ADVERTISEMENT

ಮುಖ್ಯಮಂತ್ರಿ ಬಳಿಯೇ ‘ಉನ್ನತ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಮುಖ್ಯಮಂತ್ರಿ ಬಳಿಯೇ ‘ಉನ್ನತ ಶಿಕ್ಷಣ’
ಮುಖ್ಯಮಂತ್ರಿ ಬಳಿಯೇ ‘ಉನ್ನತ ಶಿಕ್ಷಣ’   

ಬೆಂಗಳೂರು: ‘ಮುಖ್ಯಮಂತ್ರಿ ಪದವಿಯಲ್ಲಿ ಇರುವವರೆಗೂ, ಉನ್ನತ ಶಿಕ್ಷಣ ಖಾತೆಯನ್ನು ನಾನೇ ಇಟ್ಟುಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರು ಸಚಿವ ಜಿ.ಟಿ.ದೇವೇಗೌಡರ ಅಸಮಾಧಾನವನ್ನು ಶಮನ ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಗೃಹಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಸಿದ ಮುಖ್ಯಮಂತ್ರಿ, ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಉನ್ನತ ಶಿಕ್ಷಣ ಖಾತೆಯನ್ನು ನಾನೇ ಇಟ್ಟುಕೊಳ್ಳಲಾ’ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದ ಮುಖ್ಯಮಂತ್ರಿ, ‘ನೀವು ಹ್ಞೂಂ ಅಂದರೆ, ಆ ಹೊಣೆಯನ್ನೂ ನಾನೇ ನಿಭಾಯಿಸುತ್ತೇನೆ’ ಎಂದು ತಮಾಷೆ ಮಾಡಿದರು.

ADVERTISEMENT

ಕೊನೆಗೆ, ‘ಇದೊಂದು ಮಹತ್ವದ ಇಲಾಖೆ. ಹೀಗಾಗಿ, ಖಾತೆಯನ್ನು ನಾನೇ ಇಟ್ಟುಕೊಳ್ಳುತ್ತೇನೆ. ಜಿ.ಟಿ.ದೇವೇಗೌಡ ಅವರಿಗೆ ಬೇರೆ ಯಾವ ಜವಾಬ್ದಾರಿ ನೀಡಬೇಕು ಎಂಬ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಎಂಟನೇ ತರಗತಿ ಪಾಸ್‌ ಆಗಿರುವ ಜಿ.ಟಿ.ದೇವೇಗೌಡರಿಗೆ, ಉನ್ನತ ಶಿಕ್ಷಣ ಇಲಾಖೆ ನಿರ್ವಹಣೆಯಂಥ ದೊಡ್ಡ ಹೊಣೆಗಾರಿಕೆ ನೀಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣಗಲ್ಲೂ ಈ ಬಗ್ಗೆ ಸ್ವಾರಸ್ಯಕರ ಟೀಕೆಗಳೂ ವ್ಯಕ್ತವಾಗಿದ್ದವು. ‘ಯಾವುದೇ ಕಾರಣಕ್ಕೂ ಈ ಖಾತೆ ಒಪ್ಪಿಕೊಳ್ಳಬಾರದು’ ಎಂದು ಅವರ ಬೆಂಬಲಿಗರು ಸಹ ಆಗ್ರಹಿಸಿದ್ದರು.

‘ಹೈಸ್ಕೂಲ್‌ಗೇ ಶಾಲೆ ತೊರೆದ ಗೌಡ್ರು ರಾಜ್ಯಕ್ಕೆ ಯಾವ ರೀತಿಯ ಉನ್ನತ ಶಿಕ್ಷಣದ ನೀತಿಗಳನ್ನು ರೂಪಿಸುತ್ತಾರೆ? ಅನೈತಿಕ ಮೈತ್ರಿಗಳಲ್ಲಿ ಇoಥವೇ ಜಾಸ್ತಿ’ ಎಂದೂ ಕೆಲವರು ಕುಟುಕಿದ್ದರು.

ಇಂಥ ಟೀಕೆಗಳಿಂದ ತಮಗೆ ಮುಜುಗರ ಆಗುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದ ಜಿ.ಟಿ.ದೇವೇಗೌಡ, ‘ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ನನಗೆ ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟವಾಗುತ್ತದೆ.
ದಯಮಾಡಿ ಕಂದಾಯ ಅಥವಾ ಸಾರಿಗೆಯಂಥ ಖಾತೆಗಳನ್ನು ಕೊಡಿ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಬಳಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.