ADVERTISEMENT

ಬೆಂಗಳೂರು ಹಾಳು ಮಾಡಿದ್ದೇ ಬಿಜೆಪಿ: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಬೆಂಗಳೂರು ಹಾಳು ಮಾಡಿದ್ದೇ ಬಿಜೆಪಿ: ಕುಮಾರಸ್ವಾಮಿ ಟೀಕೆ
ಬೆಂಗಳೂರು ಹಾಳು ಮಾಡಿದ್ದೇ ಬಿಜೆಪಿ: ಕುಮಾರಸ್ವಾಮಿ ಟೀಕೆ   

ಮೈಸೂರು: ಬೆಂಗಳೂರು ನಗರವನ್ನು ಮೊದಲು ಹಾಳು ಮಾಡಿದ್ದೇ ಬಿಜೆಪಿ, ಇದೀಗ ಅದೇ ಪಕ್ಷ ಬೆಂಗಳೂರು ಉಳಿಸಿ ಎಂಬ ಹೆಸರಿನಲ್ಲಿ ಪಾದಯಾತ್ರೆ ನಡೆಸಿ ಜನರ ದಿಕ್ಕುತಪ್ಪಿಸುತ್ತಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಹಾಳಾಗಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಸಮಾನ ಕೊಡುಗೆ ಇದೆ. ರಾಜಧಾನಿ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಈ ಎರಡು ಪಕ್ಷಗಳಿಗೂ ಇಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳಲ್ಲಿ ಬೆಂಗಳೂರಿಗೆ ಏನು ಕೊಟ್ಟಿದ್ದಾರೆ? ದುಡ್ಡು ಹೊಡೆಯುವ ಕಾರ್ಯಕ್ರಮ ಮಾತ್ರ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಜೇಬು ತುಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಒವೈಸಿ ಜತೆ ಮಾತುಕತೆ ನಡೆದಿಲ್ಲ: ‘ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಜತೆ ಮಾತುಕತೆ ನಡೆದಿಲ್ಲ. ನಮ್ಮ ಪಕ್ಷ ಸದ್ಯಕ್ಕೆ ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ’ ಎಂದರು.

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬೇರೆ ಪಕ್ಷಗಳು ಹೊಂದಾಣಿಕೆಗೆ ಬಂದರೆ ಅದನ್ನು ಪರಿಗಣಿಸುತ್ತೇವೆ. ಅಭಿವೃದ್ಧಿ ಹೊರತುಪಡಿಸಿ ಬೇರೆ ಅಜೆಂಡಾಗಳನ್ನು ಇಟ್ಟುಕೊಂಡು ಬಂದರೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಹೇಳಿದರು.

ಗುತ್ತಿಗೆದಾರರಿಗೆ ಗೊತ್ತು: ‘ಕಾಂಗ್ರೆಸ್ ಮತ್ತು ಬಿಜೆಪಿ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿವೆ. ಎರಡೂ ಪಕ್ಷದವರು ಪರ್ಸೆಂಟೇಜ್‌ ಪಡೆಯುವು
ದರಲ್ಲಿ ನಿಸ್ಸೀಮರು’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ನನ್ನ ಆಡಳಿತದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸೆಂಟೇಜ್ ಇದೆ ಎಂಬುದು ಗುತ್ತಿಗೆದಾರರಿಗೆ ಚೆನ್ನಾಗಿ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನು ದುಡ್ಡು ಮಾಡುವಂತಹ ಹುಲ್ಲುಗಾವಲನ್ನಾಗಿ ಮಾಡಿಕೊಂಡಿವೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.