ADVERTISEMENT

ಮತ್ತೆ ಅಧಿಕಾರ: ರಾಹುಲ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಬೆಳಗಾವಿ ಜಿಲ್ಲೆಯ ರಾಮದುರ್ಗದ ಚಿಂಚೋಳಿ ಗ್ರಾಮದಲ್ಲಿರುವ ಭೀಮಯ್ಯ ಎಂಬ ರೈತರ ಮನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರದಿಂದ ಆಗಿರುವ ಅನುಕೂಲದ ಬಗ್ಗೆ ವಿಚಾರಿಸಿ ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಶಾಸಕ ಅಶೋಕ್ ಪಟ್ಟಣ ಮತ್ತು ಇತರರು ಇದ್ದಾರೆ -   ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ಬೆಳಗಾವಿ ಜಿಲ್ಲೆಯ ರಾಮದುರ್ಗದ ಚಿಂಚೋಳಿ ಗ್ರಾಮದಲ್ಲಿರುವ ಭೀಮಯ್ಯ ಎಂಬ ರೈತರ ಮನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರದಿಂದ ಆಗಿರುವ ಅನುಕೂಲದ ಬಗ್ಗೆ ವಿಚಾರಿಸಿ ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಶಾಸಕ ಅಶೋಕ್ ಪಟ್ಟಣ ಮತ್ತು ಇತರರು ಇದ್ದಾರೆ - ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್   

ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಮಾಧ್ಯಮದವರು, ಉದ್ಯಮಿಗಳು ಬಿಜೆಪಿ ಪರವಾಗಿದ್ದಾರೆ. ನಮ್ಮೊಂದಿಗೆ ರೈತರು, ಕಾರ್ಮಿಕರು, ಬಡವರಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಎರಡನೇ ಹಂತದ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಕೊನೇ ದಿನವಾದ ಸೋ‌ಮವಾರವೂ, ಬಸವಣ್ಣನ ವಚನಾಮೃತದ ಸಾಲು ಉಲ್ಲೇಖಿಸಿ, ಲಿಂಗಾಯತ ಪ್ರಾಬಲ್ಯದ ಮುಂಬೈ– ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ರಾಹುಲ್ ಬೆಂಬಲ ಬೇಡಿದರು. ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೊಗಳಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದರು.

‘ದೇಶದಲ್ಲಿರುವ ಕಳ್ಳರು ಮೋದಿ ಕೃಪೆಯಿಂದಾಗಿ ಕಪ್ಪುಹಣ ಬಿಳಿ ಮಾಡಿಕೊಂಡಿದ್ದಾರೆ. ಜನಸಾಮಾನ್ಯರ ಜೇಬಿನಲ್ಲಿರುವ ಹಣವನ್ನು ಜಾದೂ ಮಾಡಿರುವ ಮೋದಿ, ಒಬ್ಬ ಜಾದೂಗಾರ’ ಎಂದು ಕುಟುಕಿದರು.

ADVERTISEMENT

‘ಪ್ರತಿ ಭಾಷಣದಲ್ಲೂ ಮೋದಿ ರೈತರ ಬಗ್ಗೆ ಮಾತನಾಡುತ್ತಾರೆ, ಆದರೆ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಲಿಲ್ಲ. ಅದರೆ, ಉದ್ಯಮಪತಿಗಳಿಗೆ ಬೇಕಿದ್ದನ್ನೆಲ್ಲ ಮಾಡಿಕೊಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಯೋಜನೆಗಳೂ ಅನುಷ್ಠಾನ ಆಗಿಲ್ಲ. ಬೇಟಿ ಬಚಾವೊ- ಬೇಟಿ ಪಢಾವೊ ಯೋಜನೆ ಜಾರಿಗೆ ತಂದರೂ ಒಂದು ರೂಪಾಯಿ ಕೂಡ ತೆಗೆದಿಡಲಿಲ್ಲ. ಟಾಟಾ ಕಂಪನಿಯ ನ್ಯಾನೊ ಕಾರು ಕಾರ್ಖಾನೆ ಸ್ಥಾಪನೆಗೆ ಮೋದಿ ₹35 ಸಾವಿರ ಕೋಟಿ ಕೊಟ್ಟರು, ಆದರೆ ಒಂದೇ ಒಂದು ನ್ಯಾನೊ ಕಾರು ನಾನು ರಸ್ತೆಯಲ್ಲಿ ಕಂಡಿಲ್ಲ, ಅದನ್ನು ಹುಡುಕುತ್ತಿದ್ದೇನೆ. ನ್ಯಾನೊಗೆ ಕೊಟ್ಟ ಹಣ ಯಾರದ್ದು ಮೋದಿಯವರೇ’ ಎಂದು ರಾಹುಲ್‌ ತೀಕ್ಷ್ಣವಾಗಿ ಪ್ರಶ್ನಿಸಿದರು.

‘2002ರಿಂದ ಗುಜರಾತಿನಲ್ಲಿ ಲೋಕಾಯುಕ್ತರ ನೇಮಕ ಆಗಿಲ್ಲ. ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಲೋಕಪಾಲ್ ನೇಮಕ ಮಾಡಿಲ್ಲ. ಇವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ’ ಎಂದು ಲೇವಡಿ ಮಾಡಿದರು.

ಕಬ್ಬಿನ ಗದ್ದೆಗಿಳಿದು ರೈತರೊಂದಿಗೆ ಚರ್ಚೆ

ಚಿಲ್ಮೂರು ಕ್ರಾಸ್ (ರಾಮದುರ್ಗ ತಾಲ್ಲೂಕು): ಜನಾಶೀರ್ವಾದ ಯಾತ್ರೆ ಮಧ್ಯೆ ರಾಹುಲ್ ಗಾಂಧಿ ಸೋಮವಾರ ಏಕಾಏಕಿ ಸುನ್ನಾಳ ಗ್ರಾಮದ ರೈತರೊಬ್ಬರ ಕಬ್ಬಿನ ಗದ್ದೆಗೆ ತೆರಳಿ ಕಷ್ಟ ಸುಖ ಆಲಿಸಿದರು.

ಗೊಡಚಿಯಿಂದ ಸವದತ್ತಿ ಕಡೆ ಹೋಗುವ ದಾರಿಯಲ್ಲಿ ಕಬ್ಬಿನ ಗದ್ದೆಗೆ ಹೊಂದಿಕೊಂಡಂತೆ ಇದ್ದ ಪುಟ್ಟ ಮನೆಯ ಜಗಲಿ ಮೇಲೆ ಕುಳಿತ ಅವರು, ರೈತ ಭೀಮಯ್ಯ- ರಾಮಕ್ಕ ದಂಪತಿಯನ್ನು ಪಕ್ಕ ಕುಳ್ಳಿರಿಸಿಕೊಂಡು ಮಾತನಾಡಿಸಿದರು‌. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತನ ಮಾತುಗಳನ್ನು ಭಾಷಾಂತರಿಸಿದರು.

‘ನಿಮ್ಮ ಬಳಿ ಎಷ್ಟು ಎಕರೆ ಜಮೀನಿದೆ? ಏನು ಬೆಳೆ ತೆಗೆದಿದ್ದೀರಿ? ಎಷ್ಟು ಲಾಭ ಬರಬಹುದು? ಎಷ್ಟು ಸಾಲವಿದೆ ಮತ್ತಿತರ ಮಾಹಿತಿ ಪಡೆದ ರಾಹುಲ್, ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಯೋಜನೆ ಲಾಭ ಸಿಕ್ಕಿದೆಯೇ’ ಎಂದು ಪ್ರಶ್ನಿಸಿದರು. ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳ ಬಗ್ಗೆಯೂ ಕೇಳಿದರು. ಭೀಮಯ್ಯ ಮತ್ತು ಅಲ್ಲಿದ್ದ ಕೆಲವು ರೈತ ಮಹಿಳೆಯರು ‘ಈ ಯೋಜನೆ ಬಗ್ಗೆ ನಮಗೇನೂ ತಿಳಿಯದು’ ಎಂದರು. ‘ನಾವು ನರೇಗಾ ಲಾಭ ಪಡೆದಿಲ್ಲ’ ಎಂದರು.

ಬ್ಯಾಂಕಿನಲ್ಲಿರುವ ಸಾಲದ ಬಗ್ಗೆ ಭೀಮಯ್ಯ ದಂಪತಿ ಹೇಳಿಕೊಂಡರು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಎರಡು ಲಕ್ಷ ಸಾಲ ಇದ್ದು ಅದನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. ಅಲ್ಲೇ ಇದ್ದ ದಂಪತಿಯ ಸಂಬಂಧಿ ವಿಶಾಲಾಕ್ಷಿ, ‘ನಮ್ಮದು 9 ಲಕ್ಷ ಕೃಷಿ ಸಾಲ ಇದೆ’ ಎಂದರು. ರಾಹುಲ್ ಅಲ್ಲಿಂದ ಹೊರಡಲು ಮುಂದಾಗುತ್ತಿದ್ದಂತೆ ರೈತನೊಬ್ಬ ಕುರಿ ಮರಿ ಒಂದನ್ನು ಕೊಡಲು ಮುಂದಾದ. ಆದರೆ, ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ.

ದೇವಸ್ಥಾನ, ಮಠಕ್ಕೂ ಭೇಟಿ: ರಾಹುಲ್ ಸೋಮವಾರ ದೇವಸ್ಥಾನ ಮತ್ತು ಮಠಗಳಿಗೂ ಭೇಟಿ ಕೊಟ್ಟರು. ರಾಮದುರ್ಗ ಸಮಾವೇಶದ ಬಳಿಕ, ಐತಿಹಾಸಿಕ ಗೊಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಅಲ್ಲಿಂದ ಸವದತ್ತಿಗೆ ಬರುವ ಮಧ್ಯೆ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದರು. ಧಾರವಾಡದಲ್ಲಿ ಮುರುಘಾ ಮಠಕ್ಕೆ ಭೇಟಿ ನೀಡಿದರು.

ದೇವಸ್ಥಾನ, ಮಠಕ್ಕೂ ಭೇಟಿ

ರಾಹುಲ್ ಸೋಮವಾರ ದೇವಸ್ಥಾನ ಮತ್ತು ಮಠಗಳಿಗೂ ಭೇಟಿ ಕೊಟ್ಟರು. ಬಾಗಲಕೋಟೆಯಿಂದ ಹೆಲಿಕಾಪ್ಟರ್‌ನಲ್ಲಿ ರಾಮದುರ್ಗಕ್ಕೆ ಬಂದ ರಾಹುಲ್, ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಐತಿಹಾಸಿಕ ಗೊಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಅಲ್ಲಿಂದ ಸವದತ್ತಿಗೆ ಬರುವ ಮಧ್ಯೆ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದರು. ಇದೇ ವೇಳೆ ಸ್ವಾಗತಕ್ಕಾಗಿ ಪಕ್ಷದ ಮುಖಂಡರು ಆಯೋಜಿದ್ದ ಜನಪದ ಕಲಾ ಪ್ರದರ್ಶನದಿಂದ ಖುಷಿಗೊಂಡು, ಜಗ್ಗಲಗಿ ಬಡಿದರು.

ಧಾರವಾಡದಲ್ಲಿ ಲಿಂಗಾಯತ ಸಮುದಾಯದ ಪ್ರಸಿದ್ಧ ಮುರುಘಾ ಮಠಕ್ಕೂ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.