ADVERTISEMENT

ರಾಜಕೀಯ ಸಂಘರ್ಷ ಶುರು

ಬಿಜೆಪಿ– ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ, ಮಾರಕಾಸ್ತ್ರಗಳಿಂದ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ರಾಜಕೀಯ ಸಂಘರ್ಷ ಶುರು
ರಾಜಕೀಯ ಸಂಘರ್ಷ ಶುರು   

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆಯೇ ವಿವಿಧೆಡೆ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಪಕ್ಷಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ, ಕಲ್ಲು ತೂರಾಟ, ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿವೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಗೋಣಿಕೊಪ್ಪಲು ಪಟ್ಟಣದಲ್ಲಿ ಪ್ರಚಾರ ವೇಳೆ ಮುಖಾಮುಖಿಯಾದ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು
ಬಡಿದಾಡಿಕೊಂಡಿದ್ದಾರೆ.

ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಈ ಪೈಕಿ ಕಾಂಗ್ರೆಸ್‌ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಜಮ್ಮಡ ಸೋಮಣ್ಣ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ದಾಖಲಾಗಿದ್ದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ನುಗ್ಗಿದ ದುಷ್ಕರ್ಮಿಗಳು ದಾಂದಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಗಿದೆ.

ADVERTISEMENT

ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅಕ್ಕಪಕ್ಕದ ಮನೆಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಭದ್ರತೆಗೆ ಅರೆಸೇನಾ ಪಡೆ ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಪ್ರಚಾರ ನಡೆಸುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಕಾನ್‌ಸ್ಟೆಬಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ತೂರಾಟದಲ್ಲಿ ನಡೆಸಿದ ಆರೋಪದಲ್ಲಿ 30ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಮೇಲೆ ಹಲ್ಲೆ: ಕಾರಿನಲ್ಲಿ ಹೋಗುತ್ತಿದ್ದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್ ಮೇಲೆ ಬುಧವಾರ ಮಧ್ಯರಾತ್ರಿ ಅಪರಿಚಿತರು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ತಲೆಗೆ ಪೆಟ್ಟು ಬಿದ್ದಿರುವ ವೆಂಕಟೇಶ್ ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ಮೇಲೂ ಹಲ್ಲೆ ನಡೆದಿದೆ. ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ್ದ ವೆಂಕಟೇಶ್, ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಮೂಡಬಿದಿರೆಯ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ದೇವಾಡಿಗ ಬುಧವಾರ ರಾತ್ರಿ ಪಕ್ಷದ ಪ್ರಚಾರ ಕಾರ್ಯ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ಅಪರಿಚಿತ ದುಷ್ಕರ್ಮಿಗಳು ಚೂರಿಯಿಂದ ಇರಿಯಲಾಗಿದೆ.

ಚುನಾವಣೆ ಭದ್ರತೆಗೆ 1.53 ಲಕ್ಷ ಸಿಬ್ಬಂದಿ

ಚುನಾವಣೆ ದಿನ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ 1.53 ಲಕ್ಷ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಜ್ಯದ 81,010, ಹೊರರಾಜ್ಯದ 7,500 ಪೊಲೀಸರು, ಅರೆಸೇನಾ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 65,000 ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‌ ಪಂತ್‌ ತಿಳಿಸಿದರು.

ಮತಗಟ್ಟೆ ಸ್ವರೂಪಕ್ಕೆ ತಕ್ಕಂತೆ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದಲೂ ಪೊಲೀಸರು ಬಂದಿದ್ದಾರೆ ಎಂದರು.

ಕೊನೆಕ್ಷಣದ ಕಸರತ್ತು

ಶನಿವಾರ ಚುನಾವಣೆ (ಮೇ 12) ನಡೆಯಲಿದ್ದು, ಮತದಾರರ ಕೊನೆ ಕ್ಷಣದ ಓಲೈಕೆಗೆ ಗುರುವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ನಾನಾ ಕಸರತ್ತು ನಡೆಸಿದರು.

ಬಹಿರಂಗ ಪ್ರಚಾರ ಗುರುವಾರ ಸಂಜೆ 6ಕ್ಕೆ ಅಂತ್ಯವಾಯಿತು. ಆದರೆ, ಮನೆ ಮನೆಗೆ ತೆರಳಿ ಮತ ಯಾಚಿಸಲುಅವಕಾಶವಿದೆ. ಬಹಿರಂಗ ಪ್ರಚಾರದ ಸಮಯ ಮುಗಿದ ಬಳಿಕ ಮತ ಕ್ಷೇತ್ರಕ್ಕೆ ಸಂಬಂಧ ಇಲ್ಲದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ನಿರ್ಬಂಧವಿದೆ. ಕೊನೆಯ ದಿನ ಬಿಜೆಪಿ 50ಕ್ಕೂ ಹೆಚ್ಚು ಕಡೆ ರೋಡ್ ಷೋ ನಡೆಸಿದರೆ, ಕಾಂಗ್ರೆಸ್‌ ನಾಯಕರು ವಿವಿಧ ಭಾಗಗಳಲ್ಲಿ ಪಾದಯಾತ್ರೆ ಕೈಗೊಂಡರು. ರಾಹುಲ್‌‌ ಗಾಂಧಿ, ಅಮಿತ್ ಶಾ, ದೇವೇಗೌಡ ಸೇರಿ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.

ಸಚಿವರ ಆಪ್ತರ ಮನೆ ಮೇಲೆ ಐ.ಟಿ ಶೋಧ

ಸಚಿವರಾದ ಎಚ್‌.ಕೆ. ಪಾಟೀಲರ ಆಪ್ತರು ಹಾಗೂ ಚಿತ್ರದುರ್ಗದ ಜೆಡಿಎಸ್‌ ಅಭ್ಯರ್ಥಿ ಕೆ.ಸಿ. ವೀರೇಂದ್ರ (ಪಪ್ಪಿ) ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಶೋಧ ನಡೆದಿದೆ.

ಪಾಟೀಲರ ಆಪ್ತರಾಗಿರುವ ಆರ್‌. ಓದುಗೌಡರ, ಗದಗ ಆರೋಗ್ಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ನಿರ್ದೇಶಕ ಪಿ.ಎಸ್‌. ಬೂಸರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಬಡ್ನಿ ಹಾಗೂ ಡಾ.ಅನಂತ ಶಿವಪುರ ಅವರ ಮನೆ ಹಾಗೂ ಕಚೇರಿಗಳ ಮೇಲೆ ಶೋಧ ನಡೆದಿದೆ. ಚಿತ್ರದುರ್ಗದ ತರಳಬಾಳು ನಗರದಲ್ಲಿರುವ ಜೆಡಿಎಸ್‌ನ ವೀರೇಂದ್ರ ಮನೆ ಮೇಲೆ ಚುನಾವಣಾ ಆಯೋಗದ ವಿಚಕ್ಷಣಾ ದಳ ಹಾಗೂ ಐ.ಟಿ ಇಲಾಖೆ ಅಧಿಕಾರಿಗಳು ಶೋಧ ನಡೆಸಿದರು.

ಮುಖ್ಯಾಂಶಗಳು

* ಮತದಾನಕ್ಕೂ ಮೊದಲೇ ಕೆಲವೆಡೆ ಗಲಾಟೆ

* ಗೋಣಿಕೊಪ್ಪಲಿನಲ್ಲಿ ಲಘು ಲಾಠಿ ಪ್ರಹಾರ

* ಎಲ್ಲೆಡೆ ಬಿಗಿ ಬಂದೋಬಸ್ತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.