ADVERTISEMENT

‘ಕೈ’ ಜೋಡಿಸದ ಅತೃಪ್ತರು; ರಮೇಶ ಮೌನ

ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡ ಕಾಂಗ್ರೆಸ್‌ ಶಾಸಕ l ಫಲಿತಾಂಶ ಬರುವವರೆಗೆ ಕಾದು ನೋಡುವ ತಂತ್ರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:42 IST
Last Updated 26 ಏಪ್ರಿಲ್ 2019, 19:42 IST
ರಮೇಶ
ರಮೇಶ   

ಬೆಂಗಳೂರು: ಅತೃಪ್ತ ಶಾಸಕರು ತಮ್ಮೊಂದಿಗೆ ಕೈ ಜೋಡಿಸಬಹುದೆಂಬ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ, ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಯಾವೊಬ್ಬ ಶಾಸಕರೂ ಅವರ ಜೊತೆ ಗುರುತಿಸಿಕೊಳ್ಳಲು ಮುಂದಾಗದೇ ಇರುವುದರಿಂದ ಅವರು ಏಕಾಂಗಿಯಾಗಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ರಮೇಶ, ಬೆಳಗಾವಿಯಲ್ಲಿ ಪಕ್ಷದೊಳಗೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವರೆಗೂ ಕ್ಷೇತ್ರದಲ್ಲೇ (ಗೋಕಾಕ) ಉಳಿಯಲು ನಿರ್ಧರಿಸಿದ್ದಾರೆ ಎಂದು ರಮೇಶ ಅವರ ಆಪ್ತ ಮೂಲಗಳು ತಿಳಿಸಿವೆ.

ಈ ಮಧ್ಯೆ, ಗುರುವಾರ ತಡರಾತ್ರಿ ನಗರಕ್ಕೆ ಬಂದಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೊತೆ ಕೆಲ ಹೊತ್ತು ಚರ್ಚಿಸಿದ್ದಾರೆ. ಅಲ್ಲದೆ, ರಾಜಕೀಯ ಬೆಳವಣಿಗೆಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಶುಕ್ರವಾರ ನಗರದಲ್ಲಿರುವ ತಮ್ಮ ಸರ್ಕಾರಿ ನಿವಾಸಲ್ಲಿದ್ದ ರಮೇಶ ಅವರನ್ನು ಯಾವೊಬ್ಬ ಶಾಸಕರೂ ಭೇಟಿಯಾಗಿಲ್ಲ. ‘ನಾನೊಬ್ಬನೇ ರಾಜೀನಾಮೆ ನೀಡುವುದಿಲ್ಲ. ಗುಂಪಿನಲ್ಲಿ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿಕೆಗೆ ನೀಡಿದ್ದ ರಮೇಶ, ಯಾವುದೇ ಪ್ರತಿಕ್ರಿಯೆ ನೀಡದೆ ತಣ್ಣಗಾಗಿದ್ದಾರೆ.

‘ರಮೇಶ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ತ್ಯಜಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಜೊತೆ ಮಾತುಕತೆ ನಡೆಸಲು ಮುಂದಾಗಿಲ್ಲ.

ರಮೇಶ ನಡೆ ನೋಡಿ ಕ್ರಮ:‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ, ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಹಲವು ದಿನಗಳಿಂದ ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅಥವಾ ಪಕ್ಷದಲ್ಲಿಯೇ ಉಳಿದರೆ ಅವರಿಗೆ ಏನು ಕೆಲಸ ಕೊಡಬೇಕು ಎಂದು ಯೋಚಿಸುತ್ತಿದ್ದೇವೆ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಬೆಳಗಾವಿಯಲ್ಲಿ ಹೇಳಿದರು.

‘ಅವರು‌ ಗುರುವಾರ ಬೆಂಗಳೂರಲ್ಲೇ ಇದ್ದರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಶತಮಾನದ ಇತಿಹಾಸವಿರುವ ಪಕ್ಷ ಕಾಂಗ್ರೆಸ್. ನಾನು ಪಕ್ಷಕ್ಕೆ ಏನಾದರೂ ಮಾಡಿಬಿಡುತ್ತೇನೆ ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲದ ಮಾತು. ನನ್ನಂತಹ ಹಲವು ಮಂದಿ ಬಂದು ಹೋಗಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಪಕ್ಷದ ಮಟ್ಟಕ್ಕೆ ತರುವುದು ಸರಿಯಲ್ಲ’ ಎಂದರು.

ರಮೇಶ ಜಾರಕಿಹೊಳಿ ನಡೆ ನೋಡಿ ಕ್ರಮ

'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ, ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಹಲವು ದಿನಗಳಿಂದ ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟರೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅಥವಾ ಪಕ್ಷದಲ್ಲಿಯೇ ಉಳಿದರೆ ಅವರಿಗೆ ಏನು ಕೆಲಸ ಕೊಡಬೇಕು ಎಂದು ಯೋಚಿಸುತ್ತಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಶುಕ್ರವಾರ ಇಲ್ಲಿ ಹೇಳಿದರು.

‘ಅವರು‌ ಗುರುವಾರ ಬೆಂಗಳೂರಲ್ಲೇ ಇದ್ದರೂ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಶತಮಾನದ ಇತಿಹಾಸವಿರುವ ಪಕ್ಷ ಕಾಂಗ್ರೆಸ್. ನಾನು ಪಕ್ಷಕ್ಕೆ ಏನಾದರೂ ಮಾಡಿಬಿಡುತ್ತೇನೆ ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲದ ಮಾತು. ನನ್ನಂತಹ ಹಲವು ಮಂದಿ ಇಲ್ಲಿ ಬಂದು ಹೋಗಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಪಕ್ಷದ ಮಟ್ಟಕ್ಕೆ ತರುವುದು ಸರಿಯಲ್ಲ’ ಎಂದರು.

‘ನಾನು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಚರ್ಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದೆ, ಯಾವುದೇ ತೊಂದರೆ ಇಲ್ಲ. ಬಂಡಾಯ ಏಳುವವರನ್ನು ಪಕ್ಷ ಸರಿಪಡಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಸಭೆ ಇಂದು

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್‌ ರಾಜ್ಯ ನಾಯಕರ ಸಭೆ ಶನಿವಾರ ಸಂಜೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಕೂಡಾ ಭಾಗವಹಿಸಲಿದ್ದಾರೆ.

ಕುಂದಗೋಳಕ್ಕೆ ಕುಸುಮಾ ಶಿವಳ್ಳಿ ಹೆಸರನ್ನು ಪಕ್ಷ ಬಹುತೇಕ ಅಂತಿಮಗೊಳಿಸಿದೆ. ಆದರೆ, ಚಿಂಚೋಳಿ ಕ್ಷೇತ್ರದ ಟಿಕೆಟ್‌ಗಾಗಿ ಬಾಬುರಾವ್‌ ಚೌಹಾಣ್‌, ಸುಭಾಷ್ ರಾಠೋಡ್ ಮತ್ತು ಬಾಬು ಹೊನ್ನಾ ನಾಯಕ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ತಮಗೇ ಟಿಕೆಟ್‌ ನೀಡುವಂತೆ ಈ ಮೂವರೂ ಪ್ರಿಯಾಂಕ್‌ ಖರ್ಗೆ ನಿವಾಸಕ್ಕೆ ಎಡತಾಕುತ್ತಿದ್ದಾರೆ.

‘ರಾಜೀನಾಮೆ ಕೊಡಲು ಬಿಡಲ್ಲ’

‘ಕಾಂಗ್ರೆಸ್‌ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ರಾಜೀನಾಮೆ ಕೊಡಲು ಬಿಡೊಲ್ಲ’ ಎಂದು ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಹೇಳಿದ್ದಾರೆ.

ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಗಣೇಶ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಶುಕ್ರವಾರ ನಗರದಲ್ಲಿನ ತಮ್ಮ ಮನೆಗೆ ಬಂದಿದ್ದರು.

‘ರಾಜೀನಾಮೆ ನೀಡದಂತೆ ನಾನು ಜಾರಕಿಹೊಳಿ ಅವರ ಮನವೊಲಿಸುತ್ತೇನೆ’ ಎಂದರು.

ಅಮಾನತು ಹಿಂಪಡೆವ ವಿಶ್ವಾಸ

‘ಆನಂದ್‌ ಸಿಂಗ್‌ ನನಗೆ ಅಣ್ಣನ ಸಮಾನ. ಅವರಿಗಾಗಿ ನಾನು, ನನ್ನ ತಂದೆ ಬಹಳ ಕೆಲಸ ಮಾಡಿದ್ದೇವೆ. ಸಿಂಗ್‌ ಮತ್ತು ನನ್ನ ಮಧ್ಯೆ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮಾತನಾಡುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನೇನೂ ಮಾತನಾಡಲಾರೆ. ಕಾಂಗ್ರೆಸ್‌ ಪಕ್ಷ ನನ್ನ ಅಮಾನತು ಆದೇಶ ಹಿಂಪಡೆಯುವ ವಿಶ್ವಾಸ ಇದೆ’ ಎಂದು ಗಣೇಶ್‌ ಅವರು ಭರವಸೆ ವ್ಯಕ್ತಪಡಿಸಿದರು.

ಮಾಧ್ಯಮದವರ ಬಾಯಿಗೆ ಸಿಲುಕದಿರಿ

‘ಕುಟುಂಬದ ವಿಚಾರವನ್ನು ಮಾಧ್ಯಮಗಳ ಎದುರು ಚರ್ಚಿಸುವುದು ಬೇಡ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಇಬ್ಬರು ಸಹೋದರರಾದ ಶಾಸಕ ರಮೇಶ ಹಾಗೂ ಸಚಿವ ಸತೀಶ ಅವರಿಗೆ ಗೋಕಾಕ್‌ನಲ್ಲಿ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.