ADVERTISEMENT

ಸಿರಿವಂತಿಕೆ, ಸಿದ್ಧಾಂತದ ನಡುವೆ ಸೆಣಸಾಟ

ಈರಪ್ಪ ಹಳಕಟ್ಟಿ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಅವರು ನಾಮಪತ್ರ ಸಲ್ಲಿಸುವ ದಿನ ಬಾಗೇಪಲ್ಲಿಗೆ ಹರಿದು ಬಂದ ಸಿಪಿಎಂ ಕಾರ್ಯಕರ್ತರ ಸಮೂಹ
ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಅವರು ನಾಮಪತ್ರ ಸಲ್ಲಿಸುವ ದಿನ ಬಾಗೇಪಲ್ಲಿಗೆ ಹರಿದು ಬಂದ ಸಿಪಿಎಂ ಕಾರ್ಯಕರ್ತರ ಸಮೂಹ   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರ ಪ್ರದೇಶದಿಂದ ಚದುರಿದ ಎಡಪಂಥೀಯ ಚಿಂತನೆಗಳಿಗೆ ಇಂದಿಗೂ ಗಟ್ಟಿ ನೆಲೆ ಒದಗಿಸಿದೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ. ಇಲ್ಲಿ ಬಹು ಹಿಂದಿನಿಂದಲೂ ಸೈದ್ಧಾಂತಿಕ ಸಂಘರ್ಷದಿಂದಲೇ ಸಿಪಿಎಂ ಈವರೆಗೆ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದೆ.

ತೀರಾ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾದ ಬಾಗೇಪಲ್ಲಿ ತನ್ನೊಡಲ ತುಂಬಾ ‘ಪಲ್ಲಿ’ಗಳನ್ನೇ (ಹಳ್ಳಿ) ತುಂಬಿಕೊಂಡಿರುವ, ತೆಲುಗು ಸಂಸ್ಕೃತಿಯ ದೊಡ್ಡ ಛಾಯೆ ಇರುವ ಪ್ರದೇಶ. ಒಂದು ಕಾಲದಲ್ಲಿ ಮಿತಿಮೀರಿದ ಜಮೀನ್ದಾರರ ದಬ್ಬಾಳಿಕೆಗೆ ಸಿಡಿದೆದ್ದ ಕೆಳವರ್ಗದ ಜನ, ಆಂಧ್ರದ ರೈತಪರ ಮತ್ತು ನಕ್ಸಲ್ ಹೋರಾಟಗಾರ ಕೊಂಡಪಲ್ಲಿ ಸೀತಾರಾಮಯ್ಯ ಅವರು ಪರಿಚಯಿಸಿದ ಕಮ್ಯುನಿಸ್ಟ್ ಚಳವಳಿಯ ಬಲದಿಂದ ಶೋಷಣೆಯನ್ನು ಹಿಮ್ಮೆಟ್ಟಿಸಿದರು.

50ರ ದಶಕದ ಕೊನೆಯಲ್ಲಿ ಇಲ್ಲಿ ಕಾವು ಪಡೆದ ಕಮ್ಯುನಿಸ್ಟ್ ಚಳವಳಿ ಈವರೆಗೂ ಬೂದಿ ಮುಚ್ಚಿದ ಕೆಂಡದಂತಿದೆ. ಆದರೆ ಒಂದು ಕಾಲದ ‘ಹೋರಾಟದ ನೆಲ’ ಕಾಲ ಉರುಳಿದಂತೆ ‘ಮುಕ್ತ ಮಾರುಕಟ್ಟೆ’ಯಾಗಿ ಬದಲಾಗುತ್ತಾ ಬಂದಿದೆ. ಪರಿಣಾಮ, ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ವಲಸಿಗ ಸಿರಿವಂತರು ಮತ್ತು ಸ್ಥಳೀಯ ಕಮ್ಯುನಿಸ್ಟ್ ‘ಸಂಗಾತಿ’ಗಳ ನಡುವೆ ಸೆಣಸಾಟ ಮುಂದುವರಿಯುತ್ತಲೇ ಬಂದಿದೆ.

ADVERTISEMENT

ಪ್ರಸ್ತುತ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಕಮ್ಯುನಿಸ್ಟ್ ಮುಖಂಡರಾದ ಎ.ವಿ.ಅಪ್ಪಾಸ್ವಾಮಿ ರೆಡ್ಡಿ ಅವರ ತರುವಾಯ ಈ ಭಾಗದಲ್ಲಿ ಹೋರಾಟಗಳ ಮೂಲಕ ನಾಯಕರಾಗಿ ಬೆಳೆದವರು ಜಿ.ವಿ.ಶ್ರೀರಾಮರೆಡ್ಡಿ. ಅವರು ಇಲ್ಲಿ 1985ರಿಂದ ಈವರೆಗೆ ವಿಧಾನಸಭೆ ಚುನಾವಣೆಗಳಲ್ಲಿ ಸಿಪಿಎಂ ‘ಕಾಯಂ’ ಅಭ್ಯರ್ಥಿಯಾಗುತ್ತಲೇ ಬಂದಿದ್ದಾರೆ.

ಈವರೆಗೆ ಆರು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅವರು ನಾಲ್ಕು ಚುನಾವಣೆಗಳಲ್ಲಿ ಸೋತು, ಎರಡು ಬಾರಿ (1994, 2004) ದುಡಿಯುವ ವರ್ಗವನ್ನು ಪ್ರತಿನಿಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರೇ ಘೋಷಿಸಿಕೊಂಡಂತೆ ಅವರ ಪಾಲಿಗೆ ಇದು ಕೊನೆಯ ಚುನಾವಣೆ. ಹೀಗಾಗಿ ಕ್ಷೇತ್ರದಲ್ಲಿರುವ ‘ಕೆಂಪಂಗಿ’ ಪಡೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬದ್ಧತೆಯಿಂದ ತಮ್ಮ ಹುರಿಯಾಳನ್ನು ಗೆಲ್ಲಿಸಿ
ಕೊಳ್ಳಲು ಟೊಂಕಕಟ್ಟಿ ಶ್ರಮಿಸುತ್ತಿದೆ.

ಮೂಲಸೌಕರ್ಯಗಳ ಕೊರತೆ, ನಿರುದ್ಯೋಗ, ಉದ್ಯೋಗ ಅಭದ್ರತೆ, ಪಾತಾಳಕ್ಕಿಳಿದ ಅಂತರ್ಜಲ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಇವು ಚುನಾವಣೆಯಲ್ಲಿ ಆದ್ಯತೆಯ ವಿಷಯಗಳಾಗುತ್ತಲೇ ಬರುತ್ತಿವೆ. ಈ ಕ್ಷೇತ್ರವನ್ನು ಬರ ಇನ್ನಿಲ್ಲದಂತೆ ಕಾಡಿದರೂ ‘ಸಮಾಜ ಸೇವೆ’ಗೆಂದು ಹಣದ ಥೈಲಿ ಹಿಡಿದು ಇಲ್ಲಿಗೆ ಬರುವವರಿಗೇನೂ ಬರವಿಲ್ಲ.

ಸದ್ಯ ಸಿರಿವಂತ ಅಭ್ಯರ್ಥಿಗಳು ದಂಡಿಯಾಗಿ ದುಡ್ಡು ಸುರಿದು ಗೆಲುವಿನ ತಂತ್ರಗಳನ್ನು ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಇನ್ನೊಂದೆಡೆ, ದುಡಿಯುವ ವರ್ಗವನ್ನು ಪ್ರತಿನಿಧಿಸುವ ಶ್ರೀರಾಮರೆಡ್ಡಿ ಅವರಿಗೆ ಪಕ್ಷದ ಕಾರ್ಯಕರ್ತರೇ ಹಳ್ಳಿ ಹಳ್ಳಿಗಳಲ್ಲಿ ಹಣ ಸಂಗ್ರಹಿಸಿ ನೀಡುತ್ತಿದ್ದಾರೆ.

ವಿದ್ಯಾರ್ಥಿಗಳು ಸಹ ಹುಂಡಿಯಲ್ಲಿ ಕೂಡಿಟ್ಟ ಹಣವನ್ನು ತಮ್ಮ ನಾಯಕನಿಗೆ ನೀಡಿ ಸೈದ್ಧಾಂತಿಕ ಬದ್ಧತೆ ಮೆರೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಣ ಮತ್ತು ಗುಣದಲ್ಲಿ ಯಾವುದು ಮೇಲುಗೈ ಸಾಧಿಸುತ್ತದೆ ಎನ್ನುವುದೇ ಸದ್ಯದ ಕುತೂಹಲ.

ಐವರ ನಡುವೆ ಪೈಪೋಟಿ

ಶ್ರೀರಾಮರೆಡ್ಡಿ ಅವರಿಗೆ ಪ್ರತಿಸ್ಪರ್ಧಿಗಳಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಹುರಿಯಾಳಾಗಿ ‘ಅದೃಷ್ಟ’ ಪರೀಕ್ಷೆಗಿಳಿದಿದ್ದಾರೆ. ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಜೆಡಿಎಸ್ ಮತ್ತು ನಟ ಪಿ.ಸಾಯಿಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.

ಇನ್ನೊಂದೆಡೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ ಗುಂಜೂರು ಶ್ರೀನಿವಾಸ್ ರೆಡ್ಡಿ ಅವರು ಪ್ರಬಲವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಾಗಿ ಸದ್ಯ ಕ್ಷೇತ್ರದಲ್ಲಿ ಐದು ಅಭ್ಯರ್ಥಿಗಳ ನಡುವೆ ಗೆಲುವಿಗೆ ಪೈಪೋಟಿ ನಡೆದಿದೆ. 

ಮೇಲ್ನೋಟಕ್ಕೆ ಭಿನ್ನ ಸಿದ್ಧಾಂತಗಳ ನಡುವೆ ಇಲ್ಲಿ ಹೋರಾಟ ನಡೆಯುತ್ತಿರುವಂತೆ ಭಾಸವಾಗುತ್ತದೆ. ಆದರೆ ಒಳಹೊಕ್ಕು ನೋಡಿದರೆ ಜಾತಿ ಸಂಘರ್ಷ ಢಾಳವಾಗಿ ಗೋಚರಿಸುತ್ತದೆ. ಕ್ಷೇತ್ರ ಮೊದಲಿನಿಂದಲೂ ಒಕ್ಕಲಿಗ–ಬಲಿಜ ಸಮುದಾಯಗಳ ರಾಜಕೀಯ ‘ಚದುರಂಗ’ಕ್ಕೆ ಮಣೆಯಾಗುತ್ತಲೇ ಬಂದಿದೆ.

ಪ್ರಮುಖ ಐದು ಅಭ್ಯರ್ಥಿಗಳ ಪೈಕಿ ಸುಬ್ಬಾರೆಡ್ಡಿ, ಶ್ರೀರಾಮರೆಡ್ಡಿ, ಶ್ರೀನಿವಾಸರೆಡ್ಡಿ ಒಕ್ಕಲಿಗ ಮತ್ತು ಮನೋಹರ್, ಸಾಯಿಕುಮಾರ್ ಬಲಿಜ ಸಮುದಾಯಗಳಿಗೆ ಸೇರಿದ್ದಾರೆ. ಹೀಗಾಗಿ ಜಾತಿಯನ್ನೂ ಮೀರಿ ಜನಮನ ಗೆಲ್ಲುವವರಿಗೆ ಇಲ್ಲಿ ಅದೃಷ್ಟ ಖುಲಾಯಿಸಲಿದೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.