ADVERTISEMENT

‘ಬೆಂಗಳೂರನ್ನು ಕುಖ್ಯಾತ ತ್ರಿವಳಿಗಳ ಕೈಗೊಪ್ಪಿಸಿದ ಮುಖ್ಯಮಂತ್ರಿ’

ಕಾಂಗ್ರೆಸ್‌ ಪ್ರಣಾಳಿಕೆ ಗಂಭೀರ ತಪ್ಪುಗಳಿಂದ ಕೂಡಿದ ಮಹಾಕಾವ್ಯ– ಮೋದಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಭಿಕರು ಹಾಗೂ ಕಾರ್ಯಕರ್ತರು ಮೊಬೈಲ್ ಟಾರ್ಚ್ ಚಾಲೂ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸಿದರು
ಸಭಿಕರು ಹಾಗೂ ಕಾರ್ಯಕರ್ತರು ಮೊಬೈಲ್ ಟಾರ್ಚ್ ಚಾಲೂ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸಿದರು   

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಗೆ ಬೆಂಗಳೂರಿನ ಬಗ್ಗೆ ಇಷ್ಟೇಕೆ ಸಿಟ್ಟು ಹೊಂದಿದ್ದಾರೋ ಅರ್ಥವಾಗುತ್ತಿಲ್ಲ. ಭಾರತಕ್ಕೆ ಕೀರ್ತಿ ತಂದುಕೊಟ್ಟ ಈ ನಗರವನ್ನು ಅವರು ಕೇವಲ ವೋಟ್‌ ಬ್ಯಾಂಕ್‌ ಆಸೆಗಾಗಿ ಕುಖ್ಯಾತ ತ್ರಿವಳಿಗಳ ಕೈಗೊಪ್ಪಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಮೂರು ವ್ಯಕ್ತಿಗಳ ಹೆಸರು ಹೇಳದೆಯೇ ಅವರ ವಿರುದ್ಧ ಕಿಡಿಕಾರಿದರು.

‘ಕೆಟ್ಟ ಕೆಲಸ ಮಾಡುವುದರಲ್ಲಿ ಈ ಮೂವರು ಒಬ್ಬರಿಗಿಂತ ಒಬ್ಬರು ನಿಸ್ಸೀಮರು. ಪರಸ್ಪರ ಸಹಕಾರ ನೀಡುತ್ತಾ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದಾಗಿ ಐದು ವರ್ಷಗಳಲ್ಲಿ ಬೆಂಗಳೂರು ಹೈರಾಣಾಗಿ ಹೋಗಿದೆ. ಈ ಮೂವರು ಯಾರು ಎಂದು ನಿಮಗೆ ಚೆನ್ನಾಗಿ ಗೊತ್ತಿದೆಯಲ್ಲವೇ’ ಎಂದು ಸಭಿಕರನ್ನು ಪ್ರಶ್ನಿಸಿದರು.

ADVERTISEMENT

‘ಪೊಲೀಸ್‌ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದ್ದಕ್ಕೆ ಹೊಣೆ ಯಾರು? ಜೈಲಿನಲ್ಲಿರಬೇಕಾದ ಅವರು ಸರ್ಕಾರದ ಭಾಗವಾಗಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇನ್ನೊಬ್ಬ ವ್ಯಕ್ತಿ ಭೂಕಬಳಿಕೆಯಿಂದಲೇ ತಮ್ಮ ಹೆಸರು ಪ್ರಜ್ವಲಿಸುವಂತೆ (ರೋಷನ್‌) ನೋಡಿಕೊಂಡಿದ್ದಾರೆ. ಕೊಲ್ಲಿ ರಾಷ್ಟ್ರಗಳ ಜೊತೆ ನಂಟು ಹೊಂದಿರುವ ಇವರ ವಿರುದ್ಧವೂ ಮೊಕದ್ದಮೆಗಳಿಲ್ಲವೇ? ಇಂಥವರು ಬೆಂಗಳೂರಿನ ಹೆಸರು ಬೆಳಗಿಸುತ್ತಾರಾ’ ಎಂದು ಪ್ರಶ್ನಿಸಿದರು.

‘ಮತ್ತೊಬ್ಬ ವ್ಯಕ್ತಿ, ಪ್ರತಿನಿಧಿಸುವ ಕ್ಷೇತ್ರದಲ್ಲಿ ಶಾಂತಿ ಬಿಟ್ಟು ಬೇರೆಲ್ಲವೂ ಇವೆ. ಅವರ ಮಗ, ದಾದಾಗಿರಿಯಲ್ಲಿ ತೊಡಗಿದ್ದಾನೆ. ಇಂತಹ ರಾಜಕಾರಣಿಗಳ ಕೈಗೆ ಅಧಿಕಾರ ನೀಡಿದ್ದರಿಂದಲೇ ಕಾಂಗ್ರೆಸ್‌ ಪಕ್ಷವು ಪಿಪಿಪಿಗೆ (ಪಂಜಾಬ್‌, ಪುದುಚೇರಿ ಹಾಗೂ ಪರಿವಾರ) ಸೀಮಿತವಾಗಿದೆ’ ಎಂದರು.

‘ಇಲ್ಲಿ ನಡು ಬೀದಿಯಲ್ಲೇ ಇಲ್ಲಿ  ಹತ್ಯೆಗಳು ನಡೆಯುತ್ತವೆ. ರಾಜಕೀಯ ಕಾರ್ಯಕರ್ತರ ಹತ್ಯೆ ಯತ್ನಗಳೂ ನಡೆದಿವೆ. ಹೆಣ್ಣುಮಕ್ಕಳಿಗೆ ಇಲ್ಲಿ ಭದ್ರತೆ ಇಲ್ಲ. ಸ್ವಲ್ಪ ಹೊತ್ತು ಮಳೆ ಬಂದರೂ ಬೆಂಗಳೂರು ಮುಳುಗುತ್ತದೆ. ಇಲ್ಲಿ ತಣ್ಣೀರಿನಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತದೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ ಪಂಚ ಮಹಾಪಾತಕಗಳು ದೇಶದ ಭವಿಷ್ಯವನ್ನೇ ಹಾಳು ಮಾಡಿವೆ. ಅವರಲ್ಲಿ ದೆಹಲಿಯ ನಾಯಕರಿಂದ ಹಿಡಿದು ಹಳ್ಳಿಯು ಪುಢಾರಿಗಳವರೆಗೆ ಎಲ್ಲರೂ ಒಂದು ಕುಟುಂಬದ ಆರಾಧನೆಯನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ಭ್ರಷ್ಟ ಸರ್ಕಾರ, ಅಪರಾಧ ಮತ್ತು ಅತ್ಯಾಚಾರ, ರೈತರಲ್ಲಿ ಹಾಹಾಕಾರ ಹಾಗೂ ಸಮಾಜ ಮತ್ತು ಜಾತಿಯನ್ನು ಒಡೆಯುವುದು ಅವರಿಂದಾಗಿ ಸೃಷ್ಟಿಯಾದ ಸಮಸ್ಯೆಗಳು ಎಂದರು.

ಕಾಂಗ್ರೆಸ್‌ ಪ್ರಣಾಳಿಕೆಯ ಕುರಿತು ವ್ಯಂಗ್ಯವಾಡಿದ ಮೋದಿ, ‘ಕರ್ನಾಟಕದಲ್ಲಿ  ಐದು ವರ್ಷಗಳಲ್ಲಿ ಏನು ಮಾಡಿದ್ದೇವೆ ಎಂದು ಕಾಂಗ್ರೆಸ್‌ ಲೆಕ್ಕ ಕೊಡಬೇಕಿತ್ತು. ಆ ದಪ್ಪ ಚರ್ಮದವರ ಆಟ ನೋಡಿ. ಅವರೀಗ ಮಹಾಕಾವ್ಯ ಬರೆಯಲು ಶುರುಹಚ್ಚಿಕೊಂಡಿದ್ದಾರೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಕಾಂಗ್ರೆಸ್‌ ಪಕ್ಷ ಕೂಡಾ ಕಲ್ಪನಾ ವಿಲಾಸದಲ್ಲಿ ತೇಲಾಡುತ್ತಿದೆ’ ಎಂದರು.

‘ಈ ಮಹಾಕಾವ್ಯ ಕನ್ನಡ ಭಾಷೆಗೆ ಘೋರ ಅಪಮಾನಮಾಡುವಂತಿದೆ. ಕನ್ನಡಪ್ರೇಮಿಗಳು ಇದನ್ನು ಓದಿದರೆ ಕಂಗಾಲಾಗುತ್ತಾರೆ. ವ್ಯಾಕರಣ ದೋಷವಿಲ್ಲದ, ತಪ್ಪು ಭಾಷೆ ಬಳಸದ, ವಾಕ್ಯದೋಷವಿಲ್ಲದ ಒಂದು ಸಾಲು ಕೂಡಾ ಅದರಲ್ಲಿಲ್ಲ’ ಎಂದರು.

‘ಕಲ್ಪನಾ ವಿಲಾಸದಲ್ಲಿ ತೇಲುವವರಿಗೆ ಇಂತಹ ಮಹಾಕಾವ್ಯದ ಅಗತ್ಯವಿರಬಹುದು. ಆದರೆ, ನಾವು ಜನ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವವರು. ಹಾಗಾಗಿ ನಾವು ಮಹಾಕಾವ್ಯ ಬರೆಯುವುದಿಲ್ಲ. ಜನರಿಗೆ ವಚನ ನೀಡುತ್ತೇವೆ. ಸರ್ಕಾರ ಬಂದ ತಕ್ಷಣ ಮೊದಲ ಸಂಪುಟ ಸಭೆಯಲ್ಲೇ ಈ ವಚನಗಳ ಅನುಷ್ಠಾನದ ಮಾರ್ಗಸೂಚಿ ತಯಾರಿಸುತ್ತೇವೆ. ಕಾಲಮಿತಿಯೊಳಗೆ ಅದನ್ನು ಪೂರೈಸುತ್ತೇವೆ’ ಎಂದರು.

‘ಭ್ರಷ್ಟಾಚಾರಿಗಳಿಗೆ ಲಗಾಮು ಹಾಕುವ, ರೈತರ ಹೊಲಗಳಿಗೆ ನೀರು ಹರಿಸುವ, ಬೆಳೆಗಳಿಗೆ ಸೂಕ್ತ ಬೆಲೆ ಕೊಡಿಸುವ ಮಾತು ನೀಡುತ್ತೇವೆ. ಆಧುನಿಕ ಶಿಕ್ಷಣ, ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ವಾಗ್ದಾನ ಮಾಡುತ್ತೇವೆ. ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸುತ್ತೇವೆ. ಸಮಾಜ ಒಡೆಯುವ ರಾಜಕಾರಣದಿಂದ ಮುಕ್ತಿ ನೀಡುತ್ತೇವೆ. ಮಹಿಳೆಯರಿಗೆ ಭದ್ರತೆ ನೀಡುವ ಅವರ ಗೌರವ ಹೆಚ್ಚಿಸುವ ಭರವಸೆ ನೀಡುತ್ತೇವೆ’ ಎಂದರು.

‘ಬೆಂಗಳೂರನ್ನು ಕಸರಹಿತ ನಗರವನ್ನಾಗಿ ರೂಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಕೇಂದ್ರಸರ್ಕಾರದ ಸಾಧನೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

ಬಿ.ಎನ್‌.ವಿಜಯಕುಮಾರ್‌ಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಸರಳ ವ್ಯಕ್ತಿತ್ವವನ್ನು ಮೋದಿ ಕೊಂಡಾಡಿದರು.

ಭಾಷಣದ ಅನುವಾದಕ್ಕೆ ವಿರೋಧ

ಮೋದಿ ಅವರ ಭಾಷಣವನ್ನು ಕೇಂದ್ರ ಸಚಿವ ಅನಂತ ಕುಮಾರ್‌ ಅನುವಾದ ಮಾಡಲು ಮುಂದಾದರು. ಆಗ ಸಭಿಕರು, ‘ಭಾಷಣದ ಅನುವಾದ ಬೇಡ’ ಎಂದು ಕೂಗಿದರು.

‘ನಿಮ್ಮೊಂದಿಗಿನ ಸಂವಾದಕ್ಕೆ ಭಾಷೆ ಯಾವತ್ತೂ ಅಡ್ಡಿ ಆಗಿಲ್ಲ. ನನ್ನ ಭಾಷಣವನ್ನು ಸ್ಥಳೀಯ ವಾಹಿನಿಗಳು ಹಳ್ಳಿಹಳ್ಳಿಗಳಿಗೆ ತಲುಪಿಸುತ್ತಿವೆ. ಅಲ್ಲಿನ ಜನರನ್ನು ತಲುಪಲು ಭಾಷಣದ ಅನುವಾದ ಅಗತ್ಯವಿದೆ’ ಎಂದು ಮೋದಿ ಹೇಳಿದರು.

ಶೈಕ್ಷಣಿಕ ಸಾಲ ಪಡೆಯಲು ನೆರವು–ಪ್ರಧಾನಿಗೆ ಅಭಿನಂದನೆ

ಮಂಡ್ಯ ಜಿಲ್ಲೆಯ ಅಬ್ದುಲ್‌ ಇಲ್ಯಾಸ್‌– ಸಲೀಲಾ ಜಾನ್ ದಂಪತಿಯ ಪುತ್ರಿ ಬೇಬಿ ಸಾರಾ ಅವರು ಎಂಬಿಎ ವಿದ್ಯಾಭ್ಯಾಸಕ್ಕೆ ಬ್ಯಾಂಕ್‌ನಲ್ಲಿ ಸಾಲ ಸಿಗದ ಬಗ್ಗೆ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ಪ್ರಧಾನಿ ಕಚೇರಿ ಮಧ್ಯಪ್ರವೇಶದಿಂದ ಅವರಿಗೆ ₹ 3 ಲಕ್ಷ ಸಾಲ ಮಂಜೂರಾಗಿತ್ತು.  ಪ್ರಸ್ತುತ ಐಬಿಎಂನಲ್ಲಿ ಉದ್ಯೋಗಿಯಾಗಿರುವ ಬೇಬಿ ಸಾರಾ ಅವರು ತಂದೆ ತಾಯಿ ಜೊತೆ ವೇದಿಕೆಗೆ ಬಂದು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದರು.

* ಕಾಂಗ್ರೆಸ್‌ ಸರ್ಕಾರ ಲೋಕಾಯುಕ್ತವನ್ನು ನಾಶಮಾಡಿ ಎಸಿಬಿ ರಚಿಸಿದೆ. ಮುಖ್ಯಮಂತ್ರಿಯವರು ಸೂಟ್‌ಕೇಸ್‌ನಲ್ಲಿ  ನಡತೆ ಪ್ರಮಾಣಪತ್ರ ಇಟ್ಟುಕೊಂಡು ತಿರುಗುತ್ತಾರೆ. ಬೇಕಿದ್ದವರಿಗೆಲ್ಲ ಕ್ಲೀನ್‌ ಚಿಟ್‌ ನೀಡುತ್ತಿದ್ದಾರೆ

–ನರೇಂದ್ರ ಮೋದಿ

ಮೋಡದಲಿ ಮರೆಯಾಯ್ತು ಮೋದಿ ಅಬ್ಬರ!

ಕಾರ್ಯಕ್ರಮಕ್ಕೆ ತಡವಾಗಿ ಬರುವ ಮೂಲಕ ಪ್ರಧಾನಿ ಮೋದಿ ಸಭಿಕರ ಬೇಸರಕ್ಕೆ ಕಾರಣರಾಗಿದ್ದರು. ಇದೇ ವೇಳೆ ಶುರುವಾದ ಜಿಟಿ–ಜಿಟಿ ಮಳೆಯು ಪ್ರಚಾರದ ಅಬ್ಬರವನ್ನು ಇನ್ನಷ್ಟು ಕಡಿಮೆ ಮಾಡಿತು. ಅವರು ಎಷ್ಟೇ ಜೋರು ಭಾಷಣ ಮಾಡಿದರೂ, ಎಂದಿನ ಶಿಳ್ಳೆ–ಚಪ್ಪಾಳೆಗಳು ಸಿಗಲಿಲ್ಲ.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ 5.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಆ ಸಮಯಕ್ಕೆ ಸರಿಯಾಗಿ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ವೇಳೆ ಹನಿ–ಹನಿ ಮಳೆ ಸುರಿಯಲಾರಂಭಿಸಿತು. ಮೋದಿ ಬರುವುದು ತಡವಾಗುತ್ತದೆ ಎಂಬ ಮಾತು ಒಬ್ಬರಿಂದ ಒಬ್ಬರಿಗೆ ಹರಡುತ್ತ ಹೋದಂತೆ, ಸಭಿಕರ ಸಂಖ್ಯೆ ಕ್ಷೀಣಿಸುತ್ತಾ ಹೋಯಿತು.

6.50ಕ್ಕೆ ಮೋದಿ ಆಗಮಿಸಿದರು. ಅಷ್ಟರಲ್ಲಿ ಹಿಂದಿನ ಸಾಲಿನ ಕುರ್ಚಿಗಳು ಖಾಲಿಯಾಗಿದ್ದವು. ಅವರು ಬಂದಾಗ ಕಾರ್ಯಕರ್ತರು ಜೈಕಾರ ಕೂಗಿದ್ದನ್ನು ಬಿಟ್ಟರೆ, ಕಾರ್ಯಕ್ರಮ ಮುಗಿಯುವವರೆಗೂ ಮತ್ತೆ ಆ ಅಬ್ಬರ ಕೇಳಿಸಲಿಲ್ಲ. ‘ಬೆಂಗಳೂರಿನ ಜನ ಎಂದೂ ಕೇಳದಂಥ ಹೊಸ ವಿಚಾರವೊಂದನ್ನು ಹೇಳುತ್ತೇನೆ’ ಎಂದು ಪ್ರತಿ ಮಾತಿನ ಮುನ್ನ ಮೋದಿ ಹೇಳುತ್ತಿದ್ದರೂ, ಜನರಿಂದ ಪ್ರತಿಕ್ರಿಯೆ ಬರುತ್ತಿರಲಿಲ್ಲ.

ಮೋದಿ, ಅಮಿತ್ ಶಾ ಅವರನ್ನು ಹೋಲುವ ರಣವೀರ್ ದಹಿಯಾ ಹಾಗೂ ರಾಜೇಂದ್ರ ಅಗರವಾಲ್ – ಪ್ರಜಾವಾಣಿ ಚಿತ್ರಗಳು

ಮೋದಿ–ಶಾ ಜೋಡಿ

ಮೋದಿ ಹಾಗೂ ಅಮಿತ್ ಶಾ ಅವರ ಚಹರೆಯನ್ನೇ ಹೋಲುವ ಜೋಡಿಯೊಂದು ಸಮಾವೇಶದ ಆಕರ್ಷಣೆಯಾಗಿತ್ತು. ಬಿಳಿ ಗಡ್ಡ ಬಿಟ್ಟುಕೊಂಡು ನಿಂತಿದ್ದ ದೆಹಲಿಯ ರಣವೀರ್ ದಹಿಯಾ, ‌ಸಾಕ್ಷಾತ್ ಮೋದಿಯಂತೆಯೇ ಕಾಣಿಸುತ್ತಿದ್ದರು. ಅವರ ಪಕ್ಕದಲ್ಲಿದ್ದ ರಾಜೇಂದ್ರ ಅಗರ್‌ವಾಲ್ ಸಹ ಅಮಿತ್ ಶಾ ಅವರನ್ನೇ ಹೋಲುತ್ತಿದ್ದರು. ಸಭಿಕರೆಲ್ಲ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಂಡರು.

‘ನಾವಿಬ್ಬರೂ ಮೊದಲು ಟ್ರಾವೆಲ್ಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದೆವು. ನೋಡುವುದಕ್ಕೆ ನಾವು ಮೋದಿ–ಶಾ ಅವರಂತೆಯೇ ಇರುವುದಾಗಿ ಸ್ನೇಹಿತರು ಹೇಳುತ್ತಿದ್ದರು. ನಂತರ ಅವರನ್ನೇ ಅನುಕರಿಸಲು ಶುರು ಮಾಡಿದೆವು. ಅವರು ಯಾವುದೇ ಸಮಾವೇಶಕ್ಕೆ ಹೋದರೂ, ನಾವೂ ಸ್ವಂತ ಖರ್ಚಿನಲ್ಲಿ ಅಲ್ಲಿ ಹಾಜರಿರುತ್ತೇವೆ. ಸ್ವತಃ ಮೋದಿ–ಶಾ ಅವರೇ ನಮ್ಮನ್ನು ನೋಡಿ ಅಚ್ಚರಿಗೊಂಡಿದ್ದರು. ಪ್ರಧಾನಿಯ ತಾಯಿಯನ್ನು ಭೇಟಿಯಾದಾಗ, ‘ಮೋದಿ ಹಾಗೂ ನೀನು ಅವಳಿ ಮಕ್ಕಳಂತೆ ಕಾಣುತ್ತೀರಾ’ ಎಂದು ಹೇಳಿ ಆಶೀರ್ವಾದ ಮಾಡಿದ್ದರು’ ಎಂದರು ರಣವೀರ್.

ಮೈಗೆಲ್ಲ ಕೇಸರಿ ಬಣ್ಣ ಮೆತ್ತಿಕೊಂಡಿದ್ದ ಶ್ರವಣ್ ಸಾಹು ಎಂಬುವರು, ಕೈಲಿ ಗದೆ, ಕೊರಳಿಗೆ ಮೋದಿ ಫೋಟೊ ಹಾಗೂ ತಲೆ ಮೇಲೆ ಕಮಲದ ಆಕೃತಿ ಹೊತ್ತುಕೊಂಡು ಭಾಷಣ ಮುಗಿಯುವವರೆಗೂ ಕುರ್ಚಿ ಮೇಲೆ ನಿಂತಿದ್ದರು. ಅವರ ಪ್ರತಿ ಮಾತಿಗೂ ಜೈಕಾರ ಕೂಗುತ್ತಿದ್ದ ಏಕೈಕ ವ್ಯಕ್ತಿಯಾಗಿ, ಸಭಿಕರ ಗಮನ ಸೆಳೆಯುತ್ತಿದ್ದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು ಬಿಹಾರದವನು. ದೇಶದಲ್ಲಿ ಒಂದೇ ಸರ್ಕಾರ ಇರಬೇಕು. ಅದು ಬಿಜೆಪಿ ಸರ್ಕಾರವೇ ಆಗಿರಬೇಕು. 14 ದಿನಗಳಲ್ಲಿ ನಾನು ಭಾಗವಹಿಸುತ್ತಿರುವ 37ನೇ ಸಮಾವೇಶ ಇದು’ ಎಂದರು.

ಲಾಠಿ ಕಿತ್ತುಕೊಂಡ ಕುಡುಕ!

ಮೋದಿ ವೇದಿಕೆ ಹತ್ತುವಾಗ ಮೊಳಗಿದ ಹಾಡಿಗೆ ಕುಡುಕನೊಬ್ಬ ಹೆಜ್ಜೆ ಹಾಕುತ್ತಿದ್ದ. ಆಗ ಜನ, ‘ಕುತ್ಕೋಳಪ್ಪಾ.. ನಾವೂ ಪ್ರಧಾನಿಯನ್ನು ನೋಡಬೇಕು’ ಎಂದು ಗಲಾಟೆ ಶುರು ಮಾಡಿದರು. ಏಕಾಏಕಿ ಕಾನ್‌ಸ್ಟೆಬಲ್‌ವೊಬ್ಬರಿಂದ ಲಾಠಿ ಕಿತ್ತುಕೊಂಡ ಆತ, ಜನರತ್ತ ನುಗ್ಗಿದ. ಆಗ ಪೊಲೀಸರು ಓಡಿ ಹೋಗಿ ಆತನನ್ನು ಹಿಡಿದುಕೊಂಡರು. ಇದೇ ವೇಳೆ ಟೇಬಲ್‌ವೊಂದು ಮುರಿದು ಏಳೆಂಟು ಕಾರ್ಯಕರ್ತರು ನೆಲಕ್ಕೆ ಬಿದ್ದರು.

ಸುಮಾರು ಒಂದೂವರೆ ತಾಸು ಭಾಷಣ  ಮುಗಿಸಿ ಮೋದಿ ಹೊರಟು ಹೋದರು. ಈ ವೇಳೆಗಾಗಲೇ ಸಭಿಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ, ಬಹುತೇಕ ಮಂದಿ ಮೆಟ್ರೊ ನಿಲ್ದಾಣದತ್ತ ತೆರಳಿದರು. ಇದರಿಂದಾಗಿ ನ್ಯಾಷನಲ್ ಕಾಲೇಜು ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು.

ಮೆಟ್ರೊದಲ್ಲಿ ಘೋಷಣೆ, ಮತಯಾಚನೆ

‘ಕಾರ್ಯಕ್ರಮ ಮುಗಿದ ಬಳಿಕ ಬಿಜೆಪಿ ಕಾರ್ಯಕರ್ತರು ಸಹ ಮೆಟ್ರೊ ರೈಲಿನಲ್ಲೇ ಮೆಜೆಸ್ಟಿಕ್‌ಗೆ ಪ್ರಯಾಣಿಸಿದರು. ರೈಲಿನಲ್ಲಿ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಅವರು, ‘ಎಲ್ಲರೂ ಬಿಜೆಪಿಗೇ ಮತ ಹಾಕಿ. ಸಿದ್ದರಾಮಯ್ಯ ಸರ್ಕಾರದಿಂದ ಅನುಭವಿಸಿದ್ದು ಸಾಕು’ ಎಂದು ಮತಯಾಚನೆಯನ್ನೂ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.