ADVERTISEMENT

ಮದುಮಕ್ಕಳ ಸಂಭ್ರಮ: ಮದುವೆ ಮನೆಯಿಂದ ಮತಗಟ್ಟೆಗೆ!

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಹುಬ್ಬಳ್ಳಿಯಲ್ಲಿ ಸಾಯಿನಾಥ ಪವಾರ ಮತ್ತು ಸುಮನ್‌ ಹಾಗೂ ಪ್ರವೀಣರಾಜು ಪವಾರ ಮತ್ತು ವಂದನಾ ನವ ವಿವಾಹಿತ ಜೋಡಿ ಎಡ ತೋರು ಬೆರಳಿಗೆ ಹಾಕಿದ ಶಾಹಿಯನ್ನು ತೋರಿಸಿದರು.
ಹುಬ್ಬಳ್ಳಿಯಲ್ಲಿ ಸಾಯಿನಾಥ ಪವಾರ ಮತ್ತು ಸುಮನ್‌ ಹಾಗೂ ಪ್ರವೀಣರಾಜು ಪವಾರ ಮತ್ತು ವಂದನಾ ನವ ವಿವಾಹಿತ ಜೋಡಿ ಎಡ ತೋರು ಬೆರಳಿಗೆ ಹಾಕಿದ ಶಾಹಿಯನ್ನು ತೋರಿಸಿದರು.   

ಹುಬ್ಬಳ್ಳಿ/ಮಂಗಳೂರು: ಶನಿವಾರ ಇವರ ಪಾಲಿಗೆ ಎರೆಡೆರಡು ಸಂಭ್ರಮ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮ ಒಂದೆಡೆಯಾದರೆ, ದೇಶದ ಪ್ರಜೆಯಾಗಿ ಅದೇ ದಿನ ಮತದಾನದ ಹಕ್ಕು ಚಲಾಯಿಸಿದ ಖುಷಿ ಮತ್ತೊಂದೆಡೆ.

ರಾಜ್ಯದ ವಿವಿಧ ಕಡೆಗಳಲ್ಲಿ ಶನಿವಾರ ಹಸೆಮಣೆ ಏರಿದ ಹಲವು ಯುವಕ–ಯುವತಿಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಮರೆಯಲಿಲ್ಲ. ಮದುವೆಯ ದಿರಿಸಿನಲ್ಲೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. 

ಹುಬ್ಬಳ್ಳಿ ವರದಿ: ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳಲ್ಲಿ ಮದು ಮಕ್ಕಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನದಂದೇ ಮತ ಹಾಕಿದ ಸಂಭ್ರಮ ಅನುಭವಿಸಿದರು.

ADVERTISEMENT

ಹುಬ್ಬಳ್ಳಿಯ ಸಾಲ ಓಣಿಯಲ್ಲಿ ಸಾಯಿನಾಥ ಪವಾರ ಮತ್ತು ಸುಮನ್‌ ಹಾಗೂ ಪ್ರವೀಣರಾಜು ಪವಾರ ಮತ್ತು ವಂದನಾ ಅವರು ಶನಿವಾರ ವಿವಾಹ ಜೀವನಕ್ಕೆ ಕಾಲಿರಿಸಿದರು. ಮದುವೆ ಬಳಿಕ ಸಹೋದರರಿಬ್ಬರು ನೇರವಾಗಿ ಪೆಂಡಾರಗಲ್ಲಿ ಸ್ಕೂಲ್‌ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಹಳೆಬಾಗಲಕೋಟೆ ದಡ್ಡೇನವರ ಕ್ರಾಸ್ ನಿವಾಸಿ ಉದ್ಯಮಿ ರಾಜೇಂದ್ರ ಸೋಮಾನಿ- ಅನುರಾಧಾ ದಂಪತಿ ಪುತ್ರಿ ಸೋನಲ್ ಶನಿವಾರ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿ ಗಮನ ಸೆಳೆದರು.

ಮಹಾರಾಷ್ಟ್ರದ ನಾಸಿಕ್‌ ನಿವಾಸಿ ಸಾಯಿರಾಮ್‌ ಬುಟಡಾ ಹಾಗೂ ವಿಂಚುರ್ ದಂಪತಿ ಪುತ್ರ ಸಾಯಿನಾಥ್ ಅವರೊಂದಿಗೆ ಮದುವೆ ನೆರವೇರಿತು. ಮುಹೂರ್ತ ಮುಗಿಯುತ್ತಿದ್ದಂತೆಯೇ ಸೋನಲ್, ತಮ್ಮ ಪತಿಯೊಂದಿಗೆ ಅಲ್ಲಿನ ಅಂಗನವಾಡಿ ಕಟ್ಟಡದಲ್ಲಿನ ಮತಗಟ್ಟೆ ಸಂಖ್ಯೆ 134ಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಧಾರವಾಡದ ಕಾಮನಕಟ್ಟಿಯಲ್ಲಿ ಮಲ್ಲಿಕಾರ್ಜುನ ಗಾಮನಗಟ್ಟಿ, ಪತ್ನಿ ನಿಖಿತಾ ಅವರೊಡಗೂಡಿ ಮತ ಚಲಾಯಿಸಿದರು.

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನವವಧು ಸರಿತಾ ವಡ್ಡರ, ‘ಸಖಿ’ ಮತಗಟ್ಟೆಗೆ ಬಂದು ಮತ ಹಾಕಿದರು. ಬೆಳಗಾವಿಯ ತೆಂಗಿನಕೇರಿಯ ಗಲ್ಲಿಯ ಮತಗಟ್ಟೆಗೆ ಬಂದು ಮಾನಿನಿ ತಹಶೀಲ್ದಾರ ಮತ ಚಲಾಯಿಸಿದರು.

ಕಾರವಾರದ ಸದಾಶಿವಗಡದಲ್ಲಿ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತನ್ವಿ ಶಿವಾನಂದ ನಾಯಕ, ಹಸೆಮಣೆ ಏರುವ ಮುನ್ನವೇ ಬೆಳಿಗ್ಗೆ 7 ಗಂಟೆಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಮಂಗಳೂರು ವರದಿ: ನಗರದ ಬೋಂದೆಲ್‌ ನಿವಾಸಿಯಾಗಿರುವ ವಿಯೊಲಾ ಮರಿಯಾ ಫರ್ನಾಂಡಿಸ್‌ ಶನಿವಾರ ವಿವಾಹದ ಸಂಭ್ರಮದ ನಡುವೆಯೂ ಮತ ಚಲಾಯಿಸುವುದನ್ನು ಮರೆಯಲಿಲ್ಲ. ಮದುವೆ ದಿರಿಸಿನಲ್ಲೇ ಮತಗಟ್ಟೆಗೆ ಬಂದ ಈ ಮದುವಣಗಿತ್ತಿ, ಹಕ್ಕು ಚಲಾಯಿಸಿ ಮದುವೆ ಮಂಟಪದತ್ತ ತೆರಳಿದರು.

ವಿಯೊಲಾ ಮತ್ತು ಸಿಲ್ವೆಸ್ಟರ್‌ ರೋಡ್ರಿಗಸ್‌ ಅವರ ಮದುವೆ ಶನಿವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿಯಲ್ಲಿ ನಿಗದಿಯಾಗಿತ್ತು. ನಗರದಿಂದ ಬೆಳ್ತಂಗಡಿಗೆ ತೆರಳುವ ಮುನ್ನ ಬೋಂದೆಲ್‌ನ ಸೇಂಟ್ ಲಾರೆನ್ಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ಕುಟುಂಬದ ಸದಸ್ಯರೊಂದಿಗೆ ಬಂದ ವಧು, ಅಲ್ಲಿ ಮತ ಚಲಾಯಿಸಿದರು. ಬಳಿಕ ಬೆಳ್ತಂಗಡಿಯತ್ತ ಹೊರಟರು.

ಮತದಾನದ ಬಳಿಕ ಪ್ರತಿಕ್ರಿಯಿಸಿದ ವಿಯೊಲಾ, ‘ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಮದುವೆಯ ದಿನವೇ ಮತದಾನವನ್ನೂ ಮಾಡಿರುವುದು ಸಂಭ್ರಮ ಹೆಚ್ಚಿಸಿದೆ. ದಿನಾಂಕ ನಿಗದಿ ಮಾಡಿದಾಗಲೇ ಮತದಾನದ ಕುರಿತು ಚರ್ಚೆಯಾಗಿತ್ತು. ನಮ್ಮ ಕುಟುಂಬದ ಎಲ್ಲರೂ ಮತ ಚಲಾಯಿಸಿದ ಬಳಿಕ ಬರುವುದಾಗಿ ತಿಳಿಸಿದ್ದೆವು. ನಮ್ಮ ಆಸೆಯಂತೆ ಮತದಾನವನ್ನೂ ಮಾಡಿದ್ದೇವೆ’ ಎಂದು ಸಂತಸ ಹಂಚಿಕೊಂಡರು.

ಔತಣಕೂಟಕ್ಕೆ ಮೊದಲು ಮತ: ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಹರ್ಷಿತಾ ಜೆ.ಸಾಲ್ಯಾನ್‌ ಅವರು ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟುವಿನ ಮತಗಟ್ಟೆಯೊಂದರಲ್ಲಿ ಮದುವೆಯ ದಿರಿಸಿನೊಂದಿಗೆ ಬಂದು ಮತ ಚಲಾಯಿಸಿದರು. ಇದೇ 29ರಂದು ದೆಹಲಿಯಲ್ಲಿ ನಡೆಯುವ ಅವರ ಮದುವೆ ಪ್ರಯುಕ್ತ ಶನಿವಾರ ಮೊಡಂಕಾಪುವಿನ ಚರ್ಚ್‌ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.

‘ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ಓದು ಮತ್ತು ಉದ್ಯೋಗದ ಕಾರಣಕ್ಕೆ ಇದುವರೆಗೆ ಊರಿಗೆ ಬಂದು ಮತ ಚಲಾಯಿಸುವ ಅವಕಾಶ ಸಿಕ್ಕಿರಲಿಲ್ಲ. ನನ್ನ ಮದುವೆಯ ಔತಣಕೂಟದ ದಿನವೇ ಮೊದಲ ಮತದಾನಕ್ಕೂ ಅವಕಾಶ ಸಿಕ್ಕಿರುವುದರಿಂದ ಖುಷಿಯಾಗಿದೆ’ ಎಂದರು.

ಮಡಿಕೇರಿ ವರದಿ: ಮಡಿಕೇರಿ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದಲ್ಲಿ ಮಧುಮಗಳು ಸ್ಮಿತಾ ಹಸೆ ಮಣೆ ಏರುವ ಮೊದಲು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.