ADVERTISEMENT

ರೆಡ್ಡಿ ಜೊತೆ ಶ್ರೀರಾಮುಲು ಸಂಚಾರ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಟಪಾಲ್ ಗಣೇಶ್
ಟಪಾಲ್ ಗಣೇಶ್   

ಬಳ್ಳಾರಿ: ‘ಜಿ.ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೇಳಿದ ಬಳಿಕವೂ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು, ರೆಡ್ಡಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿಕೆ ನೀಡಿ ಅವರೊಂದಿಗೇ ಸಂಚರಿಸುತ್ತಿರುವುದು ಸರಿಯಲ್ಲ’ ಎಂದು ನಗರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಟಪಾಲ್‌ ಗಣೇಶ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತರಾದ ಕಾಂಗ್ರೆಸ್‌ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರನ್ನು ಬಿಜೆಪಿಯತ್ತ ಸೆಳೆಯಲು ಶ್ರೀರಾಮುಲು, ರೆಡ್ಡಿ ಅವರೊಂದಿಗೆ ಗೋಪಾಲಕೃಷ್ಣ ಅವರ ಸಹೋದರ ನಿವೃತ್ತ ನ್ಯಾಯಮೂರ್ತಿ ಎನ್‌.ವೈ.ಹನುಮಂತಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದರೆ ಶಾ ಹೇಳಿಕೆಗೆ ಏನು ಬೆಲೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ರೆಡ್ಡಿ ಅವರೊಂದಿಗೆ ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿಯಾಗಿರುವ ಮಹ್ಮದ್‌ ಇಕ್ಬಾಲ್‌ ಅವರನ್ನು ಜೆಡಿಎಸ್‌ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದೆ. ಮುಸ್ಲಿಮರ ಮತ ಒಡೆದು ಬಿಜೆಪಿಯನ್ನು ಗೆಲ್ಲಿಸುವುದೇ ಆ ಪಕ್ಷದ ತಂತ್ರ’ ಎಂದು ಆರೋಪಿಸಿದರು.

ADVERTISEMENT

‘ಬೇಲ್ ಡೀಲ್ ಪ್ರಕರಣದ ಆರೋಪಿ ಜಿ.ಸೋಮಶೇಖರ ರೆಡ್ಡಿ ಅವರಿಗೆ ನಗರ ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದೆ. ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭ್ರಷ್ಟಾಚಾರ ಕುರಿತು ಮಾತನಾಡಬಾರದು. ಅಕ್ರಮ ಗಣಿಗಾರಿಕೆಯ ಆರೋಪ ಬಂದ ಕೂಡಲೇ ರೆಡ್ಡಿ ಸಹೋದರರಿಂದ ದೂರ ಉಳಿದಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಮತ್ತೆ ಬಂದು ಪ್ರಚಾರ ನಡೆಸಲಿ’ ಎಂದು ಒತ್ತಾಯಿಸಿದರು.

‘ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿಯಾಗಿರುವ ಮಹ್ಮದ್‌ ಇಕ್ಬಾಲ್‌ ಅವರನ್ನು ಜೆಡಿಎಸ್‌ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದೆ. ಮುಸ್ಲಿಮರ ಮತ ಒಡೆದು ಬಿಜೆಪಿ<br/>ಯನ್ನು ಗೆಲ್ಲಿಸುವುದೇ ಆ ಪಕ್ಷದ ತಂತ್ರ’.
– ಟಪಾಲ್‌ ಗಣೇಶ್‌, ಬಳ್ಳಾರಿ ನಗರ ಕ್ಷೇತ್ರದ ಜೆಡಿಯು ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.