆ’ ಎಂದು ಬಹಿರಂಗ ಸವಾಲು ಹಾಕಿದರು.

‘ಕಾಂಗ್ರೆಸ್‌ ಮುಕ್ತ ಭಾರತ, ಬಿಜೆಪಿ ಮುಕ್ತ ಭಾರತ ನಮಗೆ ಬೇಕಿಲ್ಲ. ಅಮಾನವೀಯ ನಡವಳಿಕೆ, ಕೆಟ್ಟ ಆಲೋಚನೆ ಮುಕ್ತ ಭಾರತ ನಮ್ಮ ಕನಸು. ಅಮಿತ್‌ ಶಾ ಭಾಷೆ ಬದಲಾಗಬೇಕು. ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸಿ ಮಾತನಾಡುವುದು ತರವಲ್ಲ. ನಾಯಿ, ಹಾವು ಇನ್ನಿತರ ಪ್ರಾಣಿಗಳಿಗೆ ವಿರೋಧಿಗಳನ್ನು ಹೋಲಿಸಿದ್ದ ಅಮಿತ್‌ ಶಾ, ರಾಜ್ಯಕ್ಕೇನು ಪುಂಗಿ ಊದಲು ಬರುತ್ತಿದ್ದಾರಾ’ ಎಂದು ರೈ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.