ADVERTISEMENT

ಸಂಭ್ರಮೋಲ್ಲಾಸದ ಮಧ್ಯೆ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು
ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತುಮಕೂರಿನ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು   

ಬೆಂಗಳೂರು: ನೂರಾರು ಕಾರ್ಯಕರ್ತರ ಹರ್ಷೋದ್ಗಾರಗಳ ನಡುವೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ನೂತನ ಮುಖ್ಯಮಂತ್ರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.

ಹಸಿರು ಶಾಲು ಹಾಕಿಕೊಂಡು ಯಡಿಯೂರಪ್ಪ ಬೆಳಿಗ್ಗೆ 8.57ಕ್ಕೆ ಸರಿಯಾಗಿ ವೇದಿಕೆಯ ಮುಂಭಾಗಕ್ಕೆ ಬಂದರು. ಕಾರ್ಯಕರ್ತರತ್ತ ಕೈಬೀಸಿ ವಿಜಯದ ಸಂಕೇತ ತೋರಿದರು. ಕೇಂದ್ರ ಸಚಿವರು, ಶಾಸಕರು ಮತ್ತು  ಪಕ್ಷದ ಪ್ರಮುಖರಿಂದ ಅಭಿನಂದನೆ ಸ್ವೀಕರಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಕುಡಚಿ ಶಾಸಕ ‍ಪಿ.ರಾಜೀವ ಕಾಲು ಮುಟ್ಟಿ ನಮಸ್ಕರಿಸಿದರು. 9ಕ್ಕೆ ಗಂಟೆಗೆ ರಾಜ್ಯಪಾಲರು ವೇದಿಕೆಗೆ ಬಂದರು. 9.01ಕ್ಕೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಕಾರ್ಯಕರ್ತರು ‘ಮೋದಿ... ಮೋದಿ’ ಎಂದು ಘೋಷಣೆ ಕೂಗಿದರು. ಬಳಿಕ ‘ಬಿಎಸ್‌ವೈ, ಬಿಎಸ್‌ವೈ’ ಎಂಬ ಜೈಕಾರ ಮೊಳಗಿತು. ರಾಜ್ಯಪಾಲರು ಹೂಗುಚ್ಛ ನೀಡಿ ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಕೇವಲ ಆರು ನಿಮಿಷಗಳಲ್ಲಿ ಕಾರ್ಯಕ್ರಮ ಪೂರ್ಣಗೊಂಡಿತು.

ADVERTISEMENT

ಈ ಸಮಾರಂಭ ಬಿಜೆಪಿ ನಾಯಕರ ಸಂಭ್ರಮದ ತಾಣವಾಗಿ ಮಾರ್ಪಟ್ಟಿತ್ತು. ಹಿರಿಯ ನಾಯಕರು, ಪಕ್ಷ ಮರಳಿ ರಾಜ್ಯದಲ್ಲಿ ಅಧಿಕಾರ ಹಿಡಿದ ಸಂತಸದಲ್ಲಿದ್ದರೆ, ಶಾಸಕರು ಹೊಸ ಸರ್ಕಾರ ರಚನೆಯ ಪುಳಕದ ಸಂಭ್ರಮದಲ್ಲಿದ್ದರು. ವೇದಿಕೆಯ ಮುಂದೆ ಬಂದು ವಿಜಯದ ಸಂಕೇತ ಪ್ರದರ್ಶಿಸಿ ಸಂಭ್ರಮಿಸಿದರು.

ವಿರೋಧ ಪಕ್ಷದ ನಾಯಕರ ಗೈರು: ನೂತನ ಸರ್ಕಾರ ರಚನೆ ವೇಳೆ ನಿಕಟಪೂರ್ವ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಹಾಜರಿರುವುದು ವಾಡಿಕೆ. ಗುರುವಾರ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷಗಳ ನಾಯಕರಾದ ಡಾ.ಜಿ.ಪರಮೇಶ್ವರ, ಎಚ್.ಡಿ. ಕುಮಾರಸ್ವಾಮಿ ಯಾರೊಬ್ಬರೂ ಹಾಜರಿರಲಿಲ್ಲ.

ಸರ್ಕಾರ ರಚನೆಯ ಹಕ್ಕು ಮಂಡಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರು, ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ. ಅಲ್ಲದೇ, ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ, ಅವರು ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.