ADVERTISEMENT

ತಹಶೀಲ್ದಾರ್‌ ಸಾಮರ್ಥ್ಯ– ಕಂದಾಯ ಸಚಿವರಿಗೇ ವಿಶ್ವಾಸವಿಲ್ಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:46 IST
Last Updated 8 ಫೆಬ್ರುವರಿ 2018, 8:46 IST

ಬೆಂಗಳೂರು: ‘ತಹಶೀಲ್ದಾರ್‌ಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅರ್ಹತೆ ಹೊಂದಿಲ್ಲ’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಜೆಡಿಎಸ್‌ನ ರಮೇಶ್‌ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ತಹಶೀಲ್ದಾರ್‌ಗಳ ಸಾಮರ್ಥ್ಯ ಏನೆಂದು ನಮಗೂ ಗೊತ್ತಿದೆ. ಆದರೆ ಅವರನ್ನು ವರ್ಗಾವಣೆ ಮಾಡಿದರೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಗೆ (ಕೆಎಟಿ) ಹೋಗಿ ತಡೆಯಾಜ್ಞೆ ತರುತ್ತಾರೆ. ಹಾಗಾಗಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ’ ಎಂದರು.

ಕಂದಾಯ ಇಲಾಖೆ ಮಾತೃ ಇಲಾಖೆ ಇದ್ದಂತೆ. ಈ ಇಲಾಖೆ ಶುದ್ಧ ಆಡಳಿತ ನೀಡಿದರೆ, ಉಳಿದ ಇಲಾಖೆಗಳು ತನ್ನಿಂದತಾನೇ ಪರಿಶುದ್ಧವಾಗುತ್ತವೆ ಎಂದರು.

ADVERTISEMENT

‘ಮಂಜೂರಾಗಿರುವ ಗ್ರೇಡ್‌–1 ತಹಶೀಲ್ದಾರ್‌ಗಳ 258 ಹುದ್ದೆಗಳಲ್ಲಿ 123 ಖಾಲಿ ಇವೆ. ಗ್ರೇಡ್‌ –2 ತಹಶೀಲ್ದಾರ್‌ಗಳ 634 ಹುದ್ದೆಗಳಲ್ಲಿ 227 ಖಾಲಿ ಇವೆ. ಖಾಲಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.