ADVERTISEMENT

ಶಮನವಾಗದ ಬಿಜೆಪಿ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಬಿಜೆಪಿ
ಬಿಜೆಪಿ   

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಬಿಜೆಪಿ ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆಯಾಗಿ ನಾಲ್ಕು ದಿನ ಕಳೆದರೂ ‘ಬಂಡಾಯ’ಗಾರರ ಸಿಟ್ಟು ಶಮನವಾಗಿಲ್ಲ.

ಅದರ ಜತೆಗೆ, ಇನ್ನೂ ಅಭ್ಯರ್ಥಿ ಯಾರೆಂದು ಘೋಷಣೆಯಾಗದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ತಮ್ಮ ಎದುರಾಳಿಗಳಿಗೆ ಟಿಕೆಟ್ ತಪ್ಪಿಸುವ ಪ್ರಯತ್ನವನ್ನೂ ಮುಂದುವರಿಸಿದ್ದಾರೆ.

ಶಿಗ್ಗಾವಿಯಲ್ಲಿ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟಿರುವುದರ ವಿರುದ್ಧ ಆಕಾಂಕ್ಷಿ ಸೋಮಣ್ಣ ಬೇವಿನಮರದ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಂಘ ಪರಿವಾರ ಮೂಲದವರಿಗೆ ಟಿಕೆಟ್ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.

ADVERTISEMENT

ಧಾರವಾಡದಲ್ಲಿ ಅಮೃತ್ ದೇಸಾಯಿ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಮಾಜಿ ಶಾಸಕಿ ಸೀಮಾ ಮಸೂತಿ ತಿರುಗಿ ಬಿದ್ದಿದ್ದಾರೆ. ಹಿರಿತನ ಕಡೆಗಣಿಸಲಾಗಿದೆ, ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಲಾಗಿದೆ ಎಂದು ಅವರು ಸಿಟ್ಟು ತೋಡಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಗೆದ್ದು ಬಿಜೆಪಿ ಸೇರಿರುವ ಹಾಲಿ ಶಾಸಕ ವಿಶ್ವನಾಥ ಪಾಟೀಲ ಅವರಿಗೆ ಬೈಲಹೊಂಗಲ ಕ್ಷೇತ್ರದಲ್ಲಿ ಪಕ್ಷ ಟಿಕೆಟ್ ನೀಡಿದೆ. ಪಾಟೀಲ ವಿರುದ್ಧ ಸೋತಿದ್ದ ಮಾಜಿ ಶಾಸಕ ಜಗದೀಶ ಮೆಟಗುಡ್, ಟಿಕೆಟ್‌ ಬೇಕು ಎಂಬ ತಮ್ಮ ಹಟ ಮುಂದುವರಿಸಿದ್ದಾರೆ. ತಮ್ಮದೇ ಆದ ಲಾಬಿಯನ್ನೂ ನಡೆಸಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆಗೆ ಮಣಿಯದೇ ಇದ್ದರೆ ಬೇರೆ ಪಕ್ಷದ ಕಡೆಗೆ ನಡೆಯಲು ಅಣಿಯಾಗಿದ್ದಾರೆ.

ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸದ್ಯ ಮೌನಕ್ಕೆ ಶರಣಾಗಿದ್ದಾರೆ. 2013ರಲ್ಲಿ ಪಕ್ಷದಿಂದ ಆಯ್ಕೆಯಾಗಿದ್ದ ಎಲ್ಲರಿಗೂ ಟಿಕೆಟ್ ಸಿಕ್ಕಿದ್ದರೂ ಬೋಪಯ್ಯ ಅವರಿಗೆ ಕೈತಪ್ಪಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಅವರು, ಎರಡನೇ ಪಟ್ಟಿಯಲ್ಲಿ ತಮ್ಮ ಹೆಸರು
ಇರುತ್ತದೆ ಎಂಬ ಭರವಸೆಯೊಂದಿಗೆ ಮರಳಿದ್ದರು. ಅವರಿಗೆ ಟಿಕೆಟ್ ಸಿಗುವುದು ಅನುಮಾನ, ಎರಡನೇ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಬೋಪಯ್ಯ ಬೇರೆ ಪಕ್ಷದ ಕಡೆಗೆ ಕಣ್ಣು ಹಾಯಿಸಬಹುದು ಎಂದೂ ಹೇಳಲಾಗುತ್ತಿದೆ.

ಟಿಕೆಟ್ ಸಿಗದೇ ಇರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ‘ಪಕ್ಷದ ಆಂತರಿಕ ವಿಷಯವನ್ನು ನಿಮಗೆ ಏಕೆ ಹೇಳಬೇಕು’ ಎಂದು ತುಸು ಕಟುವಾಗಿ ಉತ್ತರಿಸಿದ್ದರು.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಆಕಾಂಕ್ಷಿಯಾಗಿರುವ ಎ. ರಾಮದಾಸ್‌ ಅವರಿಗೆ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕುಟುಂಬದ ಜತೆಗಿನ ತಮ್ಮ ಬಾಂಧವ್ಯ ಬಳಸಿಕೊಂಡು ಟಿಕೆಟ್ ಗಿಟ್ಟಿಸುವ ಯತ್ನವನ್ನು ಅವರು ಮುಂದುವರಿಸಿದ್ದಾರೆ. ‘ರಾಮದಾಸ್‌ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭೂ ಹಗರಣದ ಆರೋಪವಿದೆ. ಅವರಿಗೆ ಟಿಕೆಟ್ ನೀಡಬಾರದು’ ಎಂದು ಬಿಜೆಪಿ ಪ್ರಮುಖ ಗೋ. ಮಧುಸೂದನ್ ಆಗ್ರಹಿಸಿದ್ದಾರೆ. ಅವರ ಹಿಂದೆ ಬೆಂಗಳೂರಿನ ಕೆಲವು ನಾಯಕರು ಇದ್ದಾರೆ ಎಂದೂ ಹೇಳಲಾಗುತ್ತಿದೆ.

ಶಿವಮೊಗ್ಗದ ಸಾಗರ ಕ್ಷೇತ್ರದಲ್ಲಿ, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಹರತಾಳು ಹಾಲಪ್ಪ ಮಧ್ಯೆ ಟಿಕೆಟ್‌ಗಾಗಿ ಹಣಾಹಣಿ ನಡೆಯುತ್ತಿದೆ. ಇಬ್ಬರೂ ತಮ್ಮದೇ ಆದ ಲಾಬಿಯನ್ನು ಮುಂದುವರಿಸಿದ್ದಾರೆ. ಹೊನ್ನಾಳಿಯಲ್ಲಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಟಿಕೆಟ್ ನೀಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.