ADVERTISEMENT

ವರ್ಷದ ನಂತರ ಮುಂದೇನು, ತಿಳಿಯದು: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 18:09 IST
Last Updated 16 ಜೂನ್ 2018, 18:09 IST

ಪಾವಗಡ: ‘ಸಮ್ಮಿಶ್ರ ಸರ್ಕಾರ ಖಂಡಿತವಾಗಿ ಒಂದು ವರ್ಷ ಪೂರೈಸುತ್ತದೆ. ಮುಂದೇನಾಗುವುದೋ ತಿಳಿಯದು. 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹೇಳುತ್ತಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ತಾಳೇ ಮರದಹಳ್ಳಿಯಲ್ಲಿ ಶನಿವಾರ ಅಭಯ ಆಂಜನೇಯಸ್ವಾಮಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇವರ ಅನುಗ್ರಹ, ಜನರ ಅಭಿಮಾನದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. 38 ಸ್ಥಾನ ಗೆದ್ದ ಪಕ್ಷಕ್ಕೆ, 78 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ರಾಷ್ಟ್ರೀಯ ಪಕ್ಷ ಬೆಂಬಲ ನೀಡುವುದರ ಹಿಂದೆ ದೇವರ ಅನುಗ್ರಹವಿದೆ. ಕುಮಾರಸ್ವಾಮಿ ಅವರಿಗೆ ಬಹುಮತ ಸಿಕ್ಕಿಲ್ಲ ಎಂಬ ನೋವಿದೆ. ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರ ಕೊಟ್ಟರೂ ದೇವರು ಪರೀಕ್ಷಿಸುತ್ತಿದ್ದಾನೆ. ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಹೋರಾಟ ಮಾಡಬೇಕಿದೆ’ ಎಂದರು.

ADVERTISEMENT

‘ಗರ್ಭಿಣಿಯರಿಗೆ ₹ 6 ಸಾವಿರ, ರೈತರ ಸಾಲಮನ್ನಾ, ಹಿರಿಯ ನಾಗರಿಕರಿಗೆ ಪಿಂಚಣಿ ಕೊಡುತ್ತೇನೆ ಎಂದರೂ ಬಹುಮತ ಸಿಗಲಿಲ್ಲ. 38 ಸ್ಥಾನದಲ್ಲಿ ಗೆದ್ದರೂ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೆಜ್ಜೆ ಇಟ್ಟಿದ್ದಾರೆ’ ಎಂದು ತಿಳಿಸಿದರು.

‘ಕುಮಾರಸ್ವಾಮಿ ಸಿ.ಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಹೊರತುಪಡಿಸಿ ದೇಶದ ಎಲ್ಲ ಪ್ರಮುಖ ನಾಯ
ಕರು ಬಂದಿದ್ದರು. ಇದು ರಾಷ್ಟ್ರ ರಾಜಕಾರಣದ ಹೊಸ ತಿರುವು. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ರಾಜಕೀಯ ಧೃವೀಕರಣಕ್ಕೆ ಕಾರಣವಾಗುವ ಸಾಧ್ಯತೆ ಇದೆ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.