ADVERTISEMENT

ಮಾತೆ ಮಹಾದೇವಿಗೆ ಮತಿಭ್ರಮಣೆ: ಟೀಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಮಾತೆ ಮಹಾದೇವಿಗೆ ಮತಿಭ್ರಮಣೆ: ಟೀಕೆ
ಮಾತೆ ಮಹಾದೇವಿಗೆ ಮತಿಭ್ರಮಣೆ: ಟೀಕೆ   

ಬೆಂಗಳೂರು: ‘ಸ್ವಯಂಘೋಷಿತ ಜಗದ್ಗುರು ಮಾತೆ ಮಹಾದೇವಿ ಅವರು ವಯೋಸಹಜ ಮತಿಭ್ರಮಣೆಗೆ ತುತ್ತಾಗಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ ಟೀಕಿಸಿದ್ದಾರೆ.

‘ಅತ್ತ ಬಸವ ತತ್ವವನ್ನು ಪಾಲಿಸದೇ, ಇತ್ತ ರಾಜಕಾರಣವನ್ನು ಮಾಡಲಾರದೇ ಎಡಬಿಡಂಗಿ ಸ್ಥಿತಿಯಲ್ಲಿ ಮಾತೆ ಮಹಾದೇವಿ ಇದ್ದಾರೆ. ಅವರ ಇತಿಹಾಸ ತಿಳಿದ ಯಾರೊಬ್ಬರು ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಇಂಥವರು ಎಂ.ಬಿ. ಪಾಟೀಲರ ಬೆನ್ನಿಗೆ (ಶನಿಯಂತೆ) ನಿಂತಿರುವುದು ಸಮಾಜದ ದುರ್ದೈವ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘2018ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಾದರೂ ಅವರು ಬುದ್ಧಿ ಕಲಿತಿದ್ದಾರೆ ಎಂದು ಜನರ ಭಾವಿಸಬಾರದು. ಬುದ್ಧಿ ಕಲಿಯದ ಇಂಥವರಿಂದ ಸಮಾಜ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ವಕ್ತಾರರಂತೆ ನಡೆದುಕೊಂಡಿದ್ದ ಅವರು ಆ ಪಕ್ಷದ ಸೋಲಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೃಪಾಶೀರ್ವಾದದಿಂದ ಸಮಾಜದ ಯುವ ಮುಖಂಡರು, ಮುತ್ಸದ್ಧಿಗಳು ಮಂತ್ರಿಗಿರಿ ಮಾತ್ರವಲ್ಲ, ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ಮಾತೆ ಮಹಾದೇವಿ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಮಹಾಸಭಾ ಭಾವಿಸಿದೆ’ ಎಂದು ಅವರ ಹೇಳಿಕೆ ತಿಳಿಸಿದೆ.

‘ಮುಂದಿನ ದಿನಗಳಲ್ಲಿ ಸಮಾಜ ಹಾಗು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರನ್ನು ಕಾಂಗ್ರೆಸ್‌ ಹೈಕಮಾಂಡ್ ಗುರುತಿಸಿ ಅವಕಾಶ ನೀಡಬೇಕು. ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು’ ಎಂದು ತಿಪ್ಪಣ್ಣ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.