ADVERTISEMENT

ದೇವಾಲಯ ಸುತ್ತುತ್ತಾ ಅರ್ಷದ್‌ ರೋಡ್‌ ಶೋ

ಅಭ್ಯರ್ಥಿ ಜತೆ ನಮ್ಮ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:25 IST
Last Updated 3 ಮೇ 2019, 14:25 IST
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ದೊಡ್ಡ ನೆಕ್ಕುಂದಿಯಲ್ಲಿ ಶನಿವಾರ ಪ್ರಚಾರ ನಡೆಸಿದರು–ಪ್ರಜಾವಾಣಿ ಚಿತ್ರ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರು ದೊಡ್ಡ ನೆಕ್ಕುಂದಿಯಲ್ಲಿ ಶನಿವಾರ ಪ್ರಚಾರ ನಡೆಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಗಸದಲ್ಲಿಸೂರ್ಯನು ನಿಧಾನಕ್ಕೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡು ಜನರ ನೆತ್ತಿ ಸುಡಲು ಅಣಿಯಾಗುತ್ತಿದ್ದರೆ, ಇತ್ತ ಬಿಳಿ ಉಡುಗೆ ತೊಟ್ಟ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿರಿಜ್ವಾನ್‌ ಅರ್ಷದ್ ಪ್ರಚಾರಕ್ಕೆ ತೆರಳುವ ಅವಸರದಲ್ಲಿದ್ದರು...

ಉಪಾಹಾರ ಸೇವಿಸಿ, ಪತ್ರಿಕೆಗಳ ಮೇಲೆ ಕಣ್ಣಾಡಿಸಿದ ಬಳಿಕಬೆನ್ಸನ್‌ ಟೌನ್‌ನ ತಮ್ಮ ಮನೆಯಿಂದ ಬೆಳಿಗ್ಗೆ 7 ಗಂಟೆಗೆಹೊರಬಿದ್ದರು. ತಮಗಾಗಿಕಾದು ಕುಳಿತಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಕಾರ್ಯಕರ್ತರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಚುನಾವಣಾ ಪ್ರಚಾರದ ಕುರಿತು ಅವರೊಂದಿಗೆಸಣ್ಣ ಚರ್ಚೆ ನಡೆಸಿದರು.

ಬಳಿಕ ಕಾರು ಹತ್ತಿ ಬೆಂಬಲಿಗರೊಂದಿಗೆಗೋವಿಂದಪುರದ ಡೋಮಿನಿಕ್‌ ಶಾಲೆಯಲ್ಲಿ ನಿಗದಿಯಾಗಿದ್ದ, ಕ್ರೈಸ್ತ ಮುಖಂಡರ ಸಭೆಗೆ ತೆರಳಿದರು. ಈ ವೇಳೆ ಕಾರಿನ ಗಾಜು ಇಳಿಸಿ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈಮುಗಿದು ತಮ್ಮನ್ನು ಬೆಂಬಲಿಸುವಂತೆ ಕೋರಿಕೊಂಡರು. 8 ಗಂಟೆ ಸುಮಾರಿಗೆ ಶಾಲೆ ತಲುಪಿ, ಕ್ರೈಸ್ತ ಸಮುದಾಯದ ಪ್ರಮುಖರೊಂದಿಗೆ ಚರ್ಚಿಸಿ, ತಮ್ಮ ಕೈಹಿಡಿಯುವಂತೆ ಬೇಡಿಕೊಂಡರು.

ADVERTISEMENT

ದೇವರ ಮೊರೆ ಹೋದ ಅರ್ಷದ್‌: ಶನಿವಾರ ರಾಮನವಮಿ ಆದ್ದರಿಂದ ಅರ್ಷದ್‌ ದೇವರ ಮೊರೆ ಹೋದರು. ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಧುರನಗರ ಹಾಗೂ ಮಲ್ಲೇಶಪಾಳ್ಯದ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ತಮ್ಮನಾಯಕ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಬೆಂಬಲಿಗರು ದೇವರಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ಸುತ್ತಮುತ್ತಲಿದ್ದ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಬಳಿಕ ಅಲ್ಲಿಂದಮಹಾದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಗದೂರಿನ ಶ್ರೀರಾಮ ದೇವರ ದೇವಸ್ಥಾನಕ್ಕೆ ತೆರಳಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದೊಡ್ಡ ನೆಕ್ಕುಂದಿಯಲ್ಲಿ ರೋಡ್‌ ಶೋ: ಹಗದೂರಿನಿಂದ ಅವರು ದೊಡ್ಡ ನೆಕ್ಕುಂದಿಗೆ ಬಂದರು. ಅದ್ದೂರಿ ಸ್ವಾಗತ ನೀಡಲಾಯಿತು.ಬಿಸಿಲಿನ ಝಳದಿಂದ ಬಸವಳಿದಿದ್ದ ಅವರು ಜೆಡಿಎಸ್‌ ಮುಖಂಡ ಶ್ರೀಧರ ರೆಡ್ಡಿ ಮನೆಯಲ್ಲಿ ಸಿಹಿ ಭೋಜನ ಸವಿದರು. ಬಳಿಕ ರೋಡ್‌ ಶೋಗಾಗಿ ಸಿಂಗಾರಗೊಂಡು ನಿಂತಿದ್ದ, ತೆರೆದ ವಾಹನವನ್ನು ಹತ್ತಿ ಜನರತ್ತ ಕೈಬೀಸಿದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಟೋಪಿ ಧರಿಸಿದ್ದ ಕಾರ್ಯಕರ್ತರುರೋಡ್ ಶೋ ಉದ್ದಕ್ಕೂ ರಾಹುಲ್‌ ಗಾಂಧಿ ಹಾಗೂ ದೇವೇಗೌಡರ ಪರಘೋಷಣೆ ಕೂಗಿದರು. ಬಳಿಕ ಅಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಶ್ರೀಧರ ರೆಡ್ಡಿ ಮತ್ತು ಕಾಂಗ್ರೆಸ್‌ ಮುಖಂಡರುಸಾಥ್‌ ನೀಡಿದರು.

ಸಂಜೆ ಕಮ್ಮನಹಳ್ಳಿಯಲ್ಲಿ ಕ್ರೈಸ್ತ ಸಮುದಾಯದ ಮುಖಂಡರ ಸಭೆ ಮುಗಿಸಿಕೊಂಡು ದೊಮ್ಮಲೂರಿಗೆ ತೆರಳಿದರು. ಅಲ್ಲಿ ವಸತಿ ಸಂಕೀರ್ಣ ನಿವಾಸಿ ಒಕ್ಕೂಟಗಳ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ನಿವಾಸಿಗಳು ತಮ್ಮಸಮಸ್ಯೆಗಳನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು. ಅದನ್ನು ಸಮಾಧಾನದಿಂದ ಆಲಿಸಿದ ರಿಜ್ವಾನ್ ತಮ್ಮನ್ನು ಗೆಲ್ಲಿಸುವಂತೆಕೈಜೋಡಿಸಿ ಮನವಿ ಮಾಡಿದರು. ರಾತ್ರಿ 8 ಗಂಟೆಗೆ ಪ್ರಚಾರವನ್ನು ಅಂತ್ಯಗೊಳಿಸಿದರು.

ಕುಪ್ಪಳಿಸಿದ ಮೈತ್ರಿ ಕಾರ್ಯಕರ್ತರು

ಬೆಳಿಗ್ಗೆಯಿಂದಲೇ ದೊಡ್ಡ ನೆಕ್ಕುಂದಿಯ ಶ್ರೀಧರ ರೆಡ್ಡಿ ಮನೆ ಮುಂದೆ ಎರಡು ಪಕ್ಷಗಳ ಕಾರ್ಯಕರ್ತರು ಕಾದು ಕುಳಿತಿದ್ದರು. ರಿಜ್ವಾನ್‌ ಬರುತ್ತಿದ್ದಂತೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಧ್ವಜಗಳು ಹಾರಾಡಿದವು. ಬಿಸಿಲನ್ನೂ ಲೆಕ್ಕಿಸದೇಕಾರ್ಯಕರ್ತರು ಡೊಳ್ಳಿನ ಸದ್ದಿಗೆಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.