ADVERTISEMENT

ಸಚಿವ ಹೆಗಡೆಗೆ ಕಪ್ಪು ಬಾವುಟ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:36 IST
Last Updated 8 ಫೆಬ್ರುವರಿ 2018, 9:36 IST
ಕಲಬುರ್ಗಿಗೆ ಬುಧವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಕಪ್ಪುಪಟ್ಟಿ ಪ್ರದರ್ಶಿಸಿದರು
ಕಲಬುರ್ಗಿಗೆ ಬುಧವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ವಿವಿಧ ಸಂಘಟನೆಗಳ ಮುಖಂಡರು ಕಪ್ಪುಪಟ್ಟಿ ಪ್ರದರ್ಶಿಸಿದರು   

ಕಲಬುರ್ಗಿ: ಸಂವಿಧಾನ ಬದಲಾಯಿಸಬೇಕು ಎಂಬ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ರಾಜೀನಾಮೆಗೆ ಆಗ್ರಹಿಸಿ ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿ, ಕಪ್ಪುಬಾವುಟ ಪ್ರದರ್ಶಿಸಿದ ದಲಿತ ಸಮನ್ವಯ ಸಮಿತಿ ಸಂಚಾಲಕ ವಿಠಲ ದೊಡ್ಡಮನಿ, ಲೇಖಕಿ ಕೆ.ನೀಲಾ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು.

ಸಚಿವ ಅನಂತಕುಮಾರ ಹೆಗಡೆ ತಂಗಿದ್ದ ಇಲ್ಲಿನ ಐವಾನ್‌ –ಇ–ಶಾಹಿ ಅತಿಥಿಗೃಹದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸಚಿವರ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅತಿಥಿಗೃಹದ ಮುಂಭಾಗದಲ್ಲಿ ಹಾಕಿದ್ದ ಬ್ಯಾರಿಕೇಡ್‌ ತಳ್ಳಿ ಒಳನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು– ಪ್ರತಿಭಟನಾಕಾರರ ಮಧ್ಯೆ  ತೀವ್ರ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸ ನಡೆಸಿದರು. ಕೊನೆಗೆ ದಲಿತ ಸಮನ್ವಯ ಸಮಿತಿಯ ಮುಖಂಡರಾದ ಹನುಮಂತ ಯಳಸಂಗಿ, ಶಾಮ ನಾಟಿಕರ್, ಅರ್ಜುನ ಭದ್ರೆ ಅವರನ್ನೂ ಬಂಧಿಸಿದರು.

ADVERTISEMENT

ಕೇಂದ್ರ ಸಚಿವರು ಇಲ್ಲಿನ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಎಚ್‌ಕೆಸಿಸಿ)ದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು.

ಅಭಿವೃದ್ಧಿ ದೃಷ್ಟಿಕೋನ ಇಲ್ಲದ ರಾಜಕಾರಣಿ ನಾಲಾಯಕ್: ಹೆಗಡೆ

ಕಲಬುರ್ಗಿ: ‘ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ಇಲ್ಲದ ಹಾಗೂ ನಾಡಿನ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯದ ರಾಜಕಾರಣಿಗಳು ನಾಲಾಯಕ್’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಟೀಕಿಸಿದರು.

‘ರಾಜಕಾರಣ ಮಜಾ, ಶೋಕಿ ಮಾಡಲು ಅಲ್ಲ. ಜನ ನಿರೀಕ್ಷೆ ಇಟ್ಟುಕೊಂಡು ಆಯ್ಕೆ ಮಾಡುತ್ತಾರೆ. ಅಧಿಕಾರದ ಕುರ್ಚಿಯ ಮೇಲೆ ಕುಳಿತವರ ಜವಾಬ್ದಾರಿ ದೊಡ್ಡದಿರುತ್ತದೆ. ಈ ಕಲ್ಪನೆ ಅರ್ಥಮಾಡಿಕೊಳ್ಳದ ರಾಜಕಾರಣಿಗಳಿಗೆ ನನ್ನ ಧಿಕ್ಕಾರವಿದೆ’ ಎಂದು ಅವರು ಬುಧವಾರ ಇಲ್ಲಿ ನಡೆದ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪ ಹಾಗೂ ಉದ್ಯೋಗ ಮೇಳದಲ್ಲಿ ಹೇಳಿದರು.

‘ಹೈದರಾಬಾದ್ ಕರ್ನಾಟಕ ಭಾಗವನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. 50 ವರ್ಷಗಳಿಂದ ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಇಚ್ಛಾಶಕ್ತಿಯನ್ನು ಈ ಭಾಗ ಪ್ರತಿನಿಧಿಸುವ ರಾಜಕಾರಣಿಗಳು ಪ್ರದರ್ಶಿಸಿಲ್ಲ. ಸೇತುವೆ, ಕಟ್ಟಡಗಳನ್ನು ನಿರ್ಮಿಸುವುದೇ ಅಭಿವೃದ್ಧಿ ಎಂದು ಅವರು ಭಾವಿಸಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಈ ಭಾಗ ಇಷ್ಟೊಂದು ಹಿಂದುಳಿದಿದೆ ಎಂಬುದು ಗೊತ್ತಿರಲಿಲ್ಲ. ಮೊದಲೇ ಗೊತ್ತಿದ್ದರೆ ಇಲ್ಲಿ ಆಯೋಜಿಸಿರುವ ಉದ್ಯೋಗ ಮೇಳಕ್ಕೆ 100ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳನ್ನು ಕರೆತಂದು ಯುವಕರಿಗೆ ಉದ್ಯೋಗ ಕೊಡಿಸುತ್ತಿದ್ದೆ. ಇಲ್ಲಿನ ಯುವಕರಿಗೆ ಕೌಶಲ ವೃದ್ಧಿ ತರಬೇತಿ ಕೊಡಿಸಲಾಗುವುದು. ಕೌಶಲ ವಿಶ್ವವಿದ್ಯಾಲಯ ಸ್ಥಾಪನೆಗೂ ನೆರವು ನೀಡುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಸಚಿವ ಹೆಗಡೆ ನಾಲಿಗೆ ವ್ಯಕ್ತಿತ್ವ ತೋರಿಸುತ್ತದೆ: ಖರ್ಗೆ

ಯಾದಗಿರಿ: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಅವರ ನಾಲಿಗೆ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತೋರಿಸುತ್ತದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿಯಲು 50 ವರ್ಷ ಆಳಿದ ಇಲ್ಲಿನ ರಾಜಕಾರಣಿಗಳೇ ಕಾರಣರಾಗಿದ್ದಾರೆ ಎಂಬ ಹೆಗಡೆ ಅವರ ಹೇಳಿಕೆಗೆ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ಬೃಹತ್‌ ಆಲಮಟ್ಟಿ, ನಾರಾಯಣಪುರ ಜಲಾಶಯ ನಿರ್ಮಿಸಲಾಗಿದೆ. 100 ಜನರಿಗೆ ಸಿಗುತ್ತಿದ್ದ ಮೀಸಲಾತಿ ಈಗ 750 ಜನರಿಗೆ ಸಿಗುವಂತಾಗಿದೆ. ಇದನ್ನೆಲ್ಲ ಅನಂತಕುಮಾರ ಹೆಗಡೆ ಮಾಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಈ ಹಿಂದೆ ಮನುಸ್ಮೃತಿಯ ಜತೆಗೆ ಅನೇಕ ಸ್ಮೃತಿಗಳಿದ್ದವು. ಈಗವು ಬದಲಾಗಿವೆ. ಈಗ ಅಂಬೇಡ್ಕರ್ ಸ್ಮೃತಿ ಅಸ್ತಿತ್ವದಲ್ಲಿದೆ. ಅದನ್ನು ಬದಲಾಯಿಸಲು ನಾವು ಬಂದಿದ್ದೇವೆ ಎಂಬುದಾಗಿ ಅನಂತಕುಮಾರ ಹೆಗಡೆ ಹೇಳಿಕೊಂಡು ಓಡಾಡುತ್ತಿದ್ದಾರೆ. ಸಂವಿಧಾನ ನೀಡಿದ ಹಕ್ಕಿನಿಂದಲೇ ಆರಿಸಿಬಂದ ಸಚಿವ ಹೆಗಡೆ, ಸಂವಿಧಾನ ಬಾಹಿರ ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಂತಕುಮಾರ್‌ಗೆ ರೂಟ್ ನಂಬರ್ ನಾಲ್ಕರ ಬಸ್ ಹತ್ತಿಸಬೇಕು

ಬೆಂಗಳೂರು: ಸಾಹಿತಿಗಳನ್ನು ಅವಹೇಳನ ಮಾಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ರೂಟ್ ನಂಬರ್ ನಾಲ್ಕರ ಬಸ್ ಹತ್ತಿಸಬೇಕು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಪ್ರತಿಕ್ರಿಯಸಿದರು.

‘ಪದೇ ಪದೇ ಈ ರೀತಿಯ ಹೇಳಿಕೆ ನೀಡುವ ಅನಂತಕುಮಾರ ಹೆಗಡೆಗೆ ನಾನು ಬಸ್ ಮಂತ್ರಿಯಾಗಿ ನನ್ನದೇ ಭಾಷೆಯಲ್ಲಿ ಹೇಳುತ್ತಿದ್ದೇನೆ’ ಎಂದರು.

‘ರೂಟ್‌ ನಂಬರ್ ನಾಲ್ಕರ ಬಸ್‌ ಬಸ್‌ ಎಂದರೇನು, ಅದು ಎಲ್ಲಿಗೆ ಹೋಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ‘ಹುಚ್ಚಾಸ್ಪತ್ರೆಗೆ ಹೋಗುತ್ತದೆ’ ಎಂದು ಉತ್ತರಿಸಿ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.