ADVERTISEMENT

ಹಲವು ಸಚಿವರಿಗೆ ಮುಖಭಂಗ– ಏಕೈಕ ದೊಡ್ಡಪಕ್ಷವಾಗಿ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಮೇ 2018, 7:36 IST
Last Updated 15 ಮೇ 2018, 7:36 IST
ಹಲವು ಸಚಿವರಿಗೆ ಮುಖಭಂಗ– ಏಕೈಕ ದೊಡ್ಡಪಕ್ಷವಾಗಿ ಬಿಜೆಪಿ
ಹಲವು ಸಚಿವರಿಗೆ ಮುಖಭಂಗ– ಏಕೈಕ ದೊಡ್ಡಪಕ್ಷವಾಗಿ ಬಿಜೆಪಿ   

ಬೆಂಗಳೂರು: ವಿಧಾನಸಭಾ ಚುನಾವಣೆಯ ಮತಎಣಿಕೆ ಅಂತಿಮ ಹಂತದತ್ತ ತಲುಪುತ್ತಿರುವಂತೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಬಹುತೇಕ ಖಚಿತವಾಗಿದ್ದು, ಬಾದಾಮಿಯಲ್ಲಿ  ಜಯಗಳಿಸಿದ್ದಾರೆ. ಆದರೆ ಸಂಪುಟದ ಬಹುತೇಕ ಸಚಿವರು ಸೋಲನುಭವಿಸಿದ್ದಾರೆ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ವಿರೋಧಪಕ್ಷದ ನಾಯಕರಾದ ಈಶ್ವರಪ್ಪ ಶಿವಮೊಗ್ಗದಲ್ಲಿ ಗೆಲುವು ಸಾಧಿಸಿದ್ದು, ಜಗದೀಶ್‌ ಶೆಟ್ಟರ್‌ ಮುನ್ನಡೆಯಲ್ಲಿದ್ದಾರೆ.

ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ 222 ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 70 ಮತ್ತು ಜೆಡಿಎಸ್‌ 38 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿರುವ ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಮೂರನೇ ಸುತ್ತಿನಿಂದ ಕಾಯ್ದುಕೊಂಡ ಮುನ್ನಡೆಯನ್ನು 14ನೇ ಸುತ್ತಿನವರೆಗೂ ಉಳಿಸಿಕೊಂಡಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಿಂದ ಜಯಗಳಿಸಿದ್ದು, ಬಾದಾಮಿಯಲ್ಲಿ ಹಿನ್ನಡೆಯಲ್ಲಿದ್ದಾರೆ. ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಸಿದ್ದರಾಮಯ್ಯ, ಶ್ರೀರಾಮುಲು ಮತ್ತು ಕುಮಾರಸ್ವಾಮಿ ತಲಾ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ (ಹೊಳಲ್ಕೆರೆ), ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ (ತೇರದಾಳ), ಬಿ. ರಮಾನಾಥ ರೈ (ಬಂಟ್ವಾಳ), ಬಸವರಾಜಯ ರಾಯರಡ್ಡಿ (ಯಲಬುರ್ಗಾ), ವಿನಯ ಕುಲಕರ್ಣಿ (ಧಾರವಾಡ), ಸಂತೋಷ್ ಲಾಡ್‌ (ಕಲಘಟಗಿ), ಡಾ.ಶರಣಪ್ರಕಾಶ ಪಾಟೀಲ (ಸೇಡಂ), ರುದ್ರಪ್ಪ ಮಾನಪ್ಪ ಲಮಾಣಿ (ಹಾವೇರಿ), ಪ್ರಮೋದ್‌ ಮಧ್ವರಾಜ್‌ (ಉಡುಪಿ), ಎಂ.ಸಿ.ಮೋಹನ ಕುಮಾರಿ (ಗುಂಡ್ಲುಪೇಟೆ), ಎಸ್‌.ಎಸ್‌.ಮಲ್ಲಿಕಾರ್ಜನ (ದಾವಣಗೆರೆ ಉತ್ತರ) ಸೋತ ಸಚಿವರು.

ಎಚ್‌.ಸಿ.ಮಹದೇವಪ್ಪ (ಟಿ.ನರಸೀಪುರ), ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಹಿನ್ನಡೆಯಲ್ಲಿದ್ದಾರೆ.

ಆದರೆ ಸಚಿವರಾದ ಡಿ.ಕೆ.ಶಿವಕುಮಾರ್‌ (ಕನಕಪುರ) ಆರ್‌.ವಿ.ದೇಶಪಾಂಡೆ (ಹಳಿಯಾಳ), ತನ್ವೀರ್‌ ಸೇಠ್‌ (ನರಸಿಂಹರಾಜ), ರಮೇಶ್‌ ಕುಮಾರ್‌ (ಶ್ರೀನಿವಾಸಪುರ), ಕೆ.ಜೆ.ಜಾರ್ಜ್‌ (ಸರ್ವಜ್ಞನಗರ), ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್‌) ಜಯಗಳಿಸಿದ್ದಾರೆ.

ದಕ್ಷಿಣ ಕನ್ನಡ: 6 ಹೊಸಮುಖ

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಜಯಗಳಿಸಿದೆ. ಬಂಟ್ವಾಳದಲ್ಲಿ ಉಳೇಪಾಡಿಗುತ್ತು ರಾಜೇಶ್‌ ನಾಯಕ್ (ರಮಾನಾಥ ರೈ ವಿರುದ್ಧ), ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್‌, ಮಂಗಳೂರು ಉತ್ತರದಲ್ಲಿ ಡಾ.ಭರತ್‌ ಶೆಟ್ಟಿ, ಮೂಡುಬಿದಿರೆಯಲ್ಲಿ ಉಮಾನಾಥ ಕೋಟ್ಯಾನ್‌, ಬೆಳ್ತಂಗಡಿಯಲ್ಲಿ ಹರೀಶ್‌ ಪೂಂಜಾ, ಪುತ್ತೂರು ಕ್ಷೇತ್ರದಲ್ಲಿ ಸಂಜೀವ ಮಠಂದೂರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಸುಳ್ಯದಲ್ಲಿ (ಮೀಸಲು ಕ್ಷೇತ್ರ) ಬಿಜೆಪಿಯ ಅಂಗಾರ ಸತತ ಆರನೇ ಬಾರಿ ಜಯ ದಾಖಲಿಸಿದ್ದಾರೆ.

ಯು.ಟಿ.ಖಾದರ್‌ ಮಂಗಳೂರು ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿ ಜಯಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.