ADVERTISEMENT

ವಾಕ್ಸಮರದಲ್ಲಿ ಮರೆಯಾದ ಕ್ಷೇತ್ರ ಸಮಸ್ಯೆ

ಜ್ವಲಂತ ಸಮಸ್ಯೆಗಳ ನಡುವೆ ಚುನಾವಣೆ ಪ್ರಚಾರದ ಭರಾಟೆಯಲ್ಲಿ ರಾಜಕೀಯ ಪಕ್ಷಗಳು

ಸಂಧ್ಯಾ ಹೆಗಡೆ
Published 9 ಏಪ್ರಿಲ್ 2019, 11:21 IST
Last Updated 9 ಏಪ್ರಿಲ್ 2019, 11:21 IST
ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಅರಣ್ಯವಾಸಿ ಕುಟುಂಬ
ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಅರಣ್ಯವಾಸಿ ಕುಟುಂಬ   

ಶಿರಸಿ: ಪರಸ್ಪರ ದೂಷಣೆ, ವಾಕ್ಸಮರದ ನಡುವೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ, ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಸಮಸ್ಯೆ ಗೌಣವಾಗಿದೆ. ಉತ್ತರ ಕಾಣದ ಹಲವಾರು ಜ್ವಲಂತ ಸಮಸ್ಯೆಗಳನ್ನು ಮರೆತು, ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿದ್ದಾರೆ.

ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಮೈತ್ರಿ ಪಕ್ಷಗಳ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರ ಪ್ರಚಾರ ಭಾಷಣ ಕೆಸರೆರಚಾಟದಲ್ಲೇ ಮುಗಿದುಹೋಗುತ್ತಿದೆ. ಬೌದ್ಧಿಕ ಶಕ್ತಿ ಹಾಗೂ ನೈಸರ್ಗಿಕ ಸಂಪನ್ಮೂಲ ವಿಪುಲವಾಗಿರುವ ಕ್ಷೇತ್ರದಲ್ಲಿ, ಅಭಿವೃದ್ಧಿಯ ಪಥಕ್ಕೆ ಅಡ್ಡಗೋಡೆಗಳು ಸವಾಲಾಗಿವೆ. ಕ್ಷೇತ್ರದ ಸಮಸ್ಯೆಯನ್ನು ಕೇಂದ್ರದವರೆಗೆ ತಲುಪಿಸುವ ಸಮರ್ಥ ಜನಪ್ರತಿನಿಧಿಯ ಆಯ್ಕೆಗೆ ಜನತಂತ್ರದ ಹಬ್ಬ ಅವಕಾಶ ಕಲ್ಪಿಸಿದೆ.

‘ಈ ಕ್ಷೇತ್ರದ ಸಂಸದನಿಗೆ ಎದುರಾಗುವ ಮೊದಲು ಸವಾಲೆಂದರೆ ಉತ್ತರ ಕನ್ನಡ ಜಿಲ್ಲೆಯ ವೈಶಿಷ್ಟ್ಯ ಅರ್ಥೈಸಿಕೊಳ್ಳುವುದು. ಅರಣ್ಯ, ಪಶ್ಚಿಮಘಟ್ಟ, ನದಿಗಳು, ಬೌದ್ಧಿಕ ಶ್ರಮಿಕರನ್ನು ಒಳಗೊಂಡಿರುವ ನೆಲ ಇದು. ಇಲ್ಲಿ ಬರುವ ಯಾವುದೇ ಕೈಗಾರಿಕೆ, ಆರ್ಥಿಕ ಚಟುವಟಿಕೆಗಳು ಇವುಗಳ ಆಧಾರಿತವಾಗಿಯೇ ಬರಬೇಕು. ಈವರೆಗೆ ಅನುಷ್ಠಾನಗೊಂಡಿರುವ ಯಾವ ಯೋಜನೆಗಳೂ ಇದಕ್ಕೆ ಪೂರಕವಾಗಿಲ್ಲ ಎಂಬುದು ದುರಂತ’ ಎನ್ನುತ್ತಾರೆ ಚಿಂತಕ ಗಣೇಶ ಭಟ್ಟ ಉಪ್ಪೋಣಿ.

ADVERTISEMENT

‘ಅರಣ್ಯ ಎನ್ನುವುದು ಸರ್ಕಾರಿ ವ್ಯವಸ್ಥೆಯಡಿ ಸೇರಿದ ಮೇಲೆ ಅರಣ್ಯ ಮತ್ತು ಜನರ ನಡುವಿನ ಸಂಘರ್ಷ ವರ್ಷದಿಂದ ವರ್ಷಕ್ಕೆ ಉಲ್ಬಣಿಸುತ್ತಿದೆ. ಕೇಂದ್ರದಿಂದ ಇದಕ್ಕೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದ್ದರೂ, ಈ ಬಗ್ಗೆ ಯೋಚನೆಗಳೇ ನಡೆದಿಲ್ಲ. ಅರಣ್ಯ ಅವಲಂಬನೆ ಕಡಿಮೆ ಮಾಡಲು ಉದ್ಯೋಗ ಸೃಷ್ಟಿಯಾಗಿಲ್ಲ. ಇಲ್ಲಿನ ಉತ್ಪನ್ನಗಳನ್ನು ರಫ್ತು ಮಾಡುವ ಅವಕಾಶ ಸೃಷ್ಟಿಯಾಗಿಲ್ಲ. ಕರಾವಳಿಯ ಆರ್ಥಿಕತೆ ಮೀನುಗಾರಿಕೆಯ ಮೇಲೆ ಅವಲಂಬಿತ. ಮೀನುಗಾರರಿಗೆ ಉಚಿತ ಡೀಸೆಲ್ ಒದಗಿಸುವುದು ಮಾತ್ರ ಸರ್ಕಾರದ ಕರ್ತವ್ಯವಲ್ಲ. ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನವಾಗಬೆಕು’ ಎಂದು ಅವರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.

ಪ್ರತಿಭಾ ಪಲಾಯನ:

‘ಪ್ರತಿಭಾ ಪಲಾಯನ ಈ ಜಿಲ್ಲೆಗೆ ದೊಡ್ಡ ಹಿನ್ನಡೆ. ಇಲ್ಲಿ ಸಾಮಾನ್ಯವಾಗಿ ಮನೆಗೊಬ್ಬರು ಐ.ಟಿ ಎಂಜಿನಿಯರ್ ಇದ್ದಾರೆ. ಅರಣ್ಯ ಜಿಲ್ಲೆಯ ಆರ್ಥಿಕತೆ ಬೆಳೆಯಲು ಸೇವಾ ಕ್ಷೇತ್ರವೊಂದೇ ಪ್ರಮುಖ ಸಾಧನ. ಆದರೆ, ನೆರೆಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಂತೆ ಸೇವಾ ಕ್ಷೇತ್ರದ ಐಟಿ, ಬಿಟಿ, ನ್ಯಾನೊ ತಾಂತ್ರಿಕತೆಗೆ ಪೂರಕವಾದ ಉದ್ದಿಮೆ ತರುವ ಯಾವುದೇ ಗಂಭೀರ ಪ್ರಯತ್ನ ಆಗಿಲ್ಲ. ಇಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾಣುತ್ತದೆ’ ಎಂದುಜೆಡಿಎಸ್ ಮುಖಂಡ ಶಶಿಭೂಷಣ ಹೆಗಡೆ ಅಭಿಪ್ರಾಯಪಟ್ಟರು.

ಉತ್ತಮ ವಿಶ್ವವಿದ್ಯಾಲಯ ಸ್ಥಾಪನೆ, ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ, ಮೂಲ ಸೌಕರ್ಯ ಹೆಚ್ಚಿಸುವ ಚಿಂತನೆ ತುರ್ತಾಗಿ ಆಗಬೇಕಾಗಿದೆ. ಪ್ರವಾಸೋದ್ಯಮದ ಮೂಲಕ ಆರ್ಥಿಕ ಮಟ್ಟ ಉನ್ನತೀಕರಿಸುವ ಕ್ರಮ ಆಗಬೇಕಾಗಿದೆ. ಶೈಕ್ಷಣಿಕವಾಗಿ ಎತ್ತರಕ್ಕೆ ಏರಿಸುವ ಸಾಕಷ್ಟು ಸಾಧ್ಯತೆಗಳು ಇಲ್ಲಿವೆ’ ಎಂದು ವಿವರಿಸಿದರು.

* ಸರ್ಕಾರಗಳು ಉಚಿತಗಳನ್ನು ನೀಡಿ, ಜನರಿಗೆ ಆಮಿಷದ ಮೂಲಕ ಔದಾರ್ಯದ ಬದುಕು ಕೊಡುವ ಬದಲಾಗಿ, ದುಡಿಯುವ ಅವಕಾಶ ಸೃಷ್ಟಿಸಿಕೊಡಲು ಸಂಸದ ಯೋಚಿಸಬೇಕು

–ಗಣೇಶ ಭಟ್ಟ ಉಪ್ಪೋಣಿ, ಚಿಂತಕ

ಎಲ್ಲ ರೀತಿ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನೋವಿನ ಸಂಗತಿ

–ಶಶಿಭೂಷಣ ಹೆಗಡೆ, ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.