ADVERTISEMENT

ರಾಹುಲ್‌ ರಾಜಕೀಯವಾಗಿ ಅಪ್ರಬುದ್ಧ: ಮೋದಿ ವಾಗ್ದಾಳಿ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.   

ಕೋಲಾರ: ‘2019ಕ್ಕೆ ತಾನೇ ದೇಶದ ಪ್ರಧಾನಿ ಎಂದು ಬಡಾಯಿ ಕೊಚ್ಚಿಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಾಜಕೀಯವಾಗಿ ಅಪ್ರಬುದ್ಧರು’ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ಬುಧವಾರ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಚುನಾವಣೆಗೂ ಮುನ್ನವೇ ತಾನೇ ಪ್ರಧಾನಿ ಎಂದು ಹೇಳಿಕೊಂಡಿರುವ ರಾಹುಲ್‌, ಪ್ರಜಾತಂತ್ರ ವ್ಯವಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಅವರ ಅಹಂಕಾರ ಆಕಾಶದೆತ್ತರಕ್ಕೆ ಏರಿದೆ’ ಎಂದು ಟೀಕಿಸಿದರು.

‘ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕೆಂಬ ಉದ್ದೇಶದಿಂದ ರಾಹುಲ್‌ ಬೇರೆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಮೈತ್ರಿಕೂಟದ ಮಹತ್ವವೇ ಗೊತ್ತಿಲ್ಲ. ಮೈತ್ರಿಕೂಟದಲ್ಲಿನ ಹಿರಿಯ ಮುಖಂಡರ ಬಗ್ಗೆ ಗೌರವವಿಲ್ಲ. ಜನ ಎಲ್ಲಾ ಕಡೆ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಈ ಕಟು ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲದ ರಾಹುಲ್‌, ಪ್ರಜಾಪ್ರಭುತ್ವದ ಆಶಯವನ್ನು ನುಚ್ಚುನೂರು ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಜನ ಟ್ಯಾಂಕರ್‌ ನೀರಿಗಾಗಿ ಬಿಂದಿಗೆ ಹಿಡಿದು ಕಾಯುವಂತೆ, ಕಾಂಗ್ರೆಸ್‌ ಮೈತ್ರಿಕೂಟದ ಪಕ್ಷಗಳಲ್ಲಿನ ಹಿರಿಯ ಮುಖಂಡರು ಪ್ರಧಾನಿ ಹುದ್ದೆಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಆದರೆ, ಬಲಾಢ್ಯರು ಸಾಮಾನ್ಯ ಜನರನ್ನು ಸಾಲಿನಿಂದ ಪಕ್ಕಕ್ಕೆ ಸರಿಸಿ ಟ್ಯಾಂಕರ್‌ ನೀರು ಹಿಡಿದುಕೊಳ್ಳುವಂತೆ, ರಾಹುಲ್‌ ಗಾಂಧಿ ಮೈತ್ರಿಕೂಟದಲ್ಲಿನ ಹಿರಿಯರನ್ನೆಲ್ಲಾ ಪಕ್ಕಕ್ಕೆ ತಳ್ಳಿ ಪ್ರಧಾನಿಯಾಗಲು ಹೊರಟಿದ್ದಾರೆ’ ಎಂದು ಹೇಳಿದರು.

ಡೀಲ್‌ ಪಕ್ಷ: ‘ಅಹಂಕಾರದಿಂದ ತುಂಬಿರುವ ಕಾಂಗ್ರೆಸ್‌ ಹೃದಯವಂತ ಪಕ್ಷವಲ್ಲ, ದಲಿತರ ಪರವಾದ ಪಕ್ಷವಲ್ಲ. ಬದಲಿಗೆ ಡೀಲ್‌ ಪಕ್ಷ. ಈ ಸತ್ಯವನ್ನು ಕಾಂಗ್ರೆಸ್‌ ಸಂಸದ ವೀರಪ್ಪ ಮೊಯಿಲಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಮೊಯಿಲಿ ಸಾಮಾನ್ಯ ವ್ಯಕ್ತಿಯಲ್ಲ, ದೆಹಲಿ ರಾಜಕಾರಣಕ್ಕೆ ತುಂಬಾ ಹತ್ತಿರದವರು’ ಎಂದರು.

‘ಕಟುಸತ್ಯ ಹೇಳಿದ ಮೊಯಿಲಿ ಅವರನ್ನು ಕಡೆಗಣಿಸುವ ಪ್ರಯತ್ನ ನಡೆದಿದೆ. ಹೈಕಮಾಂಡ್‌, ಮೊಯಿಲಿ ಬಾಯಿಗೆ ಟೇಪ್‌ ಹಾಕಿ ‘ಚುನಾವಣಾ ಪ್ರಣಾಳಿಕೆ’ ಎಂಬ ಮಹಾಕಾವ್ಯ ರಚಿಸಲು ಬಿಟ್ಟಿತು. ಮೊಯಿಲಿ ಬಾಯಿ ಮುಚ್ಚಿಸಿರಬಹುದು. ಆದರೆ, ಜನರಿಂದ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.

‘ಸಿ.ಎಂ ಹೃದಯವನ್ನೂ ಹೊಕ್ಕಿದ್ದೇನೆ’

ಬೆಳಗಾವಿ: ‘ಇದುವರೆಗೆ ಬಿಜೆಪಿಯವರು ಮೋದಿ.. ಮೋದಿ.. ಎನ್ನುತ್ತಿದ್ದರು. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಲ್ಲೂ ಮೋದಿ ಮೋದಿ ಎಂದು ಕೇಳಿಬರುತ್ತಿದೆ. ಕಾಂಗ್ರೆಸ್ಸಿಗರ ಹೃದಯವನ್ನೂ ಈ ಮೋದಿ ಹೊಕ್ಕಿದ್ದಾನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಚಾಯಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಪ್ರಚಾರ ಮಾಡು
ತ್ತಿದ್ದ ವೇಳೆ ಸಿದ್ದರಾಮಯ್ಯ ಅವರು, ನರೇಂದ್ರ ಮೋದಿ... ನರೇಂದ್ರ ಮೋದಿ... ಎಂದು ಬಡಬಡಿಸಿದ್ದರು. ಮನಸ್ಸಿನಲ್ಲಿ ಇರುವ ವಿಷಯ ಒಂದಲ್ಲ ಒಂದು ದಿನ ಹೊರಬರುತ್ತದೆ ಎನ್ನುವುದು ನಿಜವಾಯಿತು’ ಎಂದು ವ್ಯಂಗ್ಯವಾಡಿದರು.

* ದೇಶದ ಜನರನ್ನು ಗುತ್ತಿಗೆ ಪಡೆದಿದ್ದೇವೆ ಎಂದು ಕಾಂಗ್ರೆಸ್‌ ಮುಖಂಡರು ಭಾವಿಸಿದ್ದಾರೆ. ಆ ಪಕ್ಷದ ಆಡಳಿತವಿರುವ ಕಡೆ ಗುಲಾಮಗಿರಿಯಿದೆ. ಪಕ್ಷದ ಮುಖಂಡರು ಹೈಕಮಾಂಡ್‌ಗೆ ಕಪ್ಪ ಕೊಡುತ್ತಾ ಗುಲಾಮರಾಗಿದ್ದಾರೆ.

–ನರೇಂದ್ರ ಮೋದಿ, ಪ್ರಧಾನಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.