ADVERTISEMENT

ಮತದಾರರ ಪಟ್ಟಿಯಿಂದ ಜನಾರ್ದನ ರೆಡ್ಡಿ ಹೆಸರು ತಿರಸ್ಕೃತ: ದೂರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 15:11 IST
Last Updated 9 ಏಪ್ರಿಲ್ 2019, 15:11 IST
   

ಗದಗ: ‘ಗದಗ ವಿಧಾನಸಭಾ ಕ್ಷೇತ್ರದಲ್ಲಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು, ಸಮರ್ಪಕ ದಾಖಲೆಗಳು ಇದ್ದರೂ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ತಿರಸ್ಕರಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಿಸಲು ಸುಪ್ರೀಂಕೋರ್ಟ್‌ ನಿರ್ಬಂಧ ಇದೆ.ಈ ಹಿನ್ನೆಲೆಯಲ್ಲಿ ಅವರು ಗದುಗಿನಲ್ಲಿ ಶಾಸಕ ಬಿ.ಶ್ರೀರಾಮಲು ಒಡೆತನದ ನಿವಾಸದಲ್ಲಿ ವಾಸಿಸುತ್ತಿದ್ದು, ಬಳ್ಳಾರಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿ, ಗದುಗಿನಲ್ಲಿ ಸೇರ್ಪಡೆ ಮಾಡಲು ಮಾ.15ರಂದು ಅರ್ಜಿ ಸಲ್ಲಿಸಿದ್ದರು.ದಾಖಲೆಗಳನ್ನು ಪರಿಶೀಲಿಸಿ, ಮತದಾರರ ಗುರುತಿನ ಚೀಟಿ ಕೊಡುವುದಾಗಿ ಹೇಳಿದ್ದ ಅಧಿಕಾರಿಗಳು, ಕೊನೆಯ ಕ್ಷಣದಲ್ಲಿ, ಏ.4ರಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಹಾಗೂ ರಾಜಕೀಯ ಕೈವಾಡ ಇದೆ’ ಎಂದು ಆರೋಪಿಸಿದರು.

‘ಜನಾರ್ದನ ರೆಡ್ಡಿ ಅವರು, ಅರ್ಜಿಯೊಂದಿಗೆ ಸಲ್ಲಿಸಿದ್ದ ಬಾಡಿಗೆ ಕರಾರು ಪತ್ರದಲ್ಲಿ ಸಹಿ ಇರುವುದಿಲ್ಲ ಎಂಬ ಕಾರಣ ಮುಂದಿಟ್ಟು, ಅಧಿಕಾರಿಗಳು ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ಮತದಾನದ ಅವಕಾಶದಿಂದ ಅವರನ್ನು ವಂಚಿತರನ್ನಾಗಿ ಮಾಡಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ’ ಎಂದರು. ಎಂ.ಎಂ. ಹಿರೇಮಠ, ಎಸ್.ಎಚ್. ಶಿವನಗೌಡ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.