ADVERTISEMENT

ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಜಿ.ಮಂಜುನಾಥ್ ಜಾತಿ ಪ್ರಮಾಣ ಪತ್ರ ಅಸಿಂಧು

ಹೈಕೋರ್ಟ್ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 15:49 IST
Last Updated 25 ಏಪ್ರಿಲ್ 2018, 15:49 IST
ಜಿ.ಮಂಜುನಾಥ್
ಜಿ.ಮಂಜುನಾಥ್   

ಬೆಂಗಳೂರು/ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಿ.ಮಂಜುನಾಥ್ (ಕೊತ್ತೂರು ಮಂಜುನಾಥ್) ಅವರ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ಹೈಕೋರ್ಟ್ ಘೋಷಿಸಿದೆ.

ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಜಿ.ಮಂಜುನಾಥ್ ಪ್ರಸ್ತುತ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದಾರೆ.

ಮುಳಬಾಗಿಲು ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ‘ನಾನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದ್ದೇನೆ’ ಎಂದು 2013ರ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ ‘ಜಿ.ಮಂಜುನಾಥ್ ಬುಡ್ಗ ಜಂಗಮ ಜಾತಿಗೆ ಸೇರಿಲ್ಲ’ ಎಂದು ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ್ದರು. ಚುನಾವಣೆಗೆ ಸ್ಪರ್ಧಿಸುವ ವೇಳೆ ಮಂಜುನಾಥ್ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಮುನಿಆಂಜಿನಪ್ಪ 2013ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ADVERTISEMENT

‘ಮಂಜುನಾಥ್ ಬೈರಾಗಿ ಜಾತಿಗೆ ಸೇರಿದವರು, ಅದು ಹಿಂದುಳಿದ ವರ್ಗಗಳ ‘ಅ’ ಪಟ್ಟಿಗೆ ಸೇರುತ್ತದೆ. ಕೋಲಾರದ ಬುಡ್ಗ ಜಂಗಮ ಜಾತಿಯೇ ಇಲ್ಲ. ಹೀಗಿರುವಾಗ ಮಂಜುನಾಥ್ ಅವರಿಗೆ ಹೇಗೆ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯ?’ ಎಂದು ಮುಳಬಾಗಿಲಿನ ಜೆಡಿಎಸ್ ಮುಖಂಡ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಆಂಜಿನಪ್ಪ ಮತ್ತು ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ ಪ್ರಶ್ನಿಸಿದ್ದರು.

ಕೋಲಾರದಿಂದಲೂ ನಾಮಪತ್ರ:

ಕಳೆದ ಶುಕ್ರವಾರ (ಏ.20) ಮುಳಬಾಗಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜಿ.ಮಂಜುನಾಥ್ ನಿನ್ನೆಯಷ್ಟೇ (ಏ.24) ಕೋಲಾರ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕೋಲಾರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಶುಕ್ರವಾರ (ಏ.24) ನಾಮಪತ್ರ ಸಲ್ಲಿಸಿದ್ದರು. ಸಂಸದ ಕೆ.ಎಚ್‌.ಮುನಿಯಪ್ಪ ಅವರ ಎರಡನೇ ಪುತ್ರಿ ನಂದಿನಿ ಅವರು ಮುಳಬಾಗಿಲು ಮೀಸಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇದೀಗ ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್‌ ಅಸಿಂಧು ಎಂದು ಘೋಷಿಸಿರುವುದರಿಂದ ಅವರ ನಾಮಪತ್ರವೂ ರದ್ದಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಮುಂದಿನ ನಡೆಯ ಬಗ್ಗೆ ಬಿಸಿಬಿಸಿ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಆಶ್ಚರ್ಯ ತಂದಿದೆ:

ಅರ್ಜಿದಾರ ಮಂಜುನಾಥ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ನ್ಯಾಯಪೀಠದ ಆದೇಶಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ‘ನಾಮಪತ್ರ ಪರಿಶೀಲನೆಯ ಸಂದರ್ಭದಲ್ಲಿ ಇಂಥ ಆದೇಶ ಹೊರಬಿದ್ದಿದೆ. ಚುನಾವಣಾ ತಕರಾರು ಅರ್ಜಿ ಮೇಲ್ಮನವಿ ಸಲ್ಲಿಸಲು ಸುಪ್ರೀಂಕೋರ್ಟ್‌ಗೆ ಹೋಗಬೇಕು. ಇದೊಂದು ರೀತಿಯ ಆಶ್ಚರ್ಯ ಉಂಟುಮಾಡಿದೆ’ ಎಂದರು.

₹25 ಸಾವಿರ ದಂಡ:

ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಕಾರಣಕ್ಕೆ ಮಂಜುನಾಥ್ ಗೆ ₹25,000 ದಂಡವನ್ನೂ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.