ADVERTISEMENT

ಬೇಡಿಕೆಗೆ ಸ್ಪಂದಿಸಲು ವಿರೋಧ ಪಕ್ಷಗಳ ಆಗ್ರಹ

ಉಭಯ ಸದನಗಳಲ್ಲಿ ಬಿಸಿಯೂಟ ತಯಾರಕರ ಪ್ರತಿಭಟನೆ ವಿಚಾರ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
ಬಿಸಿಯೂಟ ತಯಾರಕರ ಪ್ರತಿಭಟನೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎ. ಶರವಣ, ಕಾಂತರಾಜು ಹಾಗೂ ರಮೇಶ ಬಾಬು ಧರಣಿ ನಡೆಸಿದರು
ಬಿಸಿಯೂಟ ತಯಾರಕರ ಪ್ರತಿಭಟನೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎ. ಶರವಣ, ಕಾಂತರಾಜು ಹಾಗೂ ರಮೇಶ ಬಾಬು ಧರಣಿ ನಡೆಸಿದರು   

ಬೆಂಗಳೂರು: ಬಿಸಿಯೂಟ ತಯಾರಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೂರಾರು ಮಹಿಳೆಯರು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ತಕ್ಷಣ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರತಿಭಟನಾಕಾರರು ಊಟ, ನಿದ್ದೆ, ಕುಡಿಯುವ ನೀರು, ಶೌಚಾಲಯ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ಭರವಸೆ ನೀಡಿ ಧರಣಿ ಕೈಬಿಡುವಂತೆ ಮಾಡಬೇಕು. ಅಗತ್ಯ ಬಿದ್ದರೆ ಕೇಂದ್ರ ಸರ್ಕಾರದ ಬಳಿಗೂ ಸೂಕ್ತ ಪ್ರಸ್ತಾವದೊಂದಿಗೆ ನಿಯೋಗ ಕೊಂಡೊಯ್ಯಬೇಕು’ ಎಂದು ಶೆಟ್ಟರ್‌ ಸಲಹೆ ನೀಡಿದರು.

ADVERTISEMENT

ಜೆಡಿಎಸ್‍ನ ಎನ್‌.ಎಚ್‌. ಕೋನರಡ್ಡಿ, ‘ಬಿಸಿಯೂಟ ತಯಾರಕರಿಗೆ ಕೇಂದ್ರ ಸರ್ಕಾರ ₹ 600 ಮತ್ತು ರಾಜ್ಯ ಸರ್ಕಾರ ₹ 1,600 ಸೇರಿ ಮಾಸಿಕ ಕೇವಲ ₹ 2,200 ಗೌರವಧನ ನೀಡಲಾಗುತ್ತಿದೆ.  ಕೇಂದ್ರ ಸರ್ಕಾರ ಈ ಯೋಜನೆಗೆ ಶೇ 90ರಷ್ಟು ಅನುದಾನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಎಲ್ಲಿದೆ? ‌ ಕನಿಷ್ಠ ವೇತನವೂ ಸಿಗುತ್ತಿಲ್ಲ. ಗೌರವ ಧನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಆಗ್ರಹಿಸಿದರು.

ಬಿಸಿಯೂಟ ತಯಾರಕರ ಪ್ರತಿಭಟನೆ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಬೇಕೆಂದುಸಭಾಧ್ಯಕ್ಷರಲ್ಲಿ ಕೋನರೆಡ್ಡಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.