ADVERTISEMENT

ನಾವು ಬಿಜೆಪಿಯಂತಲ್ಲ ಭರವಸೆಗಳನ್ನು ನೆರವೇರಿಸುವೆವು: ಮಾಜಿ ಸಚಿವ ರೇಹಮನ್ ಖಾನ್

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 11:54 IST
Last Updated 5 ಏಪ್ರಿಲ್ 2019, 11:54 IST

ತುಮಕೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ‘ಹಮ್‌ ನಿಭಾಯೇಂಗೆ’ ಎಂಬ ಘೋಷಣೆಯೊಂದಿಗೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನಾವು ಬಿಜೆಪಿಯಂತಲ್ಲ ನೆರವೇರಿಸುತ್ತೇವೆ’ ಎಂದು ಕೇಂದ್ರದ ಮಾಜಿ ಸಚಿವರಾದ ರೇಹಮನ್ ಖಾನ್ ಹೇಳಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 120ಕ್ಕೂ ಹೆಚ್ಚು ಸಭೆಗಳನ್ನು ಮಾಡಿ, ಎಲ್ಲ ವರ್ಗದವರನ್ನು ದೃಷ್ಟಿಯಲ್ಲಿಟ್ಟು ಪ್ರಣಾಳಿಕೆ ರೂಪಿಸಲಾಗಿದೆ. ರೈತರ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇವ್ಯಾವ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ನಿವಾರಿಸಿಲ್ಲ ಎಂದು ಆರೋಪಿಸಿದರು.

ಮಾರ್ಚ್‌ 2020ರೊಳಗಾಗಿ ಕೇಂದ್ರ ಸರ್ಕಾರದ 4 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಷ್ಟೇ ಅಲ್ಲದೆ ಖಾಲಿ ಇರುವ 20ಲಕ್ಷ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಸಾಲಮನ್ನಾದಿಂದ ಸಾಲ ಮುಕ್ತಿಯ ಪಥದತ್ತ ಕೊಂಡೊಯ್ಯಲಾಗುವುದು. ಪ್ರೋತ್ಸಾಹದಾಯಕ ಬೆಲೆ, ಕಡಿಮೆ ಉತ್ಪದನಾ ವೆಚ್ಚ ಮತ್ತು ಸಾಂಸ್ಥಿಕ ಸಾಲ ಕೈಗೆಟಕುವಂತೆ ಮಾಡಲಾಗುವುದು. ಪ್ರತಿ ವರ್ಷ ‘ಕೃಷಿ ಬಜೆಟ್‌’ ಮಂಡನೆ ಮಾಡಲಾಗುವುದು ಎಂದರು.

ಏಕರೂಪ ಸರಳ ತೆರಿಗೆ ದರ, ರಫ್ತಿನ ಮೇಲೆ ಶೂನ್ಯ ದರ ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಮೇಲೆ ವಿನಾಯಿತಿ ನೀಡಲಾಗುವುದು. ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.

ಭಾರತದಲ್ಲಿ ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳ್ಳುತ್ತಿದ್ದು, ಅದರ ಉಳಿವಿಗಾಗಿ ಕಾಂಗ್ರೆಸ್‌ಗೆ ಬೆಂಬಲಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ರಫೀಕ್‌ ಅಹಮದ್‌, ಷಫಿ ಅಹಮದ್‌, ಆಟೊ ರಾಜಣ್ಣ, ಶಿವಾಜಿ, ನಾಗಮಣಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.